ಭಾರತದ ಹಿಂದೂಗಳು ಮತ್ತು ಮುಸ್ಲಿಮರ ಪೂರ್ವಜರು ಒಂದೇ, ಬ್ರಿಟಿಷರು ಭಿನ್ನಾಭಿಪ್ರಾಯ ಸೃಷ್ಟಿಸಿದರು: ಮೋಹನ್ ಭಾಗ್ವತ್

Update: 2021-09-07 08:40 GMT

ಮುಂಬೈ: ಭಾರತದಲ್ಲಿ ವಾಸಿಸುವ ಹಿಂದುಗಳು ಮತ್ತು ಮುಸ್ಲಿಮರ ಪೂರ್ವಜರು ಒಂದೇ ಆಗಿದ್ದಾರೆ ಆದರೆ ಬ್ರಿಟಿಷರು ಈ ಎರಡೂ ಸಮುದಾಯಗಳ ಜನರ ನಡುವೆ ತಪ್ಪು ಅಭಿಪ್ರಾಯಗಳನ್ನು ಸೃಷ್ಟಿಸಿದರು, ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.

"ರಾಷ್ಟ್ರ ಪ್ರಥಮ್- ರಾಷ್ಟ್ರ ಸರ್ವೋಪರಿ" ಎಂಬ ವಿಚಾರಸಂಕಿರಣದಲ್ಲಿ ಸೋಮವಾರ ಮಾತನಾಡಿದ ಭಾಗ್ವತ್,  "ಹಿಂದುಗಳ ಜತೆ ವಾಸಿಸಿದರೆ ನಿಮಗೆ ಏನೂ ದೊರಕದು ಎಂದು ಬ್ರಿಟಿಷರು ಮುಸ್ಲಿಮರಿಗೆ ಹೇಳಿದ್ದರು" ಎಂದು ಹೇಳಿಕೊಂಡರು.

"ಹಿಂದುಗಳನ್ನು ಮಾತ್ರ ಆರಿಸಲಾಗುತ್ತದೆ ಎಂದು ಬ್ರಿಟಿಷರು  ಮುಸ್ಲಿಮರಿಗೆ ಹೇಳಿ ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆಯಿರಿಸುವಂತೆ ಅವರಿಗೆ ಹೇಳಿದರು. ಭಾರತದಿಂದ ಇಸ್ಲಾಂ ನಾಪತ್ತೆಯಾಗುತ್ತದೆ ಎಂದೂ ಅವರು ಹೇಳಿದ್ದರು. ಆದರೆ ಹಾಗಾಗಿದೆಯೇ? ಇಲ್ಲ. ಮುಸ್ಲಿಮರಿಗೆ ಎಲ್ಲಾ ಹುದ್ದೆಗಳನ್ನೂ ಹೊಂದಬಹುದಾಗಿದೆ" ಎಂದು ಭಾಗ್ವತ್ ಹೇಳಿದರು.

"ಮುಸ್ಲಿಮರು ತೀವ್ರಗಾಮಿಗಳು ಎಂದು ಬ್ರಿಟಿಷರು ಹಿಂದುಗಳಿಗೆ ಹೇಳಿದರು. ಎರಡೂ ಕೋಮುಗಳು ಹೊಡೆದಾಡಿಕೊಳ್ಳುವಂತೆ ಅವರು ಮಾಡಿದರು. ಈ ನಂಬಿಕೆಯ ಕೊರತೆಯಿಂದಾಗಿ ಎರಡೂ ಸಮುದಾಯಗಳು ಪರಸ್ಪರ ದೂರವುಳಿಯುವಂತೆ ಮಾಡಿದರು. ಈ ಮನಃಸ್ಥಿತಿಯನ್ನು ಬದಲಾಯಿಸಬೇಕಿದೆ, ದೇಶದ ಪ್ರಗತಿಗಾಗಿ ಎರಡೂ ಸಮುದಾಯಗಳು ಜತೆಯಾಗಿ ಹೆಜ್ಜೆಯಿಡಬೇಕಿದೆ" ಎಂದು ಅವರು ಹೇಳಿದರು.

ಹಿಂದು ಎಂಬ ಪದ ಯಾವುದೇ ಜಾತಿ ಸೂಚಕವಲ್ಲ, ಬದಲು ಅದು ಒಂದು ಸಂಪ್ರದಾಯದ ಹೆಸರು ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಅಭಿವೃದ್ಧಿ ಹಾಗೂ ಏಳಿಗೆಯ ಉದ್ದೇಶವನ್ನು ಹೊಂದಿದೆ. ಈ ಅರ್ಥದಲ್ಲಿ ಪ್ರತಿಯೊಬ್ಬ ಭಾರತೀಯ ನಾಗರಿಕ ಒಬ್ಬ ಹಿಂದು, ಎಂದು ಅವರು  ಹೇಳಿದರು.

"ಇಲ್ಲಿ ಇನ್ನೊಬ್ಬರ ಅಭಿಪ್ರಾಯಗಳಿಗೆ ಅಗೌರವವಿಲ್ಲ, ಆದರೆ ನಾವು ಭಾರತದ ಸಾರ್ವಭೌಮತ್ವದ ಬಗ್ಗೆ ಯೋಚಿಸಬೇಕೇ ಹೊರತು ಮುಸ್ಲಿಂ ಸಾರ್ವಭೌಮತ್ವದ್ದಲ್ಲ. ಆಕ್ರಮಣಕಾರರಿಂದ ಭಾರತಕ್ಕೆ ಇಸ್ಲಾಂ ಬಂದಿತ್ತು. ಇದು ಇತಿಹಾಸ ಹಾಗೂ ಅದನ್ನು ಅಂತೆಯೇ ಹೇಳಬೇಕು. ಮುಸ್ಲಿಂ ಸಮಾಜದ ನಾಯಕತ್ವ ನಿರಂಕುಶ ವಿಚಾರಗಳನ್ನು ವಿರೋಧಿಸಬೇಕು" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News