ವಿದೇಶಿಯರು ಅಫ್ಘಾನ್‌ನಿಂದ ತೆರಳಲು ತಾಲಿಬಾನ್ ಅನುಮತಿ

Update: 2021-09-09 17:26 GMT

 ಕಾಬೂಲ್, ಸೆ.9: ಅಫ್ಘಾನ್‌ನಲ್ಲಿ ಉಳಿದುಕೊಂಡಿರುವ 200 ಅಮೆರಿಕನ್ನರೂ ಸೇರಿದಂತೆ ವಿದೇಶೀಯರು ದೇಶದಿಂದ ಹೊರತೆರಳಲು ತಾಲಿಬಾನ್ ಅನುಮತಿ ನೀಡಿದೆ ಎಂದು ಅಮೆರಿಕದ ಅಧಿಕಾರಿ ಹೇಳಿದ್ದಾರೆ.

 ವಿದೇಶೀಯರನ್ನು ಅಫ್ಘಾನ್‌ನಿಂದ ಸ್ಥಳಾಂತರಿಸಲು ವಿಮಾನ ಸಿದ್ಧವಾಗಿದ್ದು ಗುರುವಾರ ಕಾಬೂಲ್ ವಿಮಾನ ನಿಲ್ದಾಣದಿಂದ ಹೊರಡುವ ನಿರೀಕ್ಷೆಯಿದೆ . ವಿದೇಶೀಯರ ತೆರವು ಪ್ರಕ್ರಿಯೆಗೆ ಅವಕಾಶ ನೀಡುವಂತೆ ಅಫ್ಘಾನ್‌ನಲ್ಲಿ ಅಮೆರಿಕದ ವಿಶೇಷ ಪ್ರತಿನಿಧಿ ಝಲ್ಮಾಯ್ ಖಲಿಜಾದ್ ತಾಲಿಬಾನ್ ಮೇಲೆ ಒತ್ತಡ ಹೇರಿದ್ದರು ಎಂದು ಮೂಲಗಳು ಹೇಳಿವೆ. ಕಳೆದ ಹಲವು ದಿನಗಳಿಂದ ಮಝರ್ ಇ ಶರೀಫ್ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿರುವ ವಿದೇಶೀಯರೂ ಇದರಲ್ಲಿ ಸೆೀರಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಈ ಮಧ್ಯೆ, ಅಫ್ಘಾನ್‌ನಲ್ಲಿ ಸ್ಥಾಪನೆಯಾಗಿರುವ ನೂತನ ಸರಕಾರದ ಬಗ್ಗೆ ಹಲವು ದೇಶಗಳು ಎಚ್ಚರಿಕೆಯ ಪ್ರತಿಕ್ರಿಯೆ ನೀಡಿವೆ. ತಾಲಿಬಾನ್‌ಗಳು ಅಂತರಾಷ್ಟ್ರೀಯ ಸಮುದಾಯದ ಗೌರವಾನ್ವಿತ ಮತ್ತು ಮೌಲ್ಯಯುತ ಸದಸ್ಯರಾಗಿದ್ದಾರೆ ಎಂದು ಬೈಡನ್ ಆಡಳಿತದ ಯಾರೊಬ್ಬರೂ ಹೇಳುವುದಿಲ್ಲ ಎಂದು ಶ್ವೇತಭವನ ವಕ್ತಾರ ಜೆನ್ ಪ್ಸಾಕಿ ಹೇಳಿದ್ದಾರೆ.

ನೂತನ ಸರಕಾರದ ಬಗ್ಗೆ ವಿರೋಧ ಸೂಚಿಸಿರುವ ಯುರೋಪಿಯನ್ ಯೂನಿಯನ್, ಆದರೂ ಅಫ್ಘಾನ್‌ಗೆ ಮಾನವೀಯ ನೆರವು ಮುಂದುವರಿಯಲಿದೆ. ದೀರ್ಘಾವಧಿಯ ನೆರವು ತಾಲಿಬಾನ್ ಮೂಲಭೂತ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದನ್ನು ಅವಲಂಬಿಸಿದೆ ಎಂದು ಹೇಳಿದೆ.

 ಅಫ್ಘಾನ್‌ನ ನೂತನ ಸರಕಾರ ಹಿಂಸೆ ಮತ್ತು ತೀವ್ರವಾದವನ್ನು ತ್ಯಜಿಸಿ ಆ ದೇಶವು ಭದ್ರತೆ ಮತ್ತು ಸ್ಥಿರತೆ ಸಾಧಿಸಲು ನೆರವಾಗಲಿದೆ ಎಂದು ಆಶಿಸುವುದಾಗಿ ಸೌದಿ ಅರೇಬಿಯಾ ಹೇಳಿದೆ.

ಮಹಿಳೆಯರು ಕ್ರಿಕೆಟ್ ಆಡುವುದಕ್ಕೆ ನಿಷೇಧ

 ಅಫ್ಘಾನ್‌ನಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಯಾಗಿರುವ ಕ್ರಿಕೆಟ್ ಅಥವಾ ಇತರ ಆಟಗಳನ್ನು ಆಡಲು ಮಹಿಳೆಯರಿಗೆ ಅವಕಾಶ ನೀಡಲಾಗದು ಎಂದು ತಾಲಿಬಾನಿನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಹಿಳೆಯರು ಕ್ರಿಕೆಟ್ ಆಡುವ ಅಗತ್ಯವಿಲ್ಲ ಮತ್ತು ಕ್ರಿಕೆಟ್ ಆಡುವಾಗ ಅವರ ದೇಹದ ಭಾಗ ಕಾಣಿಸಿಕೊಳ್ಳಬಹುದು ಎಂದು ಆಸ್ಟ್ರೇಲಿಯಾದ ಎಸ್‌ಬಿಎಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ತಾಲಿಬಾನ್ ಅಧಿಕಾರಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ, ಮಹಿಳೆಯರು ಕ್ರೀಡೆಯಲ್ಲಿ ಪಾಲ್ಗೊಳ್ಳಲು ತಾಲಿಬಾನ್ ಅವಕಾಶ ನೀಡದಿದ್ದರೆ, ಅಫ್ಘಾನ್‌ನ ಪುರುಷರ ಕ್ರಿಕೆಟ್ ತಂಡದ ಎದುರು ಆಸ್ಟ್ರೇಲಿಯಾ ತಂಡ ಆಡಲಿರುವ ಕ್ರಿಕೆಟ್ ಸರಣಿ ರದ್ದಾಗಲಿದೆ ಎಂದು ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News