ಕೋವಿಡ್ ವಿರುದ್ಧದ ಹೋರಾಟದಲ್ಲಿ ಜಗತ್ತು ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ: ವಿಶ್ವಸಂಸ್ಥೆ ಎಚ್ಚರಿಕೆ‌

Update: 2021-09-11 16:23 GMT

ವಿಶ್ವಸಂಸ್ಥೆ, ಸೆ.11: ಜಗತ್ತು ತಪ್ಪು ದಿಕ್ಕಿನಲ್ಲಿ ಚಲಿಸುತ್ತಿದ್ದು ಎಲ್ಲಾ ದೇಶಗಳೂ ಕೋವಿಡ್-19 ಸಾಂಕ್ರಾಮಿಕ ಮತ್ತು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೊ ಗುಟೆರ್ರಸ್ ಆಗ್ರಹಿಸಿದ್ದಾರೆ.

 ‌
ಕೋವಿಡ್-19 ನಮ್ಮನ್ನು ಎಚ್ಚರಿಸುವ ಕರೆಗಂಟೆಯಾಗಿದೆ. ಆದರೆ ನಾವು ಅತಿಯಾದ ನಿದ್ರೆಯಲ್ಲಿದ್ದೇವೆ ಎಂದು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಗುಟೆರ್ರಸ್ ಹೇಳಿದರು. ವಿಶ್ವದ 2 ಅತ್ಯಧಿಕ ಮಾಲಿನ್ಯಕಾರಕ ದೇಶಗಳಾಗಿರುವ ಅಮೆರಿಕ ಮತ್ತು ಚೀನಾಗಳು ಹವಾಮಾನ ಬದಲಾವಣೆ ಸಮಸ್ಯೆಯ ಎದುರಿಗಿನ ಹೋರಾಟದಲ್ಲಿ ಇನ್ನಷ್ಟು ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದರು.

ಹವಾಮಾನಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯ, ಸಂಶೋಧನಾ ಕಾರ್ಯಗಳಿಗೆ ಅಮೆರಿಕ ಇನ್ನಷ್ಟು ಆರ್ಥಿಕ ನೆರವು ಒದಗಿಸಬೇಕು. ಹೊರಸೂಸುವಿಕೆ(ಎಮಿಷನ್) ಗೆ ಸಂಬಂಧಿಸಿ ಚೀನಾದಿಂದ ಹೆಚ್ಚುವರಿ ಪ್ರಯತ್ನದ ಅಗತ್ಯವಿದೆ.

 2022ರ ಪ್ರಥಮಾರ್ಧದೊಳಗೆ ಜಾಗತಿಕ ಜನಸಂಖ್ಯೆಯ ಶೇ.70 ರಷ್ಟು ಮಂದಿಗೆ ಲಸಿಕೆ ಹಾಕುವ ಗುರಿ ಮುಟ್ಟುವ ನಿಟ್ಟಿನಲ್ಲಿ ಲಸಿಕೆ ಉತ್ಪಾದಿಸುವ ದೇಶಗಳು ಉತ್ಪಾದನೆ ಹೆಚ್ಚಿಸುತ್ತಿಲ್ಲ. ಜೀವಕ್ಕೇ ಅಪಾಯವಿರುವ ಜಾಗತಿಕ ತುರ್ತುಪರಿಸ್ಥಿತಿಯ ಸಂದರ್ಭದಲ್ಲೂ ಒಟ್ಟಿಗೆ ಸಾಗುವ ಮತ್ತು ಸರ್ವರ ಒಳಿತಿಗಾಗಿ ಸಂಯುಕ್ತ ನಿರ್ಧಾರ ಕೈಗೊಳ್ಳುವುದರಲ್ಲಿ ನಮ್ಮ ಸಾಮೂಹಿಕ ವೈಫಲ್ಯವನ್ನು ಕೊರೋನ ಸಾಂಕ್ರಾಮಿಕ ಜಾಹೀರುಗೊಳಿಸಿದೆ ಎಂದವರು ಹೇಳಿದರು.

ನವೆಂಬರ್ನಲ್ಲಿ ಸ್ಕಾಟ್ಲ್ಯಾಂಡ್ ನಲ್ಲಿ ಆಯೋಜಿಸಲಾಗಿರುವ ಸಿಒಪಿ26 ಎಂದೇ ಕರೆಯಲಾಗುವ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯನ್ನು ಮುಂದೂಡಬೇಕೆಂಬ ಒತ್ತಾಯವನ್ನು ಇದೇ ವೇಳೆ ಅವರು ತಳ್ಳಿಹಾಕಿದ್ದಾರೆ. ಸಿಒಪಿ ಮುಂದೂಡುವುದು ಒಳ್ಳೆಯ ವಿಷಯವಲ್ಲ. ವಿಳಂಬಗಳು ಹಲವಿವೆ ಮತ್ತು ಇದು ಅತ್ಯಂತ ತುರ್ತು ವಿಷಯವಾಗಿದೆ ಎಂದು ಗುಟೆರಸ್ ಹೇಳಿದರು.

ಲಸಿಕೆಯ ಅಸಮಾನತೆ, ಕೋವಿಡ್ ಸಾಂಕ್ರಾಮಿಕದ ಹೆಚ್ಚಳ ಮತ್ತು ಪ್ರಯಾಣಕ್ಕೆ ಎದುರಾಗಿರುವ ಅಡಚಣೆಯಿಂದಾಗಿ ಕಾರ್ಯಕ್ರಮವನ್ನು ಮುಂದೂಡಬೇಕೆಂದು ಪರಿಸರ ಕಾರ್ಯಕರ್ತರು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News