ಗರಿಷ್ಠ ವೇಗದ ಮಿತಿಗೆ ಮದ್ರಾಸ್ ಹೈಕೋರ್ಟ್ 'ಸ್ಪೀಡ್‌ಬ್ರೇಕರ್'

Update: 2021-09-15 04:01 GMT

ಚೆನ್ನೈ, ಸೆ.15: ಹೆದ್ದಾರಿಗಳಲ್ಲಿ ವಾಹನಗಳ ಗರಿಷ್ಠ ವೇಗದ ಮಿತಿಯನ್ನು ಗಂಟೆಗೆ 120 ಕಿಲೋಮೀಟರ್‌ಗೆ ನಿಗದಿಪಡಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಮದ್ರಾಸ್ ಹೈಕೋರ್ಟ್ ತಳ್ಳಿಹಾಕಿದೆ.

ನ್ಯಾಯಮೂರ್ತಿ ಕೆ.ಕಿರುಬಾಕರಣ್ ಮತ್ತು ನ್ಯಾಯಮೂರ್ತಿ ಟಿ.ವಿ.ತಮಿಳ್‌ ಸೆಲ್ವಿ ಅವರನ್ನೊಳಗೊಂಡ ವಿಭಾಗೀಯ ಪೀಠ, 2018ರ ಎಪ್ರಿಲ್ 6 ದಿನಾಂಕದ ಅಧಿಸೂಚನೆಯನ್ನು ರದ್ದುಪಡಿಸಿ, ವೇಗದ ಮಿತಿಯನ್ನು ಇಳಿಸಿ ಹೊಸ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ತಮಿಳುನಾಡಿನ ಕಾಂಚಿಪುರಂನಲ್ಲಿ 2013ರ ಎಪ್ರಿಲ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡು ಶೇಕಡ 90ರಷ್ಟು ಅಂಗವೈಕಲ್ಯ ಅನುಭವಿಸುವಂತಾದ ದಂತ ವೈದ್ಯರೊಬ್ಬರಿಗೆ ಪರಿಹಾರ ಮೊತ್ತವನ್ನು 18.43 ಲಕ್ಷ ರೂಪಾಯಿಯಿಂದ 1.5 ಕೋಟಿ ರೂಪಾಯಿಗೆ ಹೆಚ್ಚಿಸಿ ಕೋರ್ಟ್ ಕಳೆದ ಮಾರ್ಚ್ 3ರಂದು ಮಧ್ಯಂತರ ತೀರ್ಪು ನೀಡಿತ್ತು.

ಗರಿಷ್ಠ ವೇಗದ ಮಿತಿಯನ್ನು ಗಂಟೆಗೆ 120 ಕಿಲೋಮೀಟರ್‌ಗೆ ಏರಿಸುವ 2018ರ ಅಧಿಸೂಚನೆಯನ್ನು ಮರು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವ ಜತೆಗೆ 12 ವಿಷಯಗಳ ಬಗ್ಗೆ ಸ್ಪಷ್ಟನೆ ಕೋರಿದೆ. ಇದಕ್ಕೂ ಮುನ್ನ ವೇಗದ ಮಿತಿ ಹೆಚ್ಚಿಸಿರುವ ತನ್ನ ನಿರ್ಧಾರವನ್ನು ಉತ್ತಮ ಎಂಜಿನ್ ಹಾಗೂ ಸುಧಾರಿತ ರಸ್ತೆ ಮೂಲ ಸೌಕರ್ಯದ ಕಾರಣ ನೀಡಿ ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿತ್ತು.

ಆದರೆ ಈ ವಾದವನ್ನು ತಳ್ಳಿಹಾಕಿರುವ ಹೈಕೋರ್ಟ್, ಉತ್ತಮ ಎಂಜಿನ್ ತಂತ್ರಜ್ಞಾನ ಹಾಗೂ ಸುಧಾರಿತ ರಸ್ತೆ ಮೂಲ ಸೌಕರ್ಯದ ಹೊರತಾಗಿಯೂ, ವಾಹನ ಚಾಲಕರು ರಸ್ತೆ ಸುರಕ್ಷತಾ ನಿಯಮಗಳಿಗೆ ಬದ್ಧರಾಗುವಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News