ಹಾಥರಸ್ ಅತ್ಯಾಚಾರಕ್ಕೆ ವರ್ಷ: ‘ನಿರ್ಭಯಾ’ಳಿಗಾಗಿ ಮಿಡಿದವರೆಲ್ಲಿ ಹೋದರು?

Update: 2021-09-16 05:45 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶ ಪ್ರತಿವರ್ಷ ನಿರ್ಭಯಾ ಪ್ರಕರಣವನ್ನು ಸ್ಮರಿಸುತ್ತದೆ. ಈ ಮೂಲಕ ಈ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಕುರಿತಂತೆ ಜಾಗೃತಿ ಮೂಡಿಸಲಾಗುತ್ತದೆ. ಸರಕಾರದ ನೇತೃತ್ವದಲ್ಲೇ ನಿರ್ಭಯಾ ಹೆಸರಲ್ಲಿ ಜಾಗೃತಿ ನಡೆಯುತ್ತಿರುವುದು ಗಮನಾರ್ಹವಾಗಿದೆ. ಇದೇ ಸಂದರ್ಭದಲ್ಲಿ ಹಾಥರಸ್‌ನಲ್ಲಿ ದಲಿತ ಮಹಿಳೆಯೊಬ್ಬಳ ಮೇಲೆ ನಡೆದ ಬರ್ಬರ ಅತ್ಯಾಚಾರ ಮತ್ತು ಕೊಲೆಗೂ ಒಂದು ವರ್ಷವಾಗಿದೆ. ಆದರೆ ಸರಕಾರ, ನಾಗರಿಕ ಸಮಾಜ ಈ ಅತ್ಯಾಚಾರ, ಕೊಲೆಯ ಬಗ್ಗೆ ವೌನವಾಗಿವೆ. ನಿರ್ಭಯಾ ಪ್ರಕರಣದಲ್ಲಿ ಸರಕಾರಕ್ಕಿರುವ, ಸರಕಾರಕ್ಕಿರುವ ಆಸಕ್ತಿ, ಕಾಳಜಿ ಹಾಥರಸ್ ಪ್ರಕರಣದಲ್ಲಿ ಯಾಕಿಲ್ಲ? ಎನ್ನುವ ಪ್ರಶ್ನೆ ಉತ್ತರವಿಲ್ಲದೆ ಬಿದ್ದುಕೊಂಡಿದೆ. ಈ ದೇಶದಲ್ಲಿ ಅತ್ಯಾಚಾರ ಸುದ್ದಿಯಾಗಬೇಕಾದರೆ, ಚರ್ಚೆಯಾಗಬೇಕಾದರೆ, ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆಯಾಗಬೇಕಾದರೆ ಕೆಲವು ಮಾನದಂಡಗಳಿವೆ ಎನ್ನುವುದು ಇದರಿಂದ ಬಹಿರಂಗವಾಗುತ್ತದೆ. ನಿರ್ಭಯಾ ಪ್ರಕರಣದಲ್ಲಿ ಸಂತ್ರಸ್ತೆ ವಿದ್ಯಾವಂತೆ ಮಾತ್ರವಲ್ಲ, ಘಟನೆ ನಡೆದಿರುವುದು ನಗರ ಪ್ರದೇಶದಲ್ಲಿ. ಇದೇ ಸಂದರ್ಭದಲ್ಲಿ ಆರೋಪಿಗಳು ಅವಿದ್ಯಾವಂತರು ಮಾತ್ರವಲ್ಲ, ಕೆಳಸ್ತರ ಸಮುದಾಯಕ್ಕೆ ಸೇರಿದ ಕಾರ್ಮಿಕರು. ಆದುದರಿಂದಲೇ ಪೊಲೀಸರು ಮಾತ್ರವಲ್ಲ, ರಾಜಕಾರಣಿಗಳೂ ಈ ಅತ್ಯಾಚಾರ ಕುರಿತಂತೆ ಆಸಕ್ತಿಯನ್ನು ತೋರಿಸಿದರು. ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿ, ಗಲ್ಲಿಗೇರಿಸಿಯೂ ಆಯಿತು. ಜೊತೆಗೆ ಸಂತ್ರಸ್ತೆಯ ಹೆಸರಿನಲ್ಲಿ ಮಹಿಳಾ ಜಾಗೃತಿಗಾಗಿ ನಿರ್ಭಯಾ ನಿಧಿಯನ್ನು ಸ್ಥಾಪಿಸಲಾಯಿತು. ಆದರೆ ನಿರ್ಭಯಾಳ ಮೇಲೆ ತೋರಿಸಿದ ಕಾಳಜಿಯನ್ನು ಹಾಥರಸ್‌ನ ಹೆಣ್ಣು ಮಗಳ ಮೇಲೆ ತೋರಿಸಲಿಲ್ಲ. ಹಾಥರಸ್ ಎನ್ನುವುದು ಉತ್ತರ ಪ್ರದೇಶದ ಒಂದು ಹಳ್ಳಿ. ಅತ್ಯಾಚಾರಕ್ಕೀಡಾಗಿ ಕೊಲೆಯಾದದ್ದು ದಲಿತ ಹೆಣ್ಣು ಮಗಳು. ಇದೇ ಸಂದರ್ಭದಲ್ಲಿ ಅತ್ಯಾಚಾರದ ಆರೋಪ ಹೊತ್ತವರು ಆ ಊರಿನ ಮೇಲ್ ಜಾತಿಯ ಜನರು. ನಿರ್ಭಯಾ ಪ್ರಕರಣದಲ್ಲಿ ಅತ್ಯಂತ ಚುರುಕಾಗಿ ಕಾರ್ಯನಿರ್ವಹಿಸಿದ್ದ ಕಾನೂನು ವ್ಯವಸ್ಥೆ ಹಾಥರಸ್ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ಕಾರ್ಯನಿರ್ವಹಿಸಿತು. ಅಂದರೆ, ಈ ದೇಶದಲ್ಲಿ ಅತ್ಯಾಚಾರ, ಕೊಲೆಗಳಿಗೆ ಮಿಡಿಯಬೇಕಾದರೆ ಸಂತ್ರಸ್ತರು ನಿರ್ದಿಷ್ಟ ಜಾತಿಗಳಿಗೆ ಸೇರಿರಬೇಕು ಅಥವಾ ಕೆಲವು ನಿರ್ದಿಷ್ಟ ಜಾತಿಗಳಿಗೆ ಸೇರಿರಬಾರದು ಎನ್ನುವುದನ್ನು ಪ್ರಕರಣ ಸ್ಪಷ್ಟವಾಗಿ ತಿಳಿಸುತ್ತದೆ.

 ನಿರ್ಭಯಾ ಪ್ರಕರಣ ಯಾವ ರೀತಿಯಲ್ಲೂ ರಾಜಕೀಯ ಬಣ್ಣ ಪಡೆದಿರಲಿಲ್ಲ. ಆಡಳಿತ ಪಕ್ಷ, ವಿರೋಧ ಪಕ್ಷ ಒಂದಾಗಿ ಆರೋಪಿಗಳ ವಿರುದ್ಧ ನಿಂತವು. ಆದುದರಿಂದಲೇ ಪೊಲೀಸ್ ಇಲಾಖೆಗೆ ಕಠಿಣ ಕ್ರಮ ತೆಗೆದುಕೊಳ್ಳಲು ಸಾಧ್ಯವಾಯಿತು. ನ್ಯಾಯವ್ಯವಸ್ಥೆಯೂ ಆರೋಪಿಗಳ ವಿರುದ್ಧ ತಕ್ಷಣ ತೀರ್ಪನ್ನು ನೀಡಲು ಸಾಧ್ಯವಾಯಿತು. ಆದರೆ ಹಾಥರಸ್ ಪ್ರಕರಣ ರಾಜಕೀಯ ವಲಯದೊಳಗೆ ಬಿರುಗಾಳಿಯನ್ನು ಎಬ್ಬಿಸಿತು. ಉತ್ತರ ಪ್ರದೇಶ ಸರಕಾರವೇ ಆರೋಪಿಗಳ ರಕ್ಷಣೆಗೆ ನಿಂತ ಆರೋಪಗಳು ಕೇಳಿ ಬಂದವು. ಆರೋಪಿಗಳನ್ನು ಬಂಧಿಸುವ ಬದಲಿಗೆ, ಪೊಲೀಸರ ಮೂಲಕ ಸಂತ್ರಸ್ತರ ಕುಟುಂಬಗಳಿಗೆ ದಿಗ್ಬಂಧನವನ್ನು ವಿಧಿಸಲಾಯಿತು. ಆರೋಪಿಗಳ ಮೇಲೆ ಮೊಕದ್ದಮೆ ದಾಖಲಿಸುವುದು ಪಕ್ಕಕ್ಕಿರಲಿ, ವರದಿ ಮಾಡಲು ತೆರಳಿದ ಪತ್ರಕರ್ತರ ಮೇಲೆಯೇ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಲಾಯಿತು. ಅತ್ಯಾಚಾರ ಆರೋಪಿಗಳು ಮುಕ್ತವಾಗಿ ಓಡಾಡುತ್ತಿದ್ದರೆ, ವರದಿ ಮಾಡಲು ತೆರಳಿದ ಪತ್ರಕರ್ತರು ಜೈಲಲ್ಲಿ ಕೊಳೆಯುತ್ತಿದ್ದರು. ನಿರ್ಭಯಾ ಪ್ರಕರಣದಲ್ಲಿ ಆರೋಪಿಗಳು, ಆರೋಪಿಗಳ ಕುಟುಂಬಗಳು ಬದುಕುವುದಕ್ಕೆ ಕಷ್ಟವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಹಾಥರಸ್ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಗಳು ಊರಲ್ಲಿ ಜೀವಿಸುವುದು ಕಷ್ಟವಾಯಿತು. ಸಂತ್ರಸ್ತ ಕುಟುಂಬವನ್ನೇ ತಪ್ಪಿತಸ್ಥರನ್ನಾಗಿ ಮಾಡುವ ಪ್ರಯತ್ನ ನಡೆಯಿತು. ಈಗಲೂ ಅದು ಮುಂದುವರಿದಿದೆ. ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಾಗುವ ಬದಲು ಹತ್ಯೆಗೀಡಾದ ಮಹಿಳೆಯ ಸೋದರನೇ ಜೈಲು ಪಾಲಾಗುವ ಸಾಧ್ಯತೆಗಳು ಕಾಣುತ್ತಿವೆ. ನಿರ್ಭಯಾ ಪ್ರಕರಣದಲ್ಲಿ ದೇಶದ ಪ್ರತಿಭಟನೆಯ ಪೊಳ್ಳುತನವನ್ನು ಹಾಥರಸ್ ಪ್ರಕರಣ ಬಯಲಿಗೆಳೆದಿದೆ. ಈ ದೇಶದಲ್ಲಿ ಕೆಳಜಾತಿ, ವರ್ಗಗಳಿಗೆ ಸೇರಿದ ಮಹಿಳೆಯರು ಅತ್ಯಾಚಾರಕ್ಕೊಳಗಾದರೆ ಅವರು ಅದನ್ನು ಪ್ರತಿರೋಧಿಸಬಾರದು, ಪ್ರತಿರೋಧಿಸಿದರೆ ಸಂತ್ರಸ್ತರೇ ಶಿಕ್ಷೆ ಅನುಭವಿಸಬೇಕಾಗುತ್ತದೆ ಎನ್ನುವುದನ್ನು ಹಾಥರಸ್ ಪ್ರಕರಣ ಹೇಳುತ್ತಿದೆ.

ಪ್ರಕರಣ ನಡೆದ ಒಂದು ವರ್ಷದ ಬಳಿಕವೂ ಸಂತ್ರಸ್ತ ಕುಟುಂಬ ಗ್ರಾಮದ ಮೇಲ್‌ಜಾತಿಯ ಜನರಿಂದ ಬೆದರಿಕೆಗಳನ್ನು ಎದುರಿಸುತ್ತಿದೆ. ಈಗಲೂ ಕುಟುಂಬ ಸದಸ್ಯರು ಪೊಲೀಸರ ಕಣ್ಗಾವಲಲ್ಲೇ ಬದುಕುತ್ತಿದ್ದಾರೆ. ಸ್ವತಂತ್ರವಾಗಿ ದಿನಗೂಲಿ ಮಾಡಿ ಬದುಕುವ ಸ್ಥಿತಿಯಲ್ಲಿ ಅವರಿಲ್ಲ. ‘ದೇಶದ್ರೋಹಿಗಳು’ ‘ಹಿಂದೂ ವಿರೋಧಿಗಳು’ ಎಂಬಿತ್ಯಾದಿ ಹಣೆಪಟ್ಟಿಗಳೊಂದಿಗೆ ಅವರು ದಿನದೂಡುತ್ತಿದ್ದಾರೆ. ಇತ್ತ ನ್ಯಾಯಾಲಯದಲ್ಲೂ ಅವರಿಗೆ ನ್ಯಾಯ ಸಿಗುವ ಪೂರ್ಣ ಭರವಸೆಯಿಲ್ಲ. 2021 ಮಾರ್ಚ್‌ನಲ್ಲಿ ಕುಡುಕ ವಕೀಲನೋರ್ವ ನ್ಯಾಯಾಲಯದಲ್ಲಿ ಸಂತ್ರಸ್ತರ ನ್ಯಾಯವಾದಿ ಆಗಿರುವ ಸೀಮಾ ಕುಶ್ವಾಹ ಅವರಿಗೆ ಬೆದರಿಕೆಯನ್ನೊಡ್ಡಿದ್ದ. ಹತ್ತು ನಿಮಿಷಗಳ ಕಾಲ ಸ್ಥಗಿತಗೊಂಡಿದ್ದ ವಿಚಾರಣೆ ಮತ್ತೆ ಆರಂಭವಾದಾಗ ನ್ಯಾಯಾಲಯಕ್ಕೆ ನುಗ್ಗಿದ್ದ ಗುಂಪೊಂದು ಕುಶ್ವಾಹ ಮತ್ತು ಅಂದು ತನ್ನ ಹೇಳಿಕೆಯನ್ನು ದಾಖಲಿಸಿದ್ದ ಪ್ರಕರಣದಲ್ಲಿನ ಮೊದಲ ಸಾಕ್ಷಿಯಾದ ಮೃತ ಯುವತಿಯ ಸೋದರನಿಗೂ ಬೆದರಿಕೆಯೊಡ್ಡಿತ್ತು. ಈ ವರ್ಷದ ಜನವರಿಯಲ್ಲಿ ಹಾಥರಸ್‌ನ ವಿಶೇಷ ಎಸ್‌ಸಿ/ಎಸ್‌ಟಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭಗೊಂಡಿದ್ದು, ಈವರೆಗೆ ಸುಮಾರು 20 ವಿಚಾರಣೆಗಳು ನಡೆದಿವೆ. ಪ್ರಾಸಿಕ್ಯೂಷನ್ ಪರ ಸಾಕ್ಷಿಗಳ ಹೇಳಿಕೆಗಳನ್ನು ನ್ಯಾಯಾಲಯವು ಈಗ ದಾಖಲಿಸಿಕೊಳ್ಳುತ್ತಿದೆ. ಕುಟುಂಬದ ‘ಗೌರವ’ವನ್ನು ರಕ್ಷಿಸಲು ಯುವತಿಯ ಸೋದರನೇ ಆಕೆಯನ್ನು ಕೊಲೆ ಮಾಡಿರುವುದಾಗಿ ವಾದಿಸುತ್ತಿರುವ ಪ್ರತಿವಾದಿ ಪರ ವಕೀಲರು ಅಕ್ಟೋಬರ್‌ನಲ್ಲಿ ತನ್ನ ಸಾಕ್ಷಿಗಳನ್ನಾಗಿ ನಾಲ್ವರು ಆರೋಪಿಗಳನ್ನು ಹಾಜರು ಪಡಿಸಲಿದ್ದಾರೆ.

ನ್ಯಾಯ ವಿಳಂಬ ಪ್ರಕರಣವನ್ನು ಸಂಪೂರ್ಣವಾಗಿ ದುರ್ಬಲಗೊಳಿಸಿದೆ. ಅತ್ಯಾಚಾರಕ್ಕೊಳಗಾಗಿ, ಹತ್ಯೆಗೀಡಾದ ತರುಣಿಯ ಮೃತದೇಹವನ್ನು ಪೊಲೀಸರೇ ಅತುರಾತುರವಾಗಿ ದಹಿಸಿ ಹಾಕಿರುವುದು ತನಿಖೆಗೆ ಬಹುದೊಡ್ಡ ಅಡ್ಡಿಯಾಗಿದೆ. ಎಲ್ಲ ವಿರೋಧಗಳನ್ನು ಎದುರಿಸಿಕೊಂಡು ಸಂತ್ರಸ್ತರ ಪರವಾಗಿ ಸಾಕ್ಷಿ ಹೇಳುವುದು ಅಷ್ಟು ಸುಲಭದ ಕೆಲಸವಲ್ಲ. ಒಟ್ಟಿನಲ್ಲಿ ನ್ಯಾಯಕ್ಕಾಗಿ ಕುಟುಂಬ ಹೋರಾಡುತ್ತಿದೆಯೇನೋ ನಿಜ. ಆದರೆ ಆರೋಪಿಗಳಿಗೆ ಶಿಕ್ಷೆಯಾಗುತ್ತದೆ ಎನ್ನುವ ನಂಬಿಕೆ ಕುಟುಂಬಕ್ಕೂ ಇದ್ದಂತಿಲ್ಲ. ಮಹಿಳೆಯರ ಮೇಲೆ ನಡೆಯುವ ಎಲ್ಲ ದೌರ್ಜನ್ಯಗಳನ್ನು ಒಂದೇ ಮಾನದಂಡದಲ್ಲಿ ನೋಡುವಂತಿಲ್ಲ ಎನ್ನುವುದನ್ನು ಹಾಥರಸ್ ಪ್ರಕರಣ ಹೇಳುತ್ತಿದೆ. ಈ ದೇಶದಲ್ಲಿ ಇನ್ನೂ ಯಾಕೆ ಮೀಸಲಾತಿ ಮುಂದುವರಿಯಬೇಕು? ಈ ದೇಶದಲ್ಲಿ ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿದೆಯೇ? ದಲಿತರ ಮೇಲಿನ ದೌರ್ಜನ್ಯಗಳಿಗಾಗಿರುವ ವಿಶೇಷ ಕಾನೂನನ್ನು ದುರ್ಬಲಗೊಳಿಸಬೇಕು ಎಂದೆಲ್ಲ ಮಾತನಾಡುವವರಿಗೆ ಹಾಥರಸ್ ಪ್ರಕರಣದಲ್ಲಿ ಕಲಿಯುವುದು ಬಹಳಷ್ಟಿದೆ. ದೇಶದ ನ್ಯಾಯ ವ್ಯವಸ್ಥೆಯ ನಿಜಬಣ್ಣವನ್ನು ಹಾಥರಸ್ ಪ್ರಕರಣ ಬಯಲು ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News