ಪೊಲೀಸ್ ಠಾಣೆಗೆ ಹೋಗಲು ಜನ ಯಾಕೆ ಹೆದರುತ್ತಾರೆ?

Update: 2021-09-15 17:54 GMT

ಪೊಲೀಸ್ ಪಡೆಯ ಸುಧಾರಣೆಗೆ ವೇತನ ಶ್ರೇಣಿಯಲ್ಲಿ ಏರಿಕೆ ಹಾಗೂ ಭಡ್ತಿ ಅವಕಾಶಗಳು ಅವಶ್ಯಕವಾದರೂ ಪೊಲೀಸರ ಮಾನಸಿಕ ಮಟ್ಟದಲ್ಲಿ ಆಗಬೇಕಾದ ಸುಧಾರಣೆಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದಿಲ್ಲ. ಜನರು ಯಾಕೆ ಪೊಲೀಸ್ ಠಾಣೆಗಳಿಗೆ ಹೋಗಲು ಅಥವಾ ಪೊಲೀಸ್ ಪಡೆಯ ಕೆಳಹಂತದ ಸಿಬ್ಬಂದಿಯ ಜೊತೆಗೆ ವ್ಯವಹರಿಸಲು ಹೆದರುತ್ತಾರೆ?

 ಈ ಪ್ರಶ್ನೆಗೆ ಉತ್ತರ ಸಂಖ್ಯೆಗಳಲ್ಲಿದೆ: 2015ರ ಎಪ್ರಿಲ್ 1 ಮತ್ತು ನವೆಂಬರ್ 30ರ ನಡುವೆ ಎಂಟು ತಿಂಗಳ ಅವಧಿಯಲ್ಲಿ ಪೊಲೀಸ್ ದಾಖಲೆಗಳಲ್ಲಿ 25,357 ಪ್ರಕರಣಗಳನ್ನು ನೋಂದಾಯಿಸಲಾಯಿತು. ಇವುಗಳಲ್ಲಿ 111 ಪೊಲೀಸ್ ಕಸ್ಟಡಿ ಸಾವುಗಳು, ಪೊಲೀಸ್ ಕಸ್ಟಡಿಯಲ್ಲಿ ನೀಡಲಾದ ಚಿತ್ರಹಿಂಸೆಯ 330 ಪ್ರಕರಣಗಳು ಮತ್ತು ಇತರ 24,916 ಪ್ರಕರಣಗಳು ಸೇರಿವೆ. ಇದಕ್ಕೆ ಹೋಲಿಸಿದಾಗ, ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯನ್ ಇನಿಸ್ಟಿಟ್ಯೂಟ್ ಆಫ್ ಕ್ರಿಮಿನಾಲಜಿಯ ಪ್ರಕಾರ 1989-90 ಮತ್ತು 2010-11ರ ನಡುವೆ (20 ವರ್ಷಗಳ ಅವಧಿಯಲ್ಲಿ) ಪೊಲೀಸ್ ಕಸ್ಟಡಿಯಲ್ಲಿ ಮತ್ತು ಕಸ್ಟಡಿಗೆ ಸಂಬಂಧಿಸಿದ ಕಾರ್ಯಾಚರಣೆಗಳಲ್ಲಿ ಸಂಭವಿಸಿದ ಸಾವುಗಳ ಸಂಖ್ಯೆ 700. ಯು.ಕೆ., ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಒಟ್ಟು ಪೊಲೀಸ್ ಕಸ್ಟಡಿ ಸಾವುಗಳ ಸಂಖ್ಯೆ, 1990ರಿಂದ 2015ರ ವರೆಗಿನ 25ವರ್ಷಗಳ ಅವಧಿಯಲ್ಲಿ 1,542. ಅಮೆರಿಕದಲ್ಲಿ ಬ್ಯೂರೋ ಆಫ್ ಜಸ್ಟಿಸ್ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ 2001 ಮತ್ತು 2007ರ ನಡುವೆ ದೇಶದ ಜೈಲುವಾಸಿಗಳಲ್ಲಿ ಮೃತಪಟ್ಟವರ ಸಂಖ್ಯೆ 21,936. ಈ ಅಂಕಿ-ಸಂಖ್ಯೆಗಳನ್ನು ಹೋಲಿಸಿದಾಗ ಭಾರತದಲ್ಲಿ ಪೊಲೀಸ್ ಕಸ್ಟಡಿಗೆ ಸಂಬಂಧಿಸಿ ಸಂಭವಿಸಿರುವ ಸಾವುಗಳ ಸಂಖ್ಯೆ ಇಲ್ಲಿ ಉಲ್ಲೇಖಿಸಲಾಗಿರುವ ದೇಶಗಳಲ್ಲಿ ಸಂಭವಿಸುವ ಒಟ್ಟು ಕಸ್ಟಡಿ ಸಂಬಂಧಿತ ಸಾವುಗಳ ಸಂಖ್ಯೆಗಿಂತ ಹೆಚ್ಚು ಎನ್ನುವುದು ತಿಳಿಯುತ್ತದೆ.

ಜನಸಾಮಾನ್ಯರ ಮನಸ್ಸಿನಲ್ಲಿ ಏಳುವ ಒಂದು ಪ್ರಶ್ನೆ ಒಬ್ಬ ಮನುಷ್ಯ ಯಾವುದೇ ರೀತಿಯ ಪಶ್ಚಾತ್ತಾಪ ಪ್ರಜ್ಞೆ ಇಲ್ಲದೆ ಇನ್ನೊಬ್ಬ ಮನುಷ್ಯನ ಮೇಲೆ ಅದು ಹೇಗೆ ಅಷ್ಟೊಂದು ಹಿಂಸೆ ಎಸಗಬಲ್ಲ? ಒಂದು ಪ್ರಯೋಗ ಈ ಪ್ರಶ್ನೆಗೆ ಉತ್ತರ ನೀಡುತ್ತದೆ. ಅದು ಸ್ಟಾನ್‌ಫರ್ಡ್ ಜೈಲು ಪ್ರಯೋಗ. ಈ ಪ್ರಯೋಗಕ್ಕೆ ಒಳಗಾಗಲು ಒಪ್ಪಿಅರ್ಜಿ ಹಾಕಿಕೊಂಡವರನ್ನು ಎರಡು ತಂಡಗಳಾಗಿ ವಿಂಗಡಿಸಲಾಯಿತು: ಜೈಲು ಗಾರ್ಡುಗಳು ಮತ್ತು ಕೈದಿಗಳು. ಒತ್ತಡಕ್ಕೊಳಗಾದ ಜೈಲು ಗಾರ್ಡುಗಳ ಪಾತ್ರ ವಹಿಸಿದವರು ಕೈದಿಗಳ ಪಾತ್ರ ವಹಿಸಿದವರಿಗೆ ಚಿತ್ರಹಿಂಸೆ ನೀಡಲು, ಅವರನ್ನು ಶೋಷಿಸಲು ಆರಂಭಿಸಿದರು. ಅಧಿಕಾರಕ್ಕೆ ಎಷ್ಟು ವಿಧೇಯತೆ ತೋರುತ್ತಾರೆ ಎಂಬುದನ್ನು ಕಂಡುಹಿಡಿಯುವ ಪ್ರಯೋಗ ಇದಾಗಿತ್ತು. ಜನರನ್ನು ಬಲಾತ್ಕರಿಸಿದಲ್ಲಿ ಅವರನ್ನು ಹಿಂಸಿಸಿದಲ್ಲಿ ಅವರು ವಿಧೇಯ ತೋರುತ್ತಾರೆಂಬುದು ಈ ಪ್ರಯೋಗದಿಂದ ತಿಳಿದುಬಂತು. 'ಬಲಿಪಶು'ವಿನ ಮೇಲೆ ಶೇ. 65ಮಂದಿ ಗಾರ್ಡುಗಳು ಗರಿಷ್ಠ ಮಟ್ಟದ ಹಿಂಸೆಯನ್ನು ಪ್ರಯೋಗಿಸಿದರು. ಉಳಿದ ಶೇ. 35 ಮಂದಿ ಒಂದು ನಿರ್ದಿಷ್ಟ ಮಟ್ಟದ ಚಿತ್ರಹಿಂಸೆ ನೀಡುವುದರಲ್ಲೇ ಉಳಿದರು. ಯೇಲ್ ವಿಶ್ವವಿದ್ಯಾನಿಲಯದ ಮನಶಾಸ್ತ್ರಜ್ಞ ಸ್ಟಾನ್ಲಿ ಮಿಲ್‌ಗ್ರಾಮ್ ನಡೆಸಿದ ಈ ಪ್ರಯೋಗದ ಹಿನ್ನೆಲೆಯಲ್ಲಿ ಭಾರತೀಯ ಪೊಲೀಸ್ ಪಡೆಯ ಕೆಲವು ಅಂಶಗಳನ್ನು ಗಮನಿಸಬಹುದಾಗಿದೆ.

ಭಾರತದ ಪೊಲೀಸ್ ಪಡೆಯಲ್ಲಿ ಕೆಳಹಂತದ ಪೊಲೀಸ್ ಸಿಬ್ಬಂದಿ ಅವರ ಮೇಲಿನ ಹಂತದ ಅಧಿಕಾರಿಗಳಿಂದ ಕೆಟ್ಟ ಮಾತುಗಳು, ಬೈಗುಳಕ್ಕೆ ಗುರಿಯಾಗುತ್ತಾರೆ. ಈ ಹಂತದ ಹಲವು ಸಿಬ್ಬಂದಿಯನ್ನು ವ್ಯಕ್ತಿಗಳು/ಮನುಷ್ಯರು ಎಂದೇ ಪರಿಗಣಿಸಲಾಗುವುದಿಲ್ಲ ಇವರನ್ನು ಹಿರಿಯ ಅಧಿಕಾರಿಗಳು ಅನುಕಂಪದಿಂದ ನೋಡುವುದಿಲ್ಲ ಮತ್ತು ಇವರು ಅಮಾನವೀಯ ಪರಿಸ್ಥಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಪೊಲೀಸ್ ಅತಿರೇಕಗಳನ್ನು ಸಮರ್ಥಿಸಲು ಸಾಧ್ಯವೇ ಇಲ್ಲ. ಆದರೆ ಪೊಲೀಸ್ ಪೇದೆಗಳಿಗೆ ಅವರ ಮೇಲಧಿಕಾರಿಗಳು ನಡೆಸಿಕೊಳ್ಳುವ ರೀತಿ ಪೊಲೀಸರು ಸಾರ್ವಜನಿಕರೊಂದಿಗೆ ವರ್ತಿಸುವ, ಸಂವಹಿಸುವ ರೀತಿಯ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಹಲವು ಪೊಲೀಸರು ಈಗ ನಾಗರಿಕರೊಂದಿಗೆ ಹೇಗೆ ವರ್ತಿಸುತ್ತಿದ್ದಾರೋ ಅವರು ಹಾಗೆ ವರ್ತಿಸಲು ಅವರು ಕೆಲಸ ಮಾಡುವ ಪರಿಸರಗಳು ಸಾಮರಸ್ಯ ಪೂರಿತವಾಗಿಲ್ಲದಿರುವುದೇ ಕಾರಣ. ಅವರ ಮೇಲಧಿಕಾರಿಗಳ ಜತೆ ಅವರ ಸಂಬಂಧ ಒತ್ತಡದಿಂದ ಕೂಡಿದೆ ಮತ್ತು ಭಟ್ಟಂಗಿತನದ್ದಾಗಿದೆ (ಸೈಕೋಫ್ಯಾಂಟಿಕ್).

ಒಂದು ಆರೋಗ್ಯಪೂರ್ಣ ಪೊಲೀಸ್ ವ್ಯವಸ್ಥೆಗಾಗಿ ಏನು ಸುಧಾರಣೆಗಳನ್ನು ಮಾಡಬೇಕೆಂದು ಹಲವು ಸಮಿತಿಗಳು ಹಲವು ಶಿಫಾರಸುಗಳನ್ನು ಮಾಡಿವೆ. ಆದರೆ ಕೇಂದ್ರ ಸರಕಾರವಾಗಲೀ, ರಾಜ್ಯ ಸರಕಾರಗಳಾಗಲೀ ಈ ಶಿಫಾರಸುಗಳನ್ನು ಅನುಷ್ಠಾನಗೊಳಿಸಲಿಲ್ಲ. ಅಂತಿಮವಾಗಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ಈ ಸರಕಾರಗಳನ್ನು ತರಾಟೆಗೆ ತೆಗೆದುಕೊಳ್ಳಬೇಕಾಯಿತು. ನಮ್ಮ ದೇಶದ ಪೊಲೀಸ್ ಕಾಯ್ದೆಯ ಇತಿಹಾಸವನ್ನು ಗಮನಿಸಿದರೆ ನಮ್ಮ ಸಮಸ್ಯೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎಂಬುದು ಸ್ಪಷ್ಟವಾಗುತ್ತದೆ. 1857ರ ದಂಗೆಯ ಬಳಿಕ ಬ್ರಿಟಿಷರು ಮಾಡಿದ 1861ರ ಪೊಲೀಸ್ ಕಾಯ್ದೆಯ ಉದ್ದೇಶ ದೇಶದಲ್ಲಿ ದಕ್ಷ ಆಡಳಿತವನ್ನು ತರುವುದರ ಜತೆಗೆ ಮುಂದೆ ಇತರ ಯಾವುದೇ ದಂಗೆಗಳು ನಡೆಯದಂತೆ ತಡೆಯುವುದಾಗಿತ್ತು. ಅಂದರೆ ಅಧಿಕಾರದಲ್ಲಿರುವವರು ಹೇಳಿದ್ದನ್ನು ಪೋಲಿಸರು ಮಾಡಲೇಬೇಕು ಎಂಬುದು ಇದರರ್ಥವಾಗಿತ್ತು. ಆದರೆ ಅಮೆರಿಕದಲ್ಲಿ ಮಾಡಿದಂತೆ ಜೈಲು ವ್ಯವಸ್ಥೆ ಖಾಸಗೀಕರಣ ಮತ್ತು ಪೊಲೀಸ್ ವ್ಯವಸ್ಥೆಯ ಮಿಲಿಟರೀಕರಣ ಭಾರತದ ಪೊಲೀಸ್ ವ್ಯವಸ್ಥೆಯ ಸಮಸ್ಯೆಗೆ ಪರಿಹಾರ ಎಂದು ಪರಿಗಣಿಸುವುದು ಕೂಡ ಗಂಡಾಂತರಕಾರಿ ಆದೀತು. ಭಾರತದ ಪೊಲೀಸ್ ಪಡೆಯಲ್ಲಿ ಯಾವುದೇ ಮುಖ್ಯ ಉದಾಹರಣೆಗೆ ಬೇಕಾಗಿರುವುದು ರಾಜಕೀಯ ಇಚ್ಛಾಶಕ್ತಿಯೇ ಹೊರತು ಬೇರೇನೂ ಅಲ್ಲ.

ಕೃಪೆ: TheHindu
(ಲೇಖಕರು ಮುಂಬೈಯ ಐಐಟಿಯಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ.)

Writer - ವಿಕ್ರಮ್ ವಿನ್ಸೆಂಟ್

contributor

Editor - ವಿಕ್ರಮ್ ವಿನ್ಸೆಂಟ್

contributor

Similar News