ಬೆಂಗಳೂರು ನಗರದ ಹಲವೆಡೆ ಧಾರಾಕಾರ ಮಳೆ

Update: 2021-09-20 13:26 GMT

ಬೆಂಗಳೂರು, ಸೆ.20: ನಗರದಲ್ಲಿ ಮಧ್ಯಾಹ್ನ ಅನಿರೀಕ್ಷಿತವಾಗಿ ಧಾರಾಕಾರ ಮಳೆಯಾಗಿದ್ದು, ರಸ್ತೆಯಲ್ಲಿ ಮಂಡಿಯುದ್ದ ನೀರು ನಿಂತು, ವಾಹನ ಸವಾರರು ಪರಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. 

ನಗರದ ಜನನಿಬಿಡ ಸ್ಥಳಗಳಾದ ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಮೈಸೂರ್ ಬ್ಯಾಂಕ್ ಸರ್ಕಲ್, ಶಿವಾಜಿನಗರ, ಶಾಂತಿನಗರ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ನಗರದ ವಿವಿಧೆಡೆ ಸುಮಾರು ಎರಡು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.  

ಕೆಲ ಪ್ರದೇಶಗಳಲ್ಲಿ ಗಾಳಿಮಳೆಗೆ ಮರಗಳು ಉರುಳಿಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ದ್ವಿಚಕ್ರ ವಾಹನ ಸವಾರರು ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ಬೀದಿಬದಿ ವ್ಯಾಪಾರಿಗಳು ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಬಿಡಾರಗಳ ಮೊರೆ ಹೋದರು. ರಸ್ತೆಯ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದರಿಂದ ವಾಹನ ಚಲಾಯಿಸಲು ಹರಸಾಹಸ ಪಡುವಂತಾಯಿತು. 

ಇನ್ನು ಎಂ.ಎಸ್. ಬಿಲ್ಡಿಂಗ್ ಬಳಿಯಿರುವ ರಸ್ತೆ ಸುರಂಗ ಮಾರ್ಗದಲ್ಲಿ ನೀರು ತುಂಬಿದ ಕಾರಣ ಕೆಲಕಾಲ ಬ್ಯಾರಿಕೇಡ್ ಹಾಕಲಾಗಿತ್ತು. ಪರಿಣಾಮ, ಆ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಆನಂದ್ ರಾವ್ ಸರ್ಕಲ್‍ನ ಅಂಡರ್ ಪಾಸ್‍ನಲ್ಲಿಯೂ ಸಹ ನೀರು ನಿಂತ ಪರಿಣಾಮವಾಗಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿ ವಾಹನ ಸವಾರರು ತೊಂದರೆಗೆ ಸಿಲುಕಿದರು. 

ವಿಧಾನಸೌಧದೊಳಕ್ಕೆ ನೀರು

ಭಾರೀ ಗಾಳಿ ಜೊತೆಗೆ ಮಳೆ ಬಂದದ್ದರಿಂದ ವಿಧಾನಸೌಧದೊಳಕ್ಕೆ ಇರುಚಲು ನೀರು ನುಗ್ಗಿ, ಕಚೇರಿಗಳಲ್ಲಿ, ವರಾಂಡದಲ್ಲಿ ನೀರು ನಿಂತ ದೃಶ್ಯ ಕಾಣಿಸಿತು. ಕೆಲವರು ಅದನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಇದೇ ಮೊದಲ ಬಾರಿಗೆ ವಿಧಾನಸೌಧದೊಳಗೆ ನೀರು ನುಗ್ಗಿದ್ದು, ಜನರ ಕುತೂಹಲಕ್ಕೆ ಕಾರಣವಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News