ಬೆಂಗಳೂರು: ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಭ್ರಷ್ಟಾಚಾರ ಆರೋಪ: ಕಟ್ಟಡ ಕಾರ್ಮಿಕರ ಸಂಘಟನೆಗಳಿಂದ ಕಾಲ್ನಡಿಗೆ ಜಾಥಾ

Update: 2021-09-20 15:32 GMT

ಬೆಂಗಳೂರು, ಸೆ.20: ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣ ಸಂಬಂಧ ಸಾವಿರಾರು ಕಟ್ಟಡ ಕಾರ್ಮಿಕರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸೋಮವಾರ ಇಲ್ಲಿನ ಸಿಟಿ ರೈಲ್ವೇ ನಿಲ್ದಾಣ ಬಳಿ ಜಮಾಯಿಸಿದ ಕಾರ್ಮಿಕರು ಫ್ರೀಡಂ ಪಾರ್ಕ್‍ವರೆಗೂ ಕಾಲ್ನಡಿಗೆ ಜಾಥಾ ನಡೆಸಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಹಣ ದುರುಪಯೋಗದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

21 ಲಕ್ಷದ ರೇಷನ್ ಕಿಟ್, ಟೂಲ್‍ಕಿಟ್, ಇಮ್ಯೂನಿಟಿ ಕಿಟ್, ದುಬಾರಿ ಕಾರು, ಟಿವಿ, ಆ್ಯಂಬುಲೆನ್ಸ್ ಖರೀದಿಯಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದ್ದು, ಈ ಕುರಿತು ಸದನ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.

ಅದೇ ರೀತಿ, ಕಾರ್ಮಿಕರ ಸ್ವಾಭಾವಿಕ ಸಾವಿಗೆ 5 ಲಕ್ಷ, ಅಪಘಾತದಿಂದ ಸಾವನ್ನಪ್ಪಿದರೆ 10 ಲಕ್ಷ, ಪ್ರತಿ ತಿಂಗಳು 5 ಸಾವಿರ ರೂ. ನಿವೃತ್ತಿ ವೇತನ ನೀಡಬೇಕು. ಮದುವೆಗೆ ಸಹಾಯ ಧನ 50 ಸಾವಿರದಿಂದ 1 ಲಕ್ಷ ರೂ.ಗೆ ಹೆಚ್ಚಿಸಬೇಕು. ಬಾಕಿ ಇರುವ ಕೋವಿಡ್ ಪರಿಹಾರವನ್ನು ತಕ್ಷಣ ನೀಡಬೇಕು ಎಂದು ತಿಳಿಸಿದರು.

ಕಟ್ಟಡ ಕಾರ್ಮಿಕರ ಆಸ್ಪತ್ರೆ ವೆಚ್ಚವನ್ನು ಸರಕಾರ ಭರಿಸಬೇಕು. ಲಸಿಕೆ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗೆ ಹಣ ನೀಡಬಾರದು, ಕಾರ್ಮಿಕ ಸಂಘಟನೆಗಳ ವಿವಿಧ ಅರ್ಜಿಯನ್ನು ತಕ್ಷಣ ಇತ್ಯರ್ಥಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು.

ಮಳೆಯಿಂದ ಅಸ್ತವ್ಯಸ್ತ 

ನಗರದಲ್ಲಿ ಇದ್ದಕ್ಕಿದ್ದಂತೆ ಸುರಿದ ಧಾರಾಕಾರ ಮಳೆಯಿಂದಾಗಿ, ಫ್ರೀಡಂ ಪಾರ್ಕ್‍ನಲ್ಲಿ ಜಮಾವಣೆಗೊಂಡಿದ್ದ ಧರಣಿನಿರತ ಕಾರ್ಮಿಕರು ಚದುರಿಹೋದರು. ಇನ್ನು ಕೆಲವರು ಕೂರಲು ಹಾಕಿದ್ದ ಚೇರ್‍ಗಳನ್ನು ತಲೆಮೇಲೆ ಇಟ್ಟುಕೊಂಡು ಮಳೆಯಿಂದ ರಕ್ಷಣೆ ಪಡೆದರು. ಮಹಿಳೆಯರು ಮತ್ತು ಮಕ್ಕಳು ಮಳೆಯಿಂದ ತೊಂದರೆಗೆ ಸಿಲುಕಿಕೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News