ಕೆನ್ಯಾದಲ್ಲಿ ಲಿಂಗಾಧರಿತ ಹಿಂಸಾಚಾರ ಪ್ರಕರಣ ಹೆಚ್ಚಳ: ಎಚ್ಆರ್‌ಡಬ್ಲ್ಯೂ ವರದಿ

Update: 2021-09-21 16:45 GMT
photo: twitter.com/hrw

ನೈರೋಬಿ, ಸೆ.21: ಕೆನ್ಯಾದಲ್ಲಿ ಹಿಂಸಾಚಾರ ವ್ಯಾಪಕ ಪ್ರಮಾಣದಲ್ಲಿ ಇರುವಂತೆಯೇ ಮಹಿಳೆಯರು ಹಾಗೂ ಹುಡುಗಿಯರ ವಿರುದ್ಧ ನಡೆಯುವ ಹಿಂಸಾಚಾರ, ದೌರ್ಜನ್ಯವೂ ತೀವ್ರ ಹೆಚ್ಚುತ್ತಿರುವ ಸ್ಪಷ್ಟ ನಿದರ್ಶನಗಳಿವೆ. ಕೊರೋನ ವೈರಸ್ ಸಾಂಕ್ರಾಮಿಕದ ಅವಧಿಯಲ್ಲಿ, ವಿಶೇಷವಾಗಿ ಲಾಕ್ ಡೌನ್ ಸಂದರ್ಭ ಲಿಂಗಾಧಾರಿತ ಹಿಂಸಾಚಾರ ಉಲ್ಬಣಗೊಂಡಿದ್ದು ಈ ಬಗ್ಗೆ ಕೆನ್ಯಾ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾನವ ಹಕ್ಕುಗಳ ವೀಕ್ಷಣಾ ಸಮಿತಿ ‘ಹ್ಯೂಮನ್ ರೈಟ್ಸ್ ವಾಚ್’ನ ವರದಿಯಲ್ಲಿ ಆಗ್ರಹಿಸಲಾಗಿದೆ.

ಮಹಿಳೆಯರ ಚಲನವಲನದ ಮೇಲೆ ಪರಿಣಾಮ ಬೀರುವ ನಿರ್ಬಂಧಗಳ ನಡುವೆಯೇ ಆರೋಗ್ಯ, ಆರ್ಥಿಕ ಮತ್ತು ಸಾಮಾಜಿಕ ನೆರವು ಯೋಜನೆಗಳು ಮಹಿಳೆಯರನ್ನು ತಲುಪುವು ಬಗ್ಗೆ ಖಾತರಿಪಡಿಸಲು ಸರಕಾರ ವಿಫಲವಾಗಿದೆ ಎಂದು ಅಮೆರಿಕ ಮೂಲದ ಹ್ಯೂಮನ್ ರೈಟ್ಸ್ ವಾಚ್(ಎಚ್ಆರ್ಡಬ್ಲ್ಯು) ಮಂಗಳವಾರ ಬಿಡುಗಡೆಗೊಳಿಸಿದ ವರದಿ ಉಲ್ಲೇಖಿಸಿದೆ. 2020ರ ಮಾರ್ಚ್ - ಎಪ್ರಿಲ್ ತಿಂಗಳಿನಲ್ಲಿ ಜಾರಿಗೊಳಿಸಿದ ಲಾಕ್ಡೌನ್ ನ ಆರಂಭಿಕ 2 ವಾರದಲ್ಲೇ ಮಹಿಳೆಯರು ಮತ್ತು ಹುಡುಗಿಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ದೂರವಾಣಿ ಕರೆಗಳ ಸಂಖ್ಯೆಯಲ್ಲಿ 301% ಹೆಚ್ಚಳವಾಗಿದೆ. 

ಈ ಹಿಂದೆ ಕೂಡಾ ಆರೋಗ್ಯ ತುರ್ತುಪರಿಸ್ಥಿತಿ ಸಂದರ್ಭ ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣ ಹೆಚ್ಚಳವಾಗಿದ್ದ ನಿದರ್ಶನವನ್ನು ಗಮನಿಸಿ ಕೆನ್ಯಾ ಸರಕಾರ ಕೊರೋನ ಸಂದರ್ಭ ಈ ವಿಷಯದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿತ್ತು . ಸರಕಾರದ ಪ್ರಸ್ತುತ ಕಾರ್ಯನೀತಿ ಮತ್ತು ವ್ಯವಸ್ಥೆಯು ತುರ್ತು ಸಂದರ್ಭದಲ್ಲಿ ಮಹಿಳೆಯರು ಮತ್ತು ಹುಡುಗಿಯರ ವಿರುದ್ಧದ ದೌರ್ಜನ್ಯವನ್ನು ಪರಿಣಾಮಕಾರಿಯಾಗಿ ನಿರ್ಬಂಧಿಸಲು ಸೂಕ್ತವಾಗಿಲ್ಲ ಎಂದು ಮಂಗಳವಾರ ಬಿಡುಗಡೆಗೊಳಿಸಿರುವ ವರದಿಯಲ್ಲಿ ತಿಳಿಸಲಾಗಿದೆ.

2020ರ ಜೂನ್ ಮತ್ತು 2021ರ ಫೆಬ್ರವರಿಯಲ್ಲಿ ನಡೆಸಲಾದ 26 ಸಂದರ್ಶನವನ್ನು ಆಧರಿಸಿ(ಇದರಲ್ಲಿ 13 ಸಂದರ್ಶನದಲ್ಲಿ ಲಿಂಗಾಧಾರಿತ ದೌರ್ಜನ್ಯದ ಸಂತ್ರಸ್ತರು ಒಳಗೊಂಡಿದ್ದರು) ಈ ಸಮೀಕ್ಷೆ ನಡೆಸಲಾಗಿದೆ. ಲೈಂಗಿಕ ದೌರ್ಜನ್ಯ, ಥಳಿತ, ಮನೆಯಿಂದ ಹೊರದೂಡುವುದು, ಬಲವಂತದ ವಿವಾಹ, ಸ್ತ್ರೀಯರ ಜನನಾಂಗ ವಿರೂಪಗೊಳಿಸುವುದು ಮುಂತಾದ ವಿವಿಧ ರೀತಿಯ ಮಹಿಳಾ ದೌರ್ಜನ್ಯ ಪ್ರಕರಣಗಳ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ಬಹುತೇಕ ದೌರ್ಜನ್ಯಗಳು ಮನೆಯಲ್ಲೇ ನಡೆಯುತ್ತವೆ ಮತ್ತು ದೌರ್ಜನ್ಯ ನಡೆಸುವವರಲ್ಲಿ ಪತಿ ಸೇರಿದಂತೆ ಸಮೀಪದ ಬಂಧುಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇನ್ನುಳಿದಂತೆ ಸಮುದಾಯ ಹಂತದಲ್ಲಿ ನಡೆಯುವ ದೌರ್ಜನ್ಯಗಳಲ್ಲಿ ನೆರೆಹೊರೆಯವರ ಪಾತ್ರವೂ ಇರುತ್ತದೆ. ತಿಂಡಿ, ತಿನಿಸು ಅಥವಾ ಸ್ಯಾನಿಟರಿ ಪ್ಯಾಡ್ ಗಳ ಆಮಿಷ ತೋರಿಸಿ ಪುರುಷರು ದೌರ್ಜನ್ಯ ಎಸಗಿರುವುದಾಗಿ ಬಾಲಕಿಯರು ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.

ಗಂಭೀರ ಪ್ರಮಾಣದ ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳಲ್ಲಿ ಕೆನ್ಯಾದ ಪೊಲೀಸರು ಹಾಗೂ ಭದ್ರತಾ ಪಡೆಯ ಸಿಬಂದಿ ಅಪರಾಧಿಗಳಾಗಿದ್ದು , ಬಿಕ್ಕಟ್ಟಿನ ಸಂದರ್ಭದಲ್ಲಿ ಮಹಿಳೆಯರು ಮತ್ತು ಹುಡುಗಿಯರ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ, ಪುರುಷರು ಮತ್ತು ಬಾಲಕರ ವಿರುದ್ಧ ದೌರ್ಜನ್ಯದ ಹಲವು ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆ ಎಂದು ಎಚ್ಆರ್ಡಬ್ಲ್ಯು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News