ಲಿಟ್ವಿನೆಂಕೊ ಹತ್ಯೆಗೆ ರಶ್ಯ ಹೊಣೆ: ಯುರೋಪಿಯನ್ ಕೋರ್ಟ್

Update: 2021-09-21 16:47 GMT

ಲಂಡನ್, ಸೆ.21: ಲಂಡನ್ನಲ್ಲಿ ವಿಕಿರಿಣಶೀಲ ವಸ್ತು ಮಿಶ್ರಿತ ಚಹಾ ಸೇವಿಸಿ ಮೃತಪಟ್ಟ ರಶ್ಯ ಗುಪ್ತಚರ ಸಂಸ್ಥೆಯ ಮಾಜಿ ಸಿಬಂದಿ ಅಲೆಕ್ಸಾಂಡರ್ ಲಿಟ್ವಿನೆಂಕೊ ಸಾವಿಗೆ ರಶ್ಯ ಹೊಣೆ ಎಂಬ ಬ್ರಿಟನ್ ತನಿಖಾ ಸಂಸ್ಥೆಯ ನಿರ್ಣಯವನ್ನು ಮಾನವ ಹಕ್ಕುಗಳಿಗಾಗಿನ ಯುರೋಪಿಯನ್ ಕೋರ್ಟ್ ಮಂಗಳವಾರ ಬೆಂಬಲಿಸಿದೆ.

ಇದೊಂದು ಆಧಾರರಹಿತ ತೀರ್ಪು ಆಗಿದ್ದು ಇಂತಹ ತೀರ್ಪನ್ನು ಒಪ್ಪಿಕೊಳ್ಳಲು ಸಾಧ್ಯಯವಿಲ್ಲ ಎಂದು ರಶ್ಯಾ ಪ್ರತಿಕ್ರಿಯಿಸಿದೆ.

ರಶ್ಯ ಗುಪ್ತಚರ ಸಂಸ್ಥೆ ಕೆಜಿಬಿ (ಸೋವಿಯತ್ ಒಕ್ಕೂಟದ ಪತನದ ಬಳಿಕ ಎಫ್ಎಸ್ಬಿ)ಯ ಮಾಜಿ ಉದ್ಯೋಗಿ ಲಿಟ್ವಿನೆಂಕೊ 2000ದಲ್ಲಿ ರಶ್ಯಾದಿಂದ ಇಂಗ್ಲೆಂಡಿಗೆ ಸ್ಥಳಾಂತರಗೊಂಡಿದ್ದರು. ಬಳಿಕ ರಶ್ಯದ ಗುಪ್ತಚರ ವಿಭಾಗದಲ್ಲಿ ನಡೆಯುವ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ಬಯಲಿಗೆಳೆಯುವ ಕಾರ್ಯದಲ್ಲಿ ತೊಡಗಿದ್ದರು. 2006ರ ನವೆಂಬರ್ನಲ್ಲಿ ಲಂಡನ್ ನ ಹೋಟೆಲ್ ಒಂದರಲ್ಲಿ ರಶ್ಯದ ಇಬ್ಬರು ವ್ಯಕ್ತಿಗಳೊಂದಿಗೆ ಚಹಾ ಕುಡಿಯುತ್ತಿದ್ದಾಗ ಹಠಾತ್ ಅಸ್ವಸ್ಥಗೊಂಡಿದ್ದ ಲಿಟ್ವಿನೆಂಕೊರನ್ನು ಆಸ್ಪತ್ರೆಗೆ ದಾಖಲಿಸಿದ್ದು 3 ವಾರದ ಬಳಿಕ ಮೃತಪಟ್ಟಿದ್ದರು. ಅವರು ಕುಡಿಯುತ್ತಿದ್ದ ಚಹಾದಲ್ಲಿ ವಿಕಿರಿಣಶೀಲ ವಸ್ತು ಬೆರೆಸಿರುವುದು ತನಿಖೆಯಿಂದ ದೃಢಪಟ್ಟಿತ್ತು.

ರಶ್ಯದ ಗುಪ್ತಚರ ಏಜೆಂಟ್ ಗಳಾದ ಆ್ಯಂಡ್ರೈ ಲುಗೋವಿ ಮತ್ತು ಡಿಮಿತ್ರಿ ಕೋವ್ಟನ್, ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅನುಮತಿ ಪಡೆದು ಈ ಹತ್ಯೆ ನಡೆಸಿದ್ದರು ಎಂದು ಬ್ರಿಟನ್ನ ತನಿಖಾ ಸಮಿತಿ 2016ರಲ್ಲಿ ತೀರ್ಪು ನೀಡಿತ್ತು. ಬಳಿಕ ಈ ಬಗ್ಗೆ ಲಿಟ್ವಿನೆಂಕೊ ಪತ್ನಿ ಯುರೋಪಿಯನ್ ಕೆರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News