ಕಲ್ಲಿದ್ದಲು ಹಗರಣ: ಟಿಎಂಸಿ ಸಂಸದ ಅಭಿಷೇಕ ಬ್ಯಾನರ್ಜಿ, ಪತ್ನಿಗೆ ಮಧ್ಯಂತರ ರಕ್ಷಣೆಗೆ ದಿಲ್ಲಿ ಹೈಕೋರ್ಟ್ ನಕಾರ

Update: 2021-09-21 18:16 GMT

‌ಹೊಸದಿಲ್ಲಿ,ಸೆ.21: ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ ಬ್ಯಾನರ್ಜಿ ವಿರುದ್ಧ ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಈ.ಡಿ)ವು ಯಾವುದೇ ಕ್ರಮವನ್ನು ಕೈಗೊಳ್ಳದಂತೆ ಮಧ್ಯಂತರ ಆದೇಶವನ್ನು ಹೊರಡಿಸಲು ದಿಲ್ಲಿ ಉಚ್ಚ ನ್ಯಾಯಾಲಯವು ಮಂಗಳವಾರ ನಿರಾಕರಿಸಿದೆ.
  
ಬ್ಯಾನರ್ಜಿ ಮತ್ತು ಅವರ ಪತ್ನಿ ರುಜಿರಾ ಬ್ಯಾನರ್ಜಿ ಸಲ್ಲಿಸಿರುವ ಅರ್ಜಿಗೆ ಮೂರು ದಿನಗಳಲ್ಲಿ ಉತ್ತರಿಸುವಂತೆ ಉಚ್ಚ ನ್ಯಾಯಾಲಯವು ಈ.ಡಿ.ಗೆ ನಿರ್ದೇಶ ನೀಡಿದೆ. ತಮ್ಮ ವಿರುದ್ಧ ಹೊರಡಿಸಲಾಗಿರುವ ಸಮನ್ಸ್ ರದ್ದುಗೊಳಿಸುವಂತೆ ಬ್ಯಾನರ್ಜಿ ದಂಪತಿ ಅರ್ಜಿಯಲ್ಲಿ ಕೋರಿದ್ದಾರೆ.

ಪ್ರಕರಣವು ಪಶ್ಚಿಮ ಬಂಗಾಲದ ಕುನುಸ್ತೋರಿಯಾ ಮತ್ತು ಕಜೋರಾ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಈಸ್ಟರ್ನ್ ಕೋಲ್ ಫೀಲ್ಡ್‌ ನ ಗಣಿಗಳಿಂದ ಕಲ್ಲಿದ್ದಲು ಕಳ್ಳತನಕ್ಕೆ ಸಂಬಂಧಿಸಿದೆ. ಕೆಲವು ದಾಖಲೆಗಳೊಂದಿಗೆ ದಿಲ್ಲಿಯಲ್ಲಿ ತನ್ನೆದುರು ಹಾಜರಾಗುವಂತೆ ಈ.ಡಿ.ಬ್ಯಾನರ್ಜಿ ದಂಪತಿಗೆ ಸೂಚಿಸಿತ್ತು. ತಾವು ಕೋಲ್ಕತಾದ ನಿವಾಸಿಗಳಾಗಿದ್ದು, ದಿಲ್ಲಿಯಲ್ಲಿ ಈ.ಡಿ.ಎದುರು ಹಾಜರಾಗಲು ಕರೆಸುವಂತಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News