ಮುಂಗಾರು ಹಂಗಾಮು : ಬಂಪರ್ ಬೆಳೆ ನಿರೀಕ್ಷೆ

Update: 2021-09-22 04:28 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಮುಂಗಾರು ಮಳೆ ಸುಧಾರಿಸಿರುವ ಹಿನ್ನೆಲೆಯಲ್ಲಿ ಹಾಗೂ ಬೇಸಿಗೆಯಲ್ಲಿ ಬಿತ್ತನೆಯಾದ ಎಕರೆವಾರು ಬೆಳೆ ಪ್ರಮಾಣ ಹೆಚ್ಚಳದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಭತ್ತ ಸೇರಿದಂತೆ ಆಹಾರ ಧಾನ್ಯಗಳ ಉತ್ಪಾದನೆ ಗಣನೀಯವಾಗಿ ಹೆಚ್ಚಲಿದೆ ಎಂದು ಕೃಷಿ ಸಚಿವಾಲಯ ಅಂದಾಜಿಸಿದೆ. 2021-22ನೇ ವರ್ಷದಲ್ಲಿ ಒಟ್ಟಾರೆ ಉತ್ಪಾದನೆ 2020-21ರ ದಾಖಲೆ ಪ್ರಮಾಣಕ್ಕೆ ಸನಿಹವಾಗಲಿದೆ ಎಂದು ಅಂದಾಜು ಮಾಡಲಾಗಿದೆ.

ಪ್ರಸಕ್ತ ಬೆಳೆ ವರ್ಷದಲ್ಲಿ ಸುಮಾರು 150 ದಶಲಕ್ಷ ಟನ್ ಆಹಾರ ಬೆಳೆಗಳ ಉತ್ಪಾದನೆ ನಿರೀಕ್ಷಿಸಲಾಗಿದ್ದು, ಭತ್ತ ಕೂಡಾ ದಾಖಲೆ ಅಂದರೆ 107 ದಶಲಕ್ಷ ಟನ್ ಉತ್ಪಾದನೆಯಾಗುವ ಅಂದಾಜು ಇದೆ. ಮುಂಗಾರು ಹಾಗೂ ಹಿಂಗಾರು ಬೆಳೆ ಸೇರಿ 307 ದಶಲಕ್ಷ ಟನ್ ಆಹಾರಧಾನ್ಯಗಳ ಉತ್ಪಾದನೆ ನಿರೀಕ್ಷಿಸಲಾಗಿದೆ. ಇದು ಕಳೆದ ವರ್ಷ ಉತ್ಪಾದನೆಯಾಗಿರುವ ದಾಖಲೆ ಪ್ರಮಾಣಕ್ಕಿಂತ ಕೇವಲ ಹತ್ತು ಲಕ್ಷ ಟನ್ ಮಾತ್ರ ಕಡಿಮೆ.

ಭತ್ತ ಮತ್ತು ಬೇಳೆಕಾಳುಗಳ ಎಕರೆವಾರು ಮುಂಗಾರು ಇಳುವರಿ ಸುಧಾರಿಸಿದ್ದು, ಸೆಪ್ಟೆಂಬರ್‌ನಲ್ಲಿ ಆಗಿರುವ ಮಳೆ ಇದಕ್ಕೆ ಕಾರಣ. ಇದರಿಂದಾಗಿ ಜುಲೈ ಮತ್ತು ಆಗಸ್ಟ್‌ನಲ್ಲಿ ಮಳೆಯ ಕೊರತೆಯಿಂದ ಉಂಟಾಗಿದ್ದ ಭೀತಿ ನಿವಾರಣೆಯಾದಂತಾಗಿದೆ.

ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಸಕ್ತ ಬೆಳೆ ವರ್ಷಕ್ಕೆ ಮೊದಲ ಅಂದಾಜನ್ನು ಕೃಷಿ ಚಿವಾಲಯ ಬಿಡುಗಡೆ ಮಾಡಲಾಗಿದೆ. ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ರಾಜ್ಯಗಳಿಗೆ ನೆರವಾಗಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸಮ್ಮೇಳನವನ್ನು ಉದ್ದೇಶಿಸಿ ಮಾತಾಡಿದ ಥೋಮರ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News