ಅಮೆರಿಕಾದಲ್ಲಿ ಪುರಾತನ ಮಾನವನ ಹೆಜ್ಜೆಗುರುತು ಪತ್ತೆ!‌

Update: 2021-09-24 17:06 GMT
photo: twitter.com/AJEnglish

ವಾಷಿಂಗ್ಟನ್, ಸೆ.24: ನ್ಯೂ ಮೆಕ್ಸಿಕೋ ಮರುಭೂಮಿಯ ಪ್ರದೇಶದಲ್ಲಿ ಸುಮಾರು 23 ಸಾವಿರ ವರ್ಷದ ಹಿಂದೆ ಬದುಕಿದ್ದ ಮಾನವರ ಹೆಜ್ಜೆ ಗುರುತುಗಳನ್ನು ಪತ್ತೆಹಚ್ಚಲಾಗಿದ್ದು ಅಂತಿಮ ಹಿಮಯುಗ ಅಂತ್ಯಗೊಳ್ಳುವುದಕ್ಕೂ ಮೊದಲೇ ಉತ್ತರ ಅಮೆರಿಕದಲ್ಲಿ ಮಾನವರು ನೆಲೆಸಿದ್ದರು ಎಂಬುದನ್ನು ಇದು ನಿರೂಪಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ.

2009ರಲ್ಲಿ ವೈಟ್ಸ್ಯಾಂಡ್ಸ್ ನ್ಯಾಷನಲ್ ಪಾರ್ಕ್ ನ ಒಣಗಿದ ಕೆರೆಯಲ್ಲಿ ಈ ಹೆಜ್ಜೆಗುರುತು ಮೊದಲು ಪತ್ತೆಯಾಗಿದೆ.

ಈಗ ಮರುಭೂಮಿಯಂತಾಗಿರುವ ಪ್ರದೇಶದ ಕೆಸರಿನಲ್ಲಿ ಮೂಡಿದ್ದ ಹೆಜ್ಜೆಗುರುತುಗಳ ಬಗ್ಗೆ ಸುದೀರ್ಘ ಅಧ್ಯಯನ ನಡೆಸಿದ ಬಳಿಕ ಇದನ್ನು ದೃಢಪಡಿಸಲಾಗಿದೆ. ಈ ಹೆಜ್ಜೆಗುರುತು ಮೂಡಿದ್ದ ಜಾಗ ಕೆಸರಿನಿಂದ ಆವರಿಸಿಕೊಂಡು ಕ್ರಮೇಣ ಕಲ್ಲಿನಂತೆ ಗಟ್ಟಿಯಾದ್ದರಿಂದ ನಮ್ಮ ಪೂರ್ವಜ ಬಂಧುಗಳ ಬಗ್ಗೆ ಪುರಾವೆ ನಶಿಸದೆ ಉಳಿದಿದೆ . ಈ ಹೆಜ್ಜೆಗುರುತುಗಳಲ್ಲಿ ಸಿಕ್ಕಿಕೊಂಡ ಬೀಜಗಳ ಮೂಲಕ ಇವು ಸುಮಾರು 22,800 ವರ್ಷಗಳ ಹಿಂದೆ ಬದುಕಿದ್ದ ಮಾನವರದ್ದು ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಇಲಾಖೆಯ ಅಧ್ಯಯನದಿಂದ ತಿಳಿದುಬಂದಿದೆ.

ಇದರಲ್ಲಿ ಹಲವು ಹೆಜ್ಜೆಗುರುತುಗಳು ಹದಿಹರೆಯದವರು ಮತ್ತು ಮಕ್ಕಳದ್ದಾಗಿದೆ. ವಯಸ್ಕರ ಹೆಜ್ಜೆಗುರುತು ಕಡಿಮೆ ಸಂಖ್ಯೆಯಲ್ಲಿದೆ. ಆಗಿನ ಯುಗದಲ್ಲಿ ವಯಸ್ಕರು ಕುಶಲಕರ್ಮಿಗಳಾಗಿದ್ದರೆ, ನೀರು, ಕಟ್ಟಿಗೆ ಇತ್ಯಾದಿಗಳನ್ನು ತರುವ ಕೆಲಸ ಯುವಕರದ್ದಾಗಿತ್ತು ಮತ್ತು ಇವರ ಜತೆ ಮಕ್ಕಳೂ ತೆರಳುತ್ತಿದ್ದರು ಎಂಬುದನ್ನು ಇದು ಸೂಚಿಸುತ್ತದೆ . ಇದೇ ಕೆರೆಯ ಪ್ರದೇಶದಲ್ಲಿ ತೋಳ ಮತ್ತಿತರ ಪ್ರಾಣಿಗಳ ಹೆಜ್ಜೆ ಗುರುತೂ ಪತ್ತೆಯಾಗಿದ್ದು ಇವೂ ಮನುಷ್ಯರ ಜತೆ ಜೀವಿಸುತ್ತಿರುವುದಕ್ಕೆ ಪುರಾವೆಯಾಗಿದೆ ಎಂದು ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 ಉತ್ತರ ಅಮೆರಿಕದ ಮೂಲನಿವಾಸಿಗಳು ಪೂರ್ವ ಸೈಬೀರಿಯಾದಿಂದ ಸೇತುವೆಯೊಂದ ಮೂಲಕ (ರಶ್ಯಾದ ಬಳಿಯಿರುವ ಬೆರಿಂಗ್ ಜಲಸಂಧಿ) ಅಲಾಸ್ಕಾಕ್ಕೆ ಬಂದಿದ್ದಾರೆ ಎಂಬುದು ದಶಕಗಳಿಂದಲೂ ಒಪ್ಪಲಾಗಿರುವ ಸಿದ್ಧಾಂತವಾಗಿದೆ. ಈಗಿನ ನ್ಯೂಮೆಕ್ಸಿಕೋ ನಗರದಲ್ಲಿ ಕ್ಲೋವಿಸ್ ಜನಾಂಗದ ಜತೆಯಲ್ಲೇ ಸುಮಾರು 12,500 ವರ್ಷಗಳ ಹಿಂದೆ ಮನುಷ್ಯರು ವಾಸಿಸುತ್ತಿದ್ದುದು ಉತ್ಖನನದ ಸಂದರ್ಭ ದೊರೆತ ಪುರಾವೆಗಳಿಂದ ದೃಢಪಟ್ಟಿವೆ. ಇದು ಅಮೆರಿಕ ಖಂಡದ ಪ್ರಥಮ ನಾಗರಿಕತೆ ಎಂದು ಪರಿಗಣಿಸಲ್ಪಟ್ಟಿದ್ದು ಇವರನ್ನು ಅಮೆರಿಕದ ಮೂಲನಿವಾಸಿಗಳು ಎಂದು ಕರೆಯಲಾಗುತ್ತದೆ.

ಆದರೆ , ಪ್ರಾಚೀನ ಮಾನವ ಇದಕ್ಕೂ ಹಿಂದಿನ ಅವಧಿಯಲ್ಲಿ ಜೀವಿಸುತ್ತಿದ್ದ ಎಂಬುದನ್ನು ಇತ್ತೀಚಿಗೆ ದೊರೆತ ಹಲವು ಪುರಾವೆಗಳು ದೃಢಪಡಿಸಿವೆ.

ಹಿಮಯುಗದ ಸಂದರ್ಭ ಅಮೆರಿಕ ಖಂಡದ ಉತ್ತರದ ಬಹುತೇಕ ಭಾಗಗಳನ್ನು ಹಿಮ ಆವರಿಸಿಕೊಂಡಿದ್ದರಿಂದ ಏಶ್ಯಾದಿಂದ ಮನುಷ್ಯರು ಉತ್ತರ ಅಮೆರಿಕಕ್ಕೆ ವಲಸೆ ಹೋಗುವುದು ಕಷ್ಟಸಾಧ್ಯ ಎಂದು ಭಾವಿಸಲಾಗಿತ್ತು. ಆದರೆ ಈಗ ದೊರೆತ ಮಾನವ ಹೆಜ್ಜೆಗಳ ಗುರುತುಗಳು ಈ ಸಿದ್ಧಾಂತಕ್ಕೆ ವಿರುದ್ಧವಾಗಿರುವುದರಿಂದ ಅತ್ಯಂತ ಮಹತ್ವದ್ದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News