ಬೆಂಗಳೂರು: ಬಹುಮಹಡಿ ಕಟ್ಟಡ ಕುಸಿತ

Update: 2021-09-27 13:14 GMT
Photo: PTI

ಬೆಂಗಳೂರು, ಸೆ.27: ಶಿಥಿಲಾವಸ್ಥೆಯಲ್ಲಿದ್ದ 3 ಮಹಡಿಗಳ ಕಟ್ಟಡ ನಗರದ ಲಕ್ಕಸಂದ್ರದಲ್ಲಿ ದಿಢೀರ್ ಕುಸಿದಿದ್ದು ಮನೆ ಬೀಳುವ ಭೀಕರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಲಕ್ಕಸಂದ್ರದ 7ನೇ ಮುಖ್ಯರಸ್ತೆಯ 14ನೆ ಕ್ರಾಸ್‍ನಲ್ಲಿನ ಈ ಮನೆಯಲ್ಲಿ 20ಕ್ಕೂ ಹೆಚ್ಚು ಜನರು ವಾಸವಿದ್ದು, ಅವರೆಲ್ಲರೂ ಕೆಲದಿನಗಳ ಹಿಂದೆ ಮನೆ ಖಾಲಿ ಮಾಡಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರ ನಿವಾಸದಿಂದ ಕೊಂಚ ದೂರದಲ್ಲಿಯೇ ಈ ಕಟ್ಟಡವಿದ್ದು, ಮೆಟ್ರೋ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕರು ಕಟ್ಟಡದಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಇನ್ನು, ಈ ಕಟ್ಟಡ ಕುಸಿತದಿಂದ ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗಿದೆ. ಕಟ್ಟಡ ಕುಸಿಯುವುದಕ್ಕಿಂತ ಕೆಲ ಸಮಯ ಮುನ್ನ ಅಗ್ನಿಶಾಮಕ ಸಿಬ್ಬಂದಿ ಕಾರ್ಮಿಕರನ್ನು ತೆರವುಗೊಳಿಸಿದ್ದರು. ಹೀಗಾಗಿ ಮೆಟ್ರೋ ಕಾರ್ಮಿಕರ ತೆರವಿನಿಂದ ಭಾರಿ ಅನಾಹುತ ತಪ್ಪಿದೆ.

ಮೂರು ಅಂತಸ್ತಿನ ಕಟ್ಟಡವನ್ನು 1974ರಲ್ಲಿ ನಿರ್ಮಿಸಲಾಗಿತ್ತು. ಸುರೇಶ್ ಎಂಬುವರಿಗೆ ಈ ಮನೆ ಸೇರಿದೆ.ಘಟನೆ ಸಂಬಂಧ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ ತಿಳಿಸಿದ್ದಾರೆ.  

ಕುಸಿದ ಕಟ್ಟಡದ ಜಾಗ ಮುಟ್ಟುಗೋಲು

ನಗರದ ಲಕ್ಕಸಂದ್ರದಲ್ಲಿ ಕುಸಿದು ಬಿದ್ದ ಕಟ್ಟಡ ಹಳೆಯದಾಗಿದ್ದರೂ ಮಾಲಕರಾದ ಸುರೇಶ್ ನಿರ್ಲಕ್ಷ್ಯತನದಿಂದ ಬಾಡಿಗೆಗೆ ನೀಡಿದ್ದಾರೆ. ಆದ್ದರಿಂದ ಜೀವ ಹಾನಿಗೆ ಸಂಬಂಧಿಸಿದ ಎಫ್‍ಐಆರ್ ದಾಖಲಿಸಿ, ಕಟ್ಟಡದ ಜಾಗವನ್ನು ಬಿಬಿಎಂಪಿ ಮುಟ್ಟುಗೋಲು ಹಾಕಿಕೊಳ್ಳಲಿದೆ.  

-ವೀರಭದ್ರ ಸ್ವಾಮಿ, ಬಿಬಿಎಂಪಿ ದಕ್ಷಿಣ ವಲಯದ ಜಂಟಿ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News