ಬೆಂಗಳೂರು: ಕೊಲೆ ಪ್ರಕರಣದ ಆರೋಪಿಯ ಕಾಲಿಗೆ ಪೊಲೀಸರಿಂದ ಗುಂಡೇಟು

Update: 2021-09-27 13:47 GMT

ಬೆಂಗಳೂರು, ಸೆ.27: ರೌಡಿ ಅರವಿಂದ್ ಕೊಲೆ ಪ್ರಕರಣ ಸಂಬಂಧ ಆರೋಪಿಯೋರ್ವನ ಕಾಲಿಗೆ ಇಲ್ಲಿನ ಅಶೋಕ ನಗರ ಠಾಣಾ ಪೊಲೀಸರು ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೆಜಿಹಳ್ಳಿ ರೌಡಿ ಸ್ಟಾಲಿನ್ ಎಂಬಾತನ ಬಂಧಿತ ಆರೋಪಿಯಾಗಿದ್ದು, ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.

ಸೆ.13ರಂದು ಸ್ಥಳೀಯ ಫುಟ್ಬಾಲ್ ತಂಡವನ್ನು ನಿರ್ವಹಿಸುತ್ತಿದ್ದ ರೌಡಿ ಅರವಿಂದ್‍ನನ್ನು ನಗರದ ಕೆಎಸ್‍ಎಫ್‍ಎ ಫುಟ್ಬಾಲ್ ಕ್ರೀಡಾಂಗಣದ ಎದುರಿನ ಬಿಬಿಎಂಪಿ ಮೈದಾನದಲ್ಲಿ ಪಂದ್ಯಾವಳಿಯಲ್ಲಿ ಆರೋಪಿ ಸ್ಟಾಲಿನ್ ಸೇರಿ ನಾಲ್ವರು ಮಾರಕಾಸ್ತ್ರಗಳನ್ನು ಹಿಡಿದು ಅರವಿಂದ್‍ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದರು.

ಈ ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು, ಪ್ರಮುಖ ಆರೋಪಿ ಸ್ಟಾಲಿನ್‍ನನ್ನು ಬಂಧಿಸಿ ಸೋಮವಾರ ಸ್ಥಳ ಮಹಜರು ಮಾಡಲು ಅಶೋಕ ನಗರದ ಕ್ರಿಶ್ಚಿಯನ್ ಸೆಮಟ್ರಿ ಬಳಿ ಕರೆದೊಯ್ಯಲಾಗಿತ್ತು. ಈ ವೇಳೆ ಮುಖ್ಯ ಪೇದೆ ಮಹೇಶ್ ಅವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಅಶೋಕ್ ನಗರ ಇನ್‍ಸ್ಪೆಕ್ಟರ್ ಶರಣಾಗುವಂತೆ ಸೂಚನೆ ನೀಡಿದರೂ ಮತ್ತೆ ಹಲ್ಲೆಗೆ ಸ್ಟಾಲಿನ್ ಮುಂದಾಗಿ ಪರಾರಿಯಾಗಲು ಯತ್ನಿಸಿದ್ದಾನೆ. 

ತದನಂತರ, ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಮತ್ತೆಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು ಅದು ಎಡಗಾಲಿಗೆ ತಗುಲಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ.

ಕೂಡಲೇ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಗೊಂಡ ಮುಖ್ಯಪೇದೆ ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News