ವೈದ್ಯಕೀಯೇತರ ಉದ್ದೇಶದ ಗರ್ಭಪಾತ ಪ್ರಕರಣ ಸೀಮಿತಗೊಳಿಸಿದ ಚೀನಾ

Update: 2021-09-27 16:22 GMT

 ಬೀಜಿಂಗ್: ವೈದ್ಯಕೀಯೇತರ ಉದ್ದೇಶಗಳಿಗಾಗಿ ನಡೆಸುವ ಗರ್ಭಪಾತ ಪ್ರಕರಣದ ಪ್ರಮಾಣವನ್ನು ಸೀಮಿತಗೊಳಿಸಿ ಚೀನಾ ನೂತನ ಮಾರ್ಗಸೂಚಿಯನ್ನು ಸೋಮವಾರ ಬಿಡುಗಡೆಗೊಳಿಸಿದೆ.

ಗರ್ಭಧಾರಣೆ ಪೂರ್ವದ ಆರೋಗ್ಯ ಸುರಕ್ಷೆಯ ಸೇವೆಗಳು ಮಹಿಳೆಯರಿಗೆ ಸುಲಭವಾಗಿ ಲಭ್ಯವಾಗಿಸುವ ಉದ್ದೇಶದಿಂದ ಈ ನೂತನ ಮಾರ್ಗಸೂಚಿ ರೂಪಿಸಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
2015ರಲ್ಲಿ ಕುಟುಂಬ ಯೋಜನೆ ಕಾನೂನಿನಲ್ಲಿ ಕೆಲವೊಂದು ವಿನಾಯಿತಿ ಘೋಷಿಸಿದ್ದರೂ 2014-2018ರ ನಡುವೆ ಚೀನಾದಲ್ಲಿ ಪ್ರತೀ ವರ್ಷ ಸರಾಸರಿ 9.7 ಮಿಲಿಯ ಗರ್ಭಪಾತದ ಪ್ರಕರಣ ವರದಿಯಾಗಿದ್ದು ಇದು 2009-2013ರ ಅವಧಿಗಿಂತ 51% ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.
ಲಿಂಗ ಆಯ್ಕೆಗೆ ಸಂಬಂಧಿಸಿದ ಗರ್ಭಪಾತವನ್ನು ತಡೆಯುವ ಉದ್ದೇಶದಿಂದ ಚೀನಾ ಈಗಾಗಲೇ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಅನಪೇಕ್ಷಿತ ಗರ್ಭಧಾರಣೆಯನ್ನು ಸಮಾಪ್ತಿಗೊಳಿಸಲು ನಡೆಸುವ ಗರ್ಭಪಾತವು ಮಹಿಳೆಯರ ದೇಹಕ್ಕೆ ಹಾನಿಯುಂಟು ಮಾಡುವ ಜೊತೆಗೆ, ಮಹಿಳೆಯರಲ್ಲಿ ಬಂಜೆತನದ ಸಮಸ್ಯೆಗೂ ಕಾರಣವಾಗುತ್ತದೆ ಎಂದು 2018ರಲ್ಲಿ ಚೀನಾದ ಆರೋಗ್ಯ ಇಲಾಖೆ ಎಚ್ಚರಿಸಿದೆ.
 ಚೀನಾ ಈಗಲೂ ವಿಶ್ವದಲ್ಲಿ ಅತ್ಯಧಿಕ ಜನಸಂಖ್ಯೆಯ ದೇಶವಾಗಿದ್ದರೂ, 1950ರ ಬಳಿಕ ಇದೇ ಮೊದಲ ಬಾರಿಗೆ 2011ರಿಂದ 2020ರ ಅವಧಿಯಲ್ಲಿ ಚೀನಾದಲ್ಲಿ ಜನಸಂಖ್ಯೆಯ ಹೆಚ್ಚಳದ ಗತಿ ಅತ್ಯಂತ ಕಡಿಮೆಯಾಗಿದೆ ಎಂದು ಇತ್ತೀಚಿನ ಜನಗಣತಿಯಲ್ಲಿ ತಿಳಿದುಬಂದಿದೆ. ಹಲವು ವರ್ಷಗಳ ವರೆಗೆ ಜನಸಂಖ್ಯೆಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದ ಚೀನಾ, ಈಗ ಜನಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಹಲವು ಸೌಲಭ್ಯಗಳನ್ನು ಚೀನಾ ಸರಕಾರ ಪ್ರಕಟಿಸಿದ್ದು, ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳು ಮಕ್ಕಳ ಪೋಷಣೆ, ಶಿಕ್ಷಣಕ್ಕೆ ಮಾಡುವ ವೆಚ್ಚಕ್ಕೆ ಆರ್ಥಿಕ ನೆರವು ಒದಗಿಸುವ ಭರವಸೆ ನೀಡಿದೆ.
2005ರಲ್ಲಿ ಚೀನಾದ ತಜ್ಞರ ತಂಡವೊಂದು ನಡೆಸಿದ್ದ ಅಧ್ಯಯನದ ಪ್ರಕಾರ, ಚೀನಾದಲ್ಲಿ ಮಗುವೊಂದನ್ನು ಬೆಳೆಸಲು ಒಂದು ಕುಟುಂವಕ್ಕೆ 74,838 ಡಾಲರ್ ವೆಚ್ಚವಾಗುತ್ತದೆ. 2020ರ ವೇಳೆಗೆ ಈ ವೆಚ್ಚ 308,030 ಡಾಲರ್ಗೆ ಏರಲಿದೆ ಎಂದು ಅಧ್ಯಯನ ವರದಿ ತಿಳಿಸಿತ್ತು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News