ಮೂರು ವರ್ಷಗಳ ಡಿಪ್ಲೊಮಾ ಶಿಕ್ಷಣ ಪಿಯುಸಿಗೆ ಸಮ: ರಾಜ್ಯ ಸರಕಾರ ಆದೇಶ

Update: 2021-09-30 13:33 GMT
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ

ಬೆಂಗಳೂರು, ಸೆ.30: ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್ ಅನ್ನು ಪಿಯುಸಿ ವಿದ್ಯಾರ್ಹತೆಗೆ ತತ್ಸಮಾನವೆಂದು ರಾಜ್ಯ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ನೇರ ನೇಮಕಾತಿ ಅಥವಾ ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಲು ಮತ್ತು ಉನ್ನತ ಶಿಕ್ಷಣ ಪಡೆಯಲು ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷಗಳ ಡಿಪ್ಲೊಮಾ ಶಿಕ್ಷಣವನ್ನು ಪಿಯುಸಿಗೆ ಸಮ ಎಂದು ಸರಕಾರ ಘೋಷಿಸಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಷಯದಲ್ಲಿ ಗೊಂದಲ ಇದ್ದ ಕಾರಣ ತಾನು ಹಲವು ಸಭೆಗಳನ್ನು ಮಾಡಿದ್ದು, ಇದೀಗ ಈ ತೀರ್ಮಾನ ಮಾಡಲಾಗಿದೆ. 2015ಕ್ಕಿಂತ ಹಿಂದಿನ ವರ್ಷಗಳಲ್ಲಿ ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ಕೆಪಿಎಸ್ಸಿ ನಡೆಸುವ ಇಲಾಖಾ ಪರೀಕ್ಷೆಗಳ ಜತೆಗೆ ಕನ್ನಡ ಭಾಷೆ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಅಶ್ವತ್ಥ ನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News