ಐಪಿಎಲ್‌ನ ಅತಿವೇಗದ ಎಸೆತ ದಾಖಲಿಸಿದ ಉಮ್ರಾನ್ ಮಲಿಕ್

Update: 2021-10-07 06:01 GMT
ಉಮ್ರಾನ್ ಮಲಿಕ್  (Image: Twitter)

ಅಬುಧಾಬಿ (ಯುಎಇ): ಸನ್‌ರೈಸರ್ ಹೈದರಾಬಾದ್ (ಎಸ್‌ಆರ್‌ಎಚ್)ನ ವೇಗದ ಬೌಲಿಂಗ್ ತಾರೆ  ಉಮ್ರಾನ್ ಮಲಿಕ್ ಬುಧವಾರ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ವಿರುದ್ಧ ಇಲ್ಲಿನ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 153 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ, 2021ರ ಐಪಿಎಲ್‌ ನಲ್ಲೇ ಅತಿವೇಗದ ಬೌಲಿಂಗ್ ಮಾಡಿದ ಕೀರ್ತಿಗೆ ಪಾತ್ರರಾದರು.

ದೇವದತ್ ಪಡಿಕ್ಕಲ್ ಅವರಿಗೆ ಬೌಲಿಂಗ್ ಮಾಡಲಾದ 9ನೇ ಓವರ್‌ನ ನಾಲ್ಕನೇ ಎಸೆತ 153 ಕಿಲೋಮೀಟರ್ ವೇಗ ಹೊಂದಿತ್ತು. ಆರ್‌ಸಿಬಿ ಬ್ಯಾಟ್ಸ್‌ಮನ್ ಈ ಅತಿವೇಗದ ಎಸೆತಕ್ಕೆ ಒಂದು ರನ್ ಪಡೆದರು.

ಇದಕ್ಕೂ ಮುನ್ನ ರವಿವಾರ ರಾತ್ರಿ ಉಮ್ರಾನ್, ಐಪಿಎಲ್ ಸೀಸನ್‌ನಲ್ಲಿ ಅತಿ ವೇಗದ ಬೌಲಿಂಗ್ ನಡೆಸಿದ ಅಗ್ರ 10 ಮಂದಿಯ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. 21 ವರ್ಷ ವಯಸ್ಸಿನ ಉಮ್ರಾನ್ ತಮ್ಮ ಮೊದಲ ಓವರ್‌ನಲ್ಲೇ 146 ಕಿಲೋಮೀಟರ್ ವೇಗದ ಎಸೆತ ಎಸೆದ ಬಳಿಕ ಅದೇ ಓವರ್‌ನಲ್ಲಿ ಎರಡು ಬಾರಿ 150 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ನಡೆಸಿದರು.

"ಕೆಕೆಆರ್ ವಿರುದ್ಧ ಅತಿವೇಗದ ಎಸೆತದ ಮೂಲಕ ಉಮ್ರಾನ್ ಎಲ್ಲರ ಗಮನ ಸೆಳೆದಿದ್ದಾರೆ" ಎಂದು ಐಪಿಎಲ್ ಅಧಿಕೃತ ಹ್ಯಾಂಡಲ್‌ ನಿಂದ ಟ್ವೀಟ್ ಮಾಡಲಾಗಿತ್ತು.

"ಉಮ್ರಾನ್ ಅವರನ್ನು ನೆಟ್‌ಪ್ರಾಕ್ಟೀಸ್ ಬೌಲರ್ ಆಗಿ ಆಯ್ಕೆ ಮಾಡಲಾಗಿತ್ತು. ಆದರೆ ಟಿ.ನಟರಾಜನ್ ಕೋವಿಡ್ ಕಾರಣದಿಂದ ಆಡಲು ಲಭ್ಯರಿಲ್ಲ. ಇದರಿಂದಾಗಿ ಉಮ್ರಾನ್ ಗೆ ಆಡುವ ಅವಕಾಶ ಸಿಕ್ಕಿತು" ಎಂದು ಕೋಚ್ ರಣಧೀರ್ ಸಿಂಗ್ ಹೇಳಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದ ಬಳಿಕ ಈ ಯುವಪ್ರತಿಭೆ ಮನೆಮಾತಾಗಿದ್ದಾರೆ. ಆತನ ಬಗ್ಗೆ ಅಪಾರ ಹೆಮ್ಮೆ ಇದೆ. ಈತನಿಂದ ಯುವಕರು ಸ್ಫೂರ್ತಿ ಪಡೆಯಬೇಕು ಎನ್ನುವುದು ನಮ್ಮ ಬಯಕೆ ಎಂದು ಅವರು ಹೇಳಿದ್ದಾರೆ.

"ಮಗ ಜಮ್ಮು ಕಾಶ್ಮೀರ ಮಾತ್ರವಲ್ಲದೇ ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾನೆ" ಎಂದು ಉಮ್ರಾನ್ ತಂದೆ ಅಬ್ದುಲ್ ರಶೀದ್ ಬಣ್ಣಿಸಿದ್ದಾರೆ. ಹಲವು ಮಂದಿಯಿಂದ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ಲೆಫ್ಟಿನೆಂಟ್ ಗವರ್ನರ್ ಕೂಡಾ ಆತನ ಯಶಸ್ಸನ್ನು ಅಭಿನಂದಿಸಿದ್ದಾರೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News