ಭಾಶನ್ಚಾರ್ ದ್ವೀಪಕ್ಕೆ 80 ಸಾವಿರಕ್ಕೂ ಅಧಿಕ ರೊಹಿಂಗ್ಯಾ ನಿರಾಶ್ರಿತರ ಸ್ಥಳಾಂತರಕ್ಕೆ ಬಾಂಗ್ಲಾ ನಿರ್ಧಾರ

Update: 2021-10-08 17:58 GMT

ಕಾಕ್ಸ್ ಬಝಾರ್ (ಬಾಂಗ್ಲಾದೇಶ),ಅ.8: ವಿಶ್ವಸಂಸ್ಥೆಯ ಜೊತೆ ಏರ್ಪಡಿಸಿಕೊಂಡಿರುವ ಒಪ್ಪಂದದಡಿ ಬಾಂಗ್ಲಾದೇಶವು 80 ಸಾವಿರಕ್ಕೂ ಅಧಿಕ ರೋಹಿಂಗ್ಯಾ ನಿರಾಶ್ರಿತರನ್ನು ಬಂಗಾಳಕೊಲ್ಲಿಯರುವ ದುರ್ಗಮವಾ ಭಾಶನ್ಚಾರ್ ದ್ವೀಪಕ್ಕೆ ಕಳುಹಿಸಲು ಬಯಸಿರುವುದಾಗಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ನೆರವು ಸಂಸ್ಥೆಗಳ ಆಕ್ಷೇಪಗಳ ಹೊರತಾಗಿಯೂ ಬಾಂಗ್ಲಾವು ಈಗಾಗಲೇ ಮ್ಯಾನ್ಮಾರ್ ನ 19 ಸಾವಿರಕ್ಕೂ ಅಧಿಕ ರೋಹಿಂಗ್ಯ ಮುಸ್ಲಿಂ ನಿರಾಶ್ರಿತರನ್ನು ತನ್ನ ಮುಖ್ಯಭೂಮಿಯಲ್ಲಿರುವ ನಿರಾಶ್ರಿತ ಶಿಬಿರಗಳಿಂದ ತೆರವುಗೊಳಿಸಿ, ಬಂಗಾಳಕೊಲ್ಲಿಯಲ್ಲಿರುವ ಭಾಶನ್ಚಾರ್ ದ್ವೀಪಕ್ಕೆ ಸ್ಥಳಾಂತರಿಸಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿವರ್ಷದಂತೆ ಬಂಗಾಳಕೊಲ್ಲಿಯನ್ನು ಅಪ್ಪಳಿಸುವ ಮುಂಗಾರು ಮಾರುತವು ನವೆಂಬರ್ನಲ್ಲಿ ಕೊನೆಗೊಂಡ ಆನಂತರ ಸಾವಿರಾರು ಮಂದಿಯನ್ನು ಭಾಶನ್ಚಾರ್ ದ್ವೀಪಕ್ಕೆ ಸ್ಥಳಾಂತರಿಸಲಾಗುವುದು ಎಂದು ಬಾಂಗ್ಲಾದೇಶ ನಿರಾಶ್ರಿತ ಆಯುಕ್ತ ಶಾ ರೆಝ್ವಿನ್ ಹಯಾತ್ ಶುಕ್ರವಾರ ತಿಳಿಸಿದ್ದಾರೆ.

ಮುಂದಿನ ವರ್ಷದ ಫೆಬ್ರವರಿಯೊಳಗೆ 81 ಸಾವಿರ ಮಂದಿ ರೋಹಿಂಗ್ಯಗಳನ್ನು ಭಾಶನ್ಚಾರ್ ದ್ವೀಪಕ್ಕೆ ಸ್ಥಳಾಂತರಿಸಲಿದ್ದು, ಈ ಮೂಲಕ ಅಲ್ಲಿ 1 ಸಾವಿರ ರೋಹಿಂಗ್ಯಗಳನ್ನು ನೆಲೆಗೊಳಿಸುವ ಗುರಿಯನ್ನು ಪೂರ್ಣಗೊಳಿಸಲಿದ್ದೇವೆ ಎಂದವರು ಎಎಫ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸಮುದ್ರದಲೆಗಳಿಂದ ಹೊತ್ತುತಂದ ಕೆಸರು ಮಣ್ಣಿನಿಂದ ರೂಪುಗೊಂಡಂತಹ 53 ಚದರ ಕಿ.ಮೀ.ವಿಸ್ತಿರ್ಣದ ಭಾಶನ್ ಚಾರ್ ದ್ವೀಪದಲ್ಲಿ ಆಶ್ರಯಗೃಹಗಳನ್ನು ನಿರ್ಮಿಸಲು ಬಾಂಗ್ಲಾ ಸರಕಾರವು ಈಗಾಗಲೇ 350 ದಶಲಕ್ಷ ಡಾಲರ್ ವೆಚ್ಚಮಾಡಿದೆ ಎಂದರು.

 ಬಾಂಗ್ಲಾದ ಮುಖ್ಯಭೂಮಿಯಿಂದ 60 ಕಿ.ಮೀ. ದೂರದಲ್ಲಿರುವ ಈ ದ್ವೀಪವು ಪ್ರತಿಕೂಲ ಹವಾಮಾನದಿಂದ ಕೂಡಿದ್ದು, ಜನವಾಸಕ್ಕೆ ಯೋಗ್ಯವಲ್ಲವೆಂದು ನೆರವು ಏಜೆನ್ಸಿಗಳು ಅಸಮಾಧಾನ ವ್ಯಕ್ತಪಡಿಸಿವೆ. ನಿರಾಶ್ರಿತರನ್ನು ಬಲವಂತವಾಗಿ ಅಲ್ಲಿಗೆ ಕಳುಹಿಸಲಾಗುತ್ತಿದೆ ಎಂದು ಕೆಲವು ರೋಹಿಂಗ್ಯ ಸಂಘಟನೆಗಳು ಆಪಾದಿಸಿವೆ.ಬಾಂಗ್ಲಾ-ಮ್ಯಾನ್ಮಾರ್ ಗಡಿಯುದ್ದಕ್ಕೂ ಸ್ಥಾಪಿಸಲಾಗಿರುವ ನಿರಾಸ್ರಿತರ ಶಿಬಿರಗಳಲ್ಲಿ 8.50 ಲಕ್ಷಕ್ಕೂ ಅಧಿಕ ರೋಹಿಂಗ್ಯಗಳಿದ್ದಾರೆ. ಅವರಲ್ಲಿ ಬಹುತೇಕ ಮಂದಿ 2017ರಲ್ಲಿ ಮ್ಯಾನ್ಮಾರ್ ಮಿಲಿಟರಿಯ ದಮನ ಕಾರ್ಯಾಚರಣೆಯ ಬಳಿಕ ಬಾಂಗ್ಲಾಕ್ಕೆ ಪಲಾಯನ ಮಾಡಿ ಬಂದವರಾಗಿದ್ದಾರೆ. ಗಡಿಯಾಚೆಯಿಂದ ಹರಿದುಬಂದ ನಿರಾಶ್ರಿತರಿಗೆ ಆಶ್ರಯ ನೀಡಿದ್ದಕ್ಕಾಗಿ ಬಾಂಗ್ಲಾವು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆಯಾದರೂ, ಅವರಿಗೆ ಶಾಸ್ವತ ಮನೆಗಳನ್ನು ಒದಗಿಸುವಲ್ಲಿ ಅಲ್ಪಯಶಸ್ಸನ್ನು ಮಾತ್ರವೇ ಕಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News