ಸರಕಾರಿ ಸಂಸ್ಥೆಗಳ ವಿರುದ್ಧ ಹೇಳಿಕೆ ನೀಡದಂತೆ ಇಮ್ರಾನ್ ಖಾನ್, ಪತ್ನಿಗೆ ನ್ಯಾಯಾಲಯ ಸೂಚನೆ

Update: 2024-04-26 16:21 GMT

ಇಸ್ಲಮಾಬಾದ್: ಸರಕಾರಿ ಸಂಸ್ಥೆಗಳು ಹಾಗೂ ಸಿಬಂದಿಗಳ ವಿರುದ್ಧ ಹೇಳಿಕೆ ನೀಡಬಾರದು ಎಂದು ಪಾಕಿಸ್ತಾನದ ವಿಶೇಷ ನ್ಯಾಯಾಲಯ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಹಾಗೂ ಅವರ ಪತ್ನಿ ಬುಷ್ರಾ ಬೀಬಿಗೆ ಸೂಚಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ `ದಿ ಎಕ್ಸ್‍ಪ್ರೆಸ್ ಟ್ರಿಬ್ಯೂನ್' ವರದಿ ಮಾಡಿದೆ.

ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭ ಸರಕಾರಿ ಸಂಸ್ಥೆಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಬಾರದು ಎಂದು ಇಮ್ರಾನ್ ಮತ್ತವರ ಪತ್ನಿಗೆ ಸೂಚಿಸಿರುವ ನ್ಯಾಯಾಲಯ, ಇಂತಹ ಪ್ರಚೋದನಕಾರಿ ಹೇಳಿಕೆಯನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ಆದೇಶ ನೀಡಿದೆ.

ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಸ್ಥಾಪಕ ಇಮ್ರಾನ್‍ಖಾನ್ ಸೇನೆ, ನ್ಯಾಯಾಂಗ, ಸೇನಾ ಮುಖ್ಯಸ್ಥರು ಸೇರಿದಂತೆ ಸರಕಾರಿ ಸಂಸ್ಥೆಗಳು ಹಾಗೂ ಅಧಿಕಾರಿಗಳ ವಿರುದ್ಧ ಪ್ರಚೋದನಕಾರಿ ರಾಜಕೀಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳು ನ್ಯಾಯಾಂಗದ ಸೌಹಾರ್ದತೆಗೆ ಅಡ್ಡಿಯಾಗಿವೆ ಮತ್ತು ನ್ಯಾಯ ವಿತರಣೆಯಂತಹ ನ್ಯಾಯಾಂಗದ ಕಾರ್ಯಗಳಿಗೆ ಅಡ್ಡಿಪಡಿಸುತ್ತವೆ ಎಂದು ನ್ಯಾಯಾಲಯದ ಆದೇಶ ತಿಳಿಸಿದೆ. `ನ್ಯಾಯಾಲಯದ ಶಿಷ್ಟಾಚಾರಕ್ಕೆ ಅಡ್ಡಿಪಡಿಸುವ ರಾಜಕೀಯ ಅಥವಾ ಪ್ರಚೋದಕ ಹೇಳಿಕೆಗಳನ್ನು ನೀಡದಂತೆ ಪ್ರಾಸಿಕ್ಯೂಷನ್, ಆರೋಪಿಗಳು ಹಾಗೂ ಅವರ ಪರ ವಕೀಲರಿಗೆ ಸೂಚಿಸಿದೆ ಎಂದು ವರದಿ ಹೇಳಿದೆ. 2018ರಿಂದ 2022ರವರೆಗೆ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್, ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದು ತೋಷಖಾನಾ ಪ್ರಕರಣದಲ್ಲಿ 14 ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News