ಗುತ್ತಿಗೆ ನೌಕರರ ಬದುಕಿಗೆ ಬೆಲೆಯಿಲ್ಲವೇ?

Update: 2021-10-08 18:18 GMT

ದೇಶದಲ್ಲಿ 1843ರಲ್ಲಿ ಬ್ರಿಟಿಷರು ಜಾರಿಗೆ ತಂದ ಭಾರತ ಗುಲಾಮಗಿರಿ ಕಾಯ್ದೆಯಿಂದ ಹಿಡಿದು ಪ್ರಸ್ತುತ ರೂಪಾಂತರ ಪಡೆದು ಜಾರಿಗೆ ಬರುತ್ತಿರುವ 2020ರ ಕಾರ್ಮಿಕ ಹಕ್ಕುಗಳ ಕಾನೂನುಗಳಲ್ಲಿ ನ್ಯಾಯ ಇದ್ದಿದ್ದರೆ, ಭಾರತದ ಸಂವಿಧಾನದಲ್ಲಿ ಅನುಚ್ಛೇದ 14ರಿಂದ 41ರವರೆಗೂ ಮೀಸಲಿರುವ ಕಾರ್ಮಿಕರ ಹಕ್ಕುಗಳ ಅಂಶಗಳು ಕಾರ್ಮಿಕರನ್ನು ಕಾಪಾಡುತ್ತಿದ್ದರೆ, 1970ರಲ್ಲಿ ಜಾರಿಯಾಗಿರುವ ಗುತ್ತಿಗೆ ನೌಕರರ ಹಕ್ಕುಗಳ ಕಾಯ್ದೆಗಳಿಗೆ ಜೀವ ಇದ್ದಿದ್ದರೆ ದೇಶದಲ್ಲಿ ಗುತ್ತಿಗೆ ಕಾರ್ಮಿಕರ ಮತ್ತು ಗುತ್ತಿಗೆ ನೌಕರರ ಜೀವನಗಳು ಅಂಧಕಾರದಲ್ಲಿ ಮುಳುಗುತ್ತಿರಲಿಲ್ಲ.

ಪಿಎಚ್.ಡಿ. ಪದವೀಧರನಾದ ನನ್ನನ್ನೂ ಸೇರಿ ನನ್ನಂತಹ ಅನೇಕ ಯುವಕರು ರಾಜ್ಯದ ಅನೇಕ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದು, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಗೊಳ್ಳಲು, ವಿಜ್ಞಾನಿ ಹುದ್ದೆ ಮತ್ತು ಕೃಷಿ ಇಲಾಖೆಯ ಹುದ್ದೆಗಳನ್ನು ಗಳಿಸಲು ಪೂರ್ವ ತಯಾರಿ ನಡೆಸಲು ಸರದಿಯಲ್ಲಿ ನಿಂತಿದ್ದಾರೆ. ಜೀವನಾಧಾರಕ್ಕೆ ಕೆಲವರು ಖಾಸಗಿ ಕಂಪೆನಿಗಳಲ್ಲಿ ಮತ್ತು ಕೆಲವರು ವಿಶ್ವವಿದ್ಯಾನಿಲಯಗಳಲ್ಲಿ ಗುತ್ತಿಗೆ ಆಧಾರದಲ್ಲಿ ಬೋಧಕರಾಗಿ, ಸಂಶೋಧನೆಯಲ್ಲಿ ಆರ್‌ಎ ಮತ್ತು ಎಸ್‌ಆರ್‌ಎಫ್‌ಗಳಾಗಿ ಕೆಲಸಕ್ಕೆ ಸೇರಿರುತ್ತಾರೆ. ಖಾಸಗಿ ಕಂಪೆನಿಗಳ ಅನುಭವವನ್ನು ಸರಕಾರಿ ಕೃಷಿ ವಿಶ್ವವಿದ್ಯಾನಿಲಯಗಳ ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇಮಕಾತಿಗೆ ಪರಿಗಣಿಸುವುದಿಲ್ಲವಾದ್ದರಿಂದ, ಅನೇಕ ಪಿಎಚ್.ಡಿ. ಪದವೀಧರರು ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಅನುಭವ ಪತ್ರವನ್ನು ಪಡೆಯಲು ಕಡಿಮೆ ವೇತನಕ್ಕೆ ಗುತ್ತಿಗೆ ಆಧಾರಿತ ಕೆಲಸಗಳಿಗೆ ಸೇರುತ್ತಾರೆ.

ಖಾಸಗಿ ಕಂಪೆನಿಗೆ ಸೇರಿದವರಿಗೆ ತಿಂಗಳ ಮೊದಲ ವಾರದಲ್ಲಿಯೇ ಬಹುತೇಕ ದಿನಾಂಕ 1ರಂದೇ ವೇತನ ಸಿಗುತ್ತದೆ, ಆದರೆ ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ (ಸಂಸ್ಥೆಗಳಲ್ಲಿ) ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವ ನೌಕರರ ಪಾಡು ಹೇಳತೀರದು. ಕಾರಣ ಬೆರಳೆಣಿಕೆಯಷ್ಟು ನೌಕರರಿಗೆ ಮೊದಲ ವಾರದಲ್ಲೇ ವೇತನ ದೊರೆತರೆ, ಬಹುತೇಕರಿಗೆ ವೇತನ ಸಿಗುವುದೇ 2 ಅಥವಾ 3 ತಿಂಗಳ ನಂತರ, ಪ್ರಶ್ನೆ ಮಾಡಿದರೆ ಕೆಲಸ ಕಳೆದುಕೊಳ್ಳುವ ಭಯ ಮತ್ತು ಆತಂಕ. ಎಂ.ಎಸ್ಸಿ/ಪಿಎಚ್.ಡಿ. ಮಾಡಿ ಸಂಸಾರ ಕಟ್ಟಿಕೊಂಡು, ಬೆಂಗಳೂರಿನಂತಹ ನಗರಗಳಲ್ಲಿ ಬಾಡಿಗೆ ಕಟ್ಟಿಕೊಂಡು ಬದುಕುವವರಿಗೆ ಸರಿಯಾದ ಸಮಯದಲ್ಲಿ ವೇತನ ನೀಡದಿದ್ದರೆ ಬದುಕುವುದಾದರೂ ಹೇಗೆ ಸಾಧ್ಯ? ಶ್ರಮಿಕನ ಬೆವರು ಆರುವ ಮುನ್ನ ಅವನ ಕೂಲಿ ನೀಡಬೇಕೆಂದು ಪ್ರವಾದಿಯೋರ್ವರ ಬೋಧನೆ ಇದೆ. ಆದರೆ ಇಲ್ಲಿ ಶ್ರಮಿಕ ಸಾಲಗಾರನಾಗಿ ಬೀದಿಗೆ ಬರುವವರೆಗೂ ವೇತನ ದೊರೆಯುವುದಿಲ್ಲ. ಒಬ್ಬರು ಸರಕಾರಿ ನೌಕರ, ಇನ್ನೊಬ್ಬರು ಗುತ್ತಿಗೆ ನೌಕರ, ಅರ್ಹತೆ ಮತ್ತು ಕೆಲಸವು ಒಂದೇ ಆಗಿರುವಾಗ ಕನಿಷ್ಠ ಗುತ್ತಿಗೆ ನೌಕರರಿಗೂ ಗೌರವವಾದ, ಜವಾಬ್ದಾರಿಯುತ ಜೀವನವಿದೆ ಎಂಬುದನ್ನು ಸರಕಾರಿ ಸಂಸ್ಥೆಗಳು ಅರಿಯಬೇಕಲ್ಲವೇ?.
ಕೃಷಿ ಶಿಕ್ಷಣ ಮತ್ತು ಸಂಶೋಧನೆಯನ್ನು ಪೋಷಿಸುವ ಉನ್ನತ ಸಂಸ್ಥೆಯಾದ ಭಾರತೀಯ ಅನುಸಂಧಾನ ಪರಿಷತ್ತಿನ ಆದೇಶಗಳಲ್ಲಿ ಗುತ್ತಿಗೆ ಆಧಾರದಲ್ಲಿ ಸೇರಿಕೊಳ್ಳುವ ಆರ್‌ಎ ಮತ್ತು ಎಸ್‌ಆರ್‌ಎಫ್ ನೌಕರರಿಗೆ, ಸರಕಾರಿ ನೌಕರನ ಹಾಗೆ ಕೆಲವು ಸೌಲಭ್ಯಗಳಿವೆ. ಆದರೂ ಸಕಾಲಕ್ಕೆ ರಜೆ ನೀಡಲಾಗುವುದಿಲ್ಲ, ಬದಲಿ ರಜೆ ನೀಡಲಾಗುವುದಿಲ್ಲ, ಕೆಲಸದ ಸಮಯದ ಅವಧಿ ನಿಗದಿ ಇಲ್ಲ ಮತ್ತು ಮಹಿಳೆಯರ ಹೆರಿಗೆಗೆ ರಜೆ ನೀಡದೆ ಕೆಲಸದಿಂದ ತೆಗೆಯಲಾಗುವುದು.
ಇದಲ್ಲದೆ ಈ ಸರಕಾರಿ ವಿಶ್ವವಿದ್ಯಾನಿಲಯಗಳು ನೀಡುವ ವೇತನ ಬಿಲ್ಲನ್ನು ನೀಡಿ ಒಂದು ಕ್ರೆಡಿಟ್ ಕಾರ್ಡ್ ಸಹ ಪಡೆಯಲಾಗುವುದಿಲ್ಲ, ಬ್ಯಾಂಕುಗಳು ಸಾಲ ನೀಡುವುದಿಲ್ಲ, ಕೆಲಸ ಹೆಚ್ಚಿದ್ದ್ದರೂ ವರ್ಷಗಳೇ ಕಳೆದರೂ ಗುತ್ತಿಗೆ ಹುದ್ದೆಗಳಿಗೆ ವೇತನ ಹೆಚ್ಚುವುದಿಲ್ಲ ಮತ್ತು ಆರೋಗ್ಯ ವಿಮೆ ಸಹ ಇರುವುದಿಲ್ಲ. ಒಂದೇ ರೀತಿಯ ಕೆಲಸಕ್ಕೆ ತಾರತಮ್ಯದ ವೇತನ, ಸಾಮಾಜಿಕ ಭದ್ರತೆ ಇರುವುದಿಲ್ಲ ಮತ್ತು ಒಪ್ಪಂದದ ಪತ್ರದಲ್ಲಿ ಕಾರಣವಿಲ್ಲದೆ ಯಾವಾಗ ಬೇಕಾದರೂ ತೆಗೆಯಬಹುದೆಂಬ ಸೂಚನೆ ಸಹ ಇರುತ್ತದೆ. ವಿದ್ಯಾವಂತರ ಪಾಡೇ ಹೀಗಾದರೆ, ಅವಿದ್ಯಾವಂತ ಗುತ್ತಿಗೆ ಕಾರ್ಮಿಕರ ಜೀವನ ಹೇಗೆ.? ಈ ಎಲ್ಲಾ ಆತಂಕಗಳನ್ನು ಮೀರಿಯೂ ಕೆಲಸ ಮಾಡುವ ನಮಗೆ ಗುತ್ತಿಗೆ ನೌಕರರು ದೇಶದ ಎರಡನೇ ದರ್ಜೆಯ ಪ್ರಜೆಗಳು ಎನಿಸುತ್ತದೆ. ನಮಗೂ ಸಂವಿಧಾನಬದ್ಧವಾಗಿ ಗೌರವಯುತವಾಗಿ ಬದುಕುವ ಹಕ್ಕಿದೆ ಹಾಗಾಗಿ ತಿಂಗಳ 1ನೇ ತಾರೀಕಿನಂದೇ ಗುತ್ತಿಗೆ ನೌಕರರಿಗೂ/ಕಾರ್ಮಿಕರಿಗೂ ವೇತನ ಸಿಗುವ ಹಾಗೆ ಸರಕಾರ ಕೃಷಿ ಸಂಬಂಧಿತ ಎಲ್ಲಾ ವಿಶ್ವವಿದ್ಯಾನಿಲಯಗಳಿಗೂ ಆದೇಶ ನೀಡಬೇಕು.

Writer - ಡಾ. ರಮೇಶ್ ವಿ., ಬೆಂಗಳೂರು

contributor

Editor - ಡಾ. ರಮೇಶ್ ವಿ., ಬೆಂಗಳೂರು

contributor

Similar News