"ಮೋದಿ ಸರ್ವಾಧಿಕಾರಿಯಲ್ಲ" ಎಂಬ ಅಮಿತ್‌ ಶಾ ಹೇಳಿಕೆಯನ್ನು ವ್ಯಂಗ್ಯವಾಡಿದ ಖ್ಯಾತ ಟೆನಿಸ್‌ ತಾರೆ ಮಾರ್ಟಿನಾ ನವ್ರಾಟಿಲೋವ

Update: 2021-10-10 18:41 GMT

ಹೊಸದಿಲ್ಲಿ: ದೇಶದಾದ್ಯಂತ ರೈತರ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಪಾಪ್‌ ತಾರೆ ರಿಹಾನ್ನಾ ರೈತರನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದು ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದೀಗ ಹಿಂದೂಸ್ತಾನ್‌ ಟೈಮ್ಸ್‌ ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಉಲ್ಲೇಖಿಸಿರುವ ಖ್ಯಾತ ಅಂತಾರಾಷ್ಟ್ರೀಯ ಟೆನಿಸ್‌ ತಾರೆ ಮಾರ್ಟಿನಾ ನವ್ರಾಟಿಲೋವಾ ಪ್ರಧಾನಿ ಮೋದಿಯ ಕುರಿತು ವ್ಯಂಗ್ಯವಾಡಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿಯಲ್ಲ. ಆದರೆ, ಭಾರತ ದೇಶಕಂಡ ಅತ್ಯಂತ ಪ್ರಜಾಪ್ರಭುತ್ವ ನಾಯಕ ನರೇಂದ್ರ ಮೋದಿ ಆಗಿದ್ದಾರೆ" ಎಂಬ ಅಮಿತ್ ಶಾ ಅವರ ಹೇಳಿಕೆಯ ಕುರಿತ ಸುದ್ದಿಯ ತುಣುಕನ್ನು ಟ್ವೀಟ್‌ ಶೇರ್‌ ಮಾಡಿರುವ ನವ್ರಾಟಿಲೋವಾ, "ಇದು ನನ್ನ ಮುಂದಿನ ಜೋಕ್‌ ಗೆ" ಎಂದು ಕಟಕಿಯಾಡಿದ್ದಾರೆ.

ಈ ಟ್ವೀಟ್‌ ಗೆ ಪ್ರತಿಕ್ರಿಯಿಸಿರುವ ಬಳಕೆದಾರರು, "ಇದು ಭಾರತದ ವಿರುದ್ಧದ ಅಂತಾರಾಷ್ಟ್ರೀಯ ಗೂಢಾಲೋಚನೆ ಎಂಬ ಸಾವಿರಾರು ಕಾಪಿ ಪೇಸ್ಟ್‌ ಟ್ವೀಟ್‌ ಗಳನ್ನು ಎದುರಿಸಲು ನೀವು ಸಿದ್ಧರಾಗಿ" ಎಂದಿದ್ದಾರೆ. "ನವ್ರಾಟಿಲೋವಾ ಬದಲು ನವರತ್ನ ತೈಲವನ್ನು ಭಕ್ತರು ಬಹಿಷ್ಕರಿಸಲು ಪ್ರಾರಂಭಿಸುತ್ತಾರೆ" ಎಂದು ಇನ್ನೋರ್ವ ಬಳಕೆದಾರರು ವ್ಯಂಗ್ಯವಾಡಿದ್ದಾರೆ.

ಮಾರ್ಟಿನಾ ನವ್ರಾಟಿಲೋವಾ ಖ್ಯಾತ ಅಂತಾರಾಷ್ಟ್ರೀಯ ಟೆನಿಸ್‌ ಆಟಗಾರ್ತಿಯಾಗಿದ್ದು, 18 ಗ್ರ್ಯಾಂಡ್‌ ಸ್ಲಾಮ್‌, 31 ಪ್ರಮುಖ ಮಹಿಳಾ ಡಬಲ್ಸ್‌ ಕಪ್‌ ಹಾಗೂ 10 ಪ್ರತಿಷ್ಠಿತ ಮಿಕ್ಸೆಡ್‌ ಡಬಲ್ಸ್‌ ಟೈಟಲ್‌ ಗಳನ್ನು ಗೆದ್ದು ದಾಖಲೆ ನಿರ್ಮಿಸಿದ್ದು, ಅವರು ಈಗ ನಿವೃತ್ತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News