ಬೆಂಗಳೂರಿನಲ್ಲಿ ಕುಸಿಯುವ ಹಂತದಲ್ಲಿದ್ದ ಮೂರು ಕಟ್ಟಡಗಳು ನೆಲಸಮ; ಕಣ್ಣೀರಿಟ್ಟ ನಿವಾಸಿಗಳು

Update: 2021-10-13 12:30 GMT

ಬೆಂಗಳೂರು, ಅ.13: ರಾಜಧಾನಿ ಬೆಂಗಳೂರಿನಲ್ಲಿ ಕಟ್ಟಡಗಳು ನೆಲಕ್ಕುರುಳುವ ಘಟನೆಗಳು ಮುಂದುವರಿದಿದ್ದು, ಮೂರು ಕಟ್ಟಡಗಳು ಕುಸಿದಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿನ ನಗರ್ಥಪೇಟೆ ವ್ಯಾಪ್ತಿಯಲ್ಲಿ 90 ವರ್ಷಗಳ ಹಳೆಯ ಶಿಥಿಲಾವ್ಯವಸ್ಥೆಯಲ್ಲಿರುವ ಒಂದು ಅಂತಸ್ತಿನ ಮಣ್ಣಿನ ಕಟ್ಟಡ ಬುಧವಾರ ಬೆಳಗ್ಗೆ ಬಿದ್ದಿದೆ. ಆದರೆ, ಆರು ವರ್ಷಗಳಿಂದ ಈ ಕಟ್ಟಡದಲ್ಲಿ ಯಾರು ವಾಸ ಇಲ್ಲದಿದ್ದರಿಂದ ಅನಾಹುತವಾಗಲಿ ಅಥವಾ ಪ್ರಾಣಹಾನಿ ಆಗಿಲ್ಲ ಎಂದು ಪಾಲಿಕೆ ತಿಳಿಸಿದೆ. 

ಕಮಲಾನಗರದ ಶಂಕರ್ ನಾಗ್ ಬಸ್ ನಿಲ್ದಾಣದ ಬಳಿಯ ಯಾವುದೇ ಕ್ಷಣದಲ್ಲಾದರೂ ಕುಸಿಯುವ ಆತಂಕಕ್ಕೆ ಕಾರಣವಾಗಿದ್ದ ಮೂರು ಅಂತಸ್ತಿನ ಕಟ್ಟಡವನ್ನು ಅಕ್ಕಪಕ್ಕದ ನಿವಾಸಿಗಳಿಗೆ ಹಾನಿಯಾಗದಂತೆ ತೆರವುಗೊಳಿಸುವ ವೇಳೆ ಕುಸಿದು ಬಿದ್ದು ಮತ್ತೊಂದು ಕಟ್ಟಡಕ್ಕೂ ಹಾನಿಯಾಯಿತು. 

ಹಾನಿಯಾಗಿದ್ದ ಕಟ್ಟಡ ಕೂಡ ಕುಸಿತದ ಭೀತಿಗೆ ಸಿಲುಕಿದ್ದರಿಂದ ಕಾರ್ಯಾಚರಣೆ ಮುಂದುವರಿಸಿ ಅದನ್ನು ತೆರವುಗೊಳಿಸಲಾಗಿದ್ದು ಎರಡು ಕಟ್ಟಡಗಳ ತೆರವು ಕಾರ್ಯದ ವೇಳೆ ಯಾರಿಗೂ ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ. ಅಧಿಕಾರಿಗಳು ಕಟ್ಟಡ ಕೆಡವಲು ಮುಂದಾದಾಗ ನಿವಾಸಿಗಳು ಕಣ್ಣೀರಿಡುತ್ತಿದ್ದ ದೃಶ್ಯ ಕಂಡುಬಂತು.

ರಾಜೇಶ್ವರಿ ಅವರಿಗೆ ಸೇರಿದ ಮೂರು ಅಂತಸ್ತಿನ ಕಟ್ಟಡ ಕುಸಿದು ಬೀಳುವ ಹಂತದಲ್ಲಿದ್ದ ಸ್ಥಳಕ್ಕೆ ಸಚಿವ ಗೋಪಾಲಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರ್ಯಾಚರಣೆ ಮಾಹಿತಿ ಪಡೆದರು. ನಗರದಲ್ಲಿ ಸುರಿಯುತ್ತಿರುವ ಮಳೆಗೆ ಇದರ ತಳಪಾಯ ಕುಸಿತದಿಂದಾಗಿ ಕುಸಿಯುವ ಹಂತಕ್ಕೆ ತಲುಪಿತ್ತು. 

ಬುಧವಾರ ತೆರವು ಕಾರ್ಯಾಚರಣೆ ವೇಳೆ ಪಕ್ಕದ ಕಟ್ಟಡಕ್ಕೂ ಹಾನಿಯಾಗಿದ್ದು, ಆ ಕಟ್ಟಡ ತೆರವಿಗೂ ನೋಟಿಸ್ ನೀಡಲಾಗಿತ್ತಾದರೂ ಕುಸಿಯವ ಹಂತದಲ್ಲಿದ್ದರಿಂದ ಅದನ್ನು ಉರುಳಿಸಲಾಗಿದೆ. ಮಳೆಯಿಂದ ಕಟ್ಟಡದ ಪಾಯ ಕುಸಿದು ಮಂಗಳವಾರ ರಾತ್ರಿ ವಾಲಿಕೊಂಡಿತ್ತು. ಕಟ್ಟಡದಲ್ಲಿ ವಾಸವಿದ್ದ ಕುಟುಂಬಸ್ಥರನ್ನು ಖಾಲಿ ಮಾಡಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿತ್ತು.  ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 

ಸಚಿವರ ಭೇಟಿ: ಸ್ಥಳೀಯ ಶಾಸಕರೂ ಆಗಿರುವ ಸಚಿವ ಗೋಪಾಲಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಅವರು, ಕಟ್ಟಡದಲ್ಲಿ ವಾಸವಾಗಿದ್ದವರನ್ನು ರಾತ್ರಿಯೇ ಸುರಕ್ಷಿತ ಜಾಗಕ್ಕೆ ರವಾನಿಸಲಾಗಿತ್ತು ಎಂದು ತಿಳಿಸಿದರು.

ಕಟ್ಟಡ ಅಪಾಯದ ಸ್ಥಿತಿಯಲ್ಲಿದೆ ಎಂದು ಬಿಬಿಎಂಪಿ ಹಿಂದೆಯೇ ನೋಟಿಸ್ ನೀಡಿತ್ತು. ಆದರೆ ಅದನ್ನು ನಿರ್ಲಕ್ಷ್ಯ ಮಾಡಿ ಮಾಲೀಕರು ಲಕ್ಷಾಂತರ ರೂಗಳನ್ನು ತೆಗೆದುಕೊಂಡು ಹೋಗಿದ್ದು ಪತ್ತೆಯಾಗಿಲ್ಲ.ಅವರ ಹುಡುಕಾಟದಲ್ಲಿರುವ ಪೊಲೀಸರು ಸೂಕ್ತ ತನಿಖೆ ಮಾಡಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News