'ರಾಜ್ಯದಲ್ಲಿನ ವಕ್ಫ್ ಆಸ್ತಿಗಳ ರಕ್ಷಣೆಯಲ್ಲಿ ವಕ್ಫ್ ಬೋರ್ಡ್ ವಿಫಲ': ಆರೋಪ

Update: 2021-10-15 13:24 GMT

ಬೆಂಗಳೂರು, ಅ.15: ರಾಜ್ಯದಲ್ಲಿ ಸಾವಿರಾರು ಎಕರೆ ವಕ್ಫ್ ಆಸ್ತಿಗಳು ಒತ್ತುವರಿಯಾಗಿದ್ದು, ಅವುಗಳನ್ನು ರಕ್ಷಿಸುವಲ್ಲಿ ವಕ್ಫ್ ಬೋರ್ಡ್ ಸಂಪೂರ್ಣವಾಗಿ ವಿಫಲವಾಗಿದೆ. ಅದಾಗ್ಯೂ, ವಕ್ಫ್ ಬೋರ್ಡ್‍ಗೆ ರಚನೆಯಾದಾಗಲೆಲ್ಲ ಅನೇಕ ಸಮರ್ಥ ವ್ಯಕ್ತಿಗಳು ಅದರ ಭಾಗವಾಗಿದ್ದರೂ, ಅಲ್ಲಿನ ಭ್ರಷ್ಟಾಚಾರ, ವಂಚನೆ ಮತ್ತು ಹಗರಣಗಳಿಗೆ ಕಡಿವಾಣ ಹಾಕಲು ಮಾತ್ರ ಸಾಧ್ಯವಾಗಲಿಲ್ಲ ಎಂದು ರಾಜ್ಯದ ಸಾಮಾಜಿಕ ಸಂಘ ಸಂಸ್ಥೆಗಳು ಆರೋಪಿಸಿವೆ.

ನಗರದ ಕ್ವೀನ್ಸ್ ರಸ್ತೆಯಲ್ಲಿರುವ ದಾರುಸ್ಸಲಾಮ್ ಸಭಾಂಗಣದಲ್ಲಿ ‘ವಿಷನ್ ಕರ್ನಾಟಕ’ ಆಯೋಜಿಸಿದ್ದ ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಸದ್ಬಳಕೆ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಸಂಘ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಸದ್ಬಳಕೆ ವಿಚಾರದಲ್ಲಿ ರಾಜ್ಯ ವಕ್ಫ್ ಬೋರ್ಡ್ ಮೇಲೆ ಒತ್ತಡ ಹೇರಲು ಸಮಾಜದ ವಿವಿಧ ವರ್ಗಗಳ ಪ್ರತಿನಿಧಿಗಳನ್ನು ಒಳಗೊಂಡು ಒಂದು ‘ಪ್ರೆಷರ್ ಗ್ರೂಪ್’ ರಚನೆ ಮಾಡುವ ವಿಚಾರಕ್ಕೆ ಈ ಸಂವಾದದಲ್ಲಿ ಭಾಗವಹಿಸಿದ್ದ ಎಲ್ಲರೂ ಸರ್ವಾನುಮತದಿಂದ ನಿರ್ಧರಿಸಿದರು.

ಈ ಪ್ರೆಷರ್ ಗ್ರೂಪ್‍ನಲ್ಲಿ ಕಾನೂನು ಕೋಶದ ಜೊತೆಗೆ ವಕ್ಫ್ ಆಸ್ತಿಗಳಲ್ಲಿ ತಲೆದೋರಿರುವ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಅಗತ್ಯವಿರುವ ಕಾರ್ಯವಿಧಾನಗಳನ್ನು ಕೈಗೊಳ್ಳುವ ಕುರಿತು ಚರ್ಚಿಸಲು ನಿರ್ಧರಿಸಲಾಯಿತು.

ಕಾರ್ಯಾಗಾರದ ಕುರಿತು ಪ್ರತಿಕ್ರಿಯಿಸಿದ ವಿಷನ್ ಕರ್ನಾಟಕದ ಸಂಚಾಲಕ ಮುಖ್ತಾರ್ ಅಹ್ಮದ್, ಇದು ಕೇವಲ ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ವಕ್ಫ್ ಆಸ್ತಿಗಳನ್ನು ರಕ್ಷಣೆ ಮಾಡುವ ವಿಚಾರದಲ್ಲಿ ರಾಜ್ಯಾದ್ಯಂತ ಒಂದು ಅಭಿಯಾನವಾಗಿ ಇದನ್ನು ಪರಿವರ್ತಿಸಲಾಗುವುದು ಎಂದರು.

ಕಾರ್ಯಾಗಾರದಲ್ಲಿ ನ್ಯಾಯವಾದಿ ಅಯ್ಯೂಬ್ ಖಾನ್, ಅಸ್ರಾ ಫೌಂಡೇಶನ್‍ನ ಸಾಜಿದಾ ಬೇಗಂ, ವಕ್ಫ್ ಪ್ರೊಟೆಕ್ಷನ್ ಆಕ್ಷನ್ ಕಮಿಟಿಯ ಮುಹಮ್ಮದ್ ಇಲ್ಯಾಸ್, ಮುಸ್ಲಿಮ್ ಯುನೈಟೆಡ್ ಫ್ರಂಟ್‍ನ ಸೈಯದ್ ಇಕ್ಬಾಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News