ಕರ್ನಾಟಕದಲ್ಲಿ ಕುಲಾಂತರಿ ಕ್ಷೇತ್ರ ಪ್ರಯೋಗಗಳಿಗೆ ಅನುಮತಿ ಬೇಡ

Update: 2021-10-16 07:07 GMT

ಮೆಸರ್ಸ್‌ ರ್ಯಾಲಿಸ್ ಇಂಡಿಯಾ ಲಿಮಿಡೆಡ್ ಕಂಪೆನಿಯು ದಿನಾಂಕ: 03.07.2021ರಂದು ಸರಕಾರಕ್ಕೆ ಅರ್ಜಿ ಸಲ್ಲಿಸಿ, ಕುಲಾಂತರಿ ಹತ್ತಿ ಮತ್ತು ಮೆಕ್ಕೆ ಜೋಳದ ಮೇಲೆ ನಿರ್ಬಂಧಿತ ಕ್ಷೇತ್ರ ಪ್ರಯೋಗಗಳನ್ನು ನಡೆಸಲು ಎನ್‌ಒಸಿ (ಅನುಮತಿ) ಕೇಳಿದೆ. ಇದಕ್ಕೆ ನಾವು ನಮ್ಮ ಬಲವಾದ ವಿರೋಧವನ್ನು ವ್ಯಕ್ತಪಡಿಸುತ್ತಾ ಸರಕಾರ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಕುಲಾಂತರಿ ಕ್ಷೇತ್ರ ಪ್ರಯೋಗಗಳಿಗೆ ಅನುಮತಿ ನೀಡಬಾರದೆಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ. ಅದಕ್ಕೆ ಈ ಕೆಳಗಿನ ಕಾರಣಗಳನ್ನು ಮುಂದಿಡುತ್ತಿದ್ದೇವೆ.

ಮೊತ್ತಮೊದಲನೆಯದಾಗಿ, ನಮ್ಮಲ್ಲಿ ಕುಲಾಂತರಿ ಮೆಕ್ಕೆಜೋಳ ಮತ್ತು ಇನ್ನೊಂದು ಕುಲಾಂತರಿ ಹತ್ತಿಯ ಅಗತ್ಯ ಖಂಡಿತಾ ಇಲ್ಲ. 2002ರಲ್ಲಿ ಮೊನ್ಸಾಂಟೊ ಕಂಪೆನಿಯ ಕುಲಾಂತರಿ ಬಿಟಿ ಹತ್ತಿಯನ್ನು ವಾಣಿಜ್ಯವಾಗಿ ಬೆಳೆಯಲು ಕರ್ನಾಟಕ ಸರಕಾರ ಅನುಮತಿ ನೀಡಿದ ಒಂದೆರಡೇ ವರ್ಷಗಳಲ್ಲಿ ನಮ್ಮ ರೈತರು ಬೆಳೆಯುತ್ತಿದ್ದಂತಹ ಡಿಸಿಎಚ್-32, ಎನ್‌ಎಚ್-44, ಜಯಧರ, ಸುಯೋಧರ, ಅಪ್ಲಾಂಡ, ವರಲಕ್ಷ್ಮಿ, ಪಂಡರಾಪುರಿ ಇನ್ನೂ ಮುಂತಾದ ವಿವಿಧ ಕಾಲಗಳಲ್ಲಿ, ವಿವಿಧ ಬೆಳೆಗಳ ಜೊತೆ ಬೆಳೆಯುತ್ತಿದ್ದ ಹತ್ತಿ ಬೀಜಗಳೆಲ್ಲಾ ಹೇಳಹೆಸರಿಲ್ಲದಂತೆ ನಾಶವಾದವು. ಕೇವಲ ಮುಂಗಾರಿನಲ್ಲಿ, ಅದೂ ಏಕಬೆಳೆಯಾಗಿ ಬೆಳೆಯಬಲ್ಲ ಬಿಟಿ ಹತ್ತಿಯು ರೈತರಿಗಿದ್ದ ಎಲ್ಲಾ ಆಯ್ಕೆಗಳನ್ನು ಕಸಿದುಕೊಂಡು ಮೊನ್ಸಾಂಟೊ ಕಂಪೆನಿಯ ದುಬಾರಿ ಬೀಜದ ದಾಸರಾಗಿಸಿತು. ಬೆಳೆ ವೈವಿಧ್ಯವನ್ನು ನಾಶಪಡಿಸಿದ್ದೇ ಅಲ್ಲದೆ, ಮಣ್ಣು, ನೀರು, ಪರಿಸರ, ಜನ, ಜಾನುವಾರು, ಪಕ್ಷಿ, ಕೀಟಗಳನ್ನೂ ಒಳಗೊಂಡಂತೆ ಸಕಲ ಜೀವಜಂತುಗಳ ಆರೋಗ್ಯದ ಮೇಲೆ ಕುಲಾಂತರಿ ಬೆಳೆ ಉಂಟುಮಾಡುವ ಪರಿಣಾಮ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿಯೇ ವೈಜ್ಞಾನಿಕವಾಗಿ ಸಾಬೀತಾಗಿದೆ. ಹೀಗಿರುವಾಗ ಸರಕಾರ ರೈತರ ಬೀಜ ಸ್ವಾತಂತ್ರ್ಯ ಮತ್ತು ಬೆಳೆ ವೈವಿಧ್ಯವನ್ನು ಕಾಪಾಡಲು ಸಹಾಯವಾಗುವ ವಿವಿಧ ಹತ್ತಿ ಬೀಜಗಳನ್ನು ವಾಪಸ್ ತರುವಲ್ಲಿ ಕೆಲಸ ಮಾಡಬೇಕೇ ಹೊರತು ಮತ್ತಷ್ಟು ಸರ್ವನಾಶದೆಡೆಗೆ ಕೊಂಡೊಯ್ಯುವ ಕುಲಾಂತರಿ ಬೀಜಗಳನ್ನಲ್ಲ. ಅಷ್ಟಕ್ಕೂ, ಈಗಾಗಲೇ ಹತ್ತಿಯಲ್ಲಿ ಕಾಯಿಕೊರಕ ನಿಯಂತ್ರಣಕ್ಕೆ ಬಿಟಿ ಕುಲಾಂತರಿ ಬೀಜ ಇರುವಾಗ, ಪ್ರಸ್ತುತ ರ್ಯಾಲಿಸ್ ಕಂಪೆನಿಯು ಹತ್ತಿಯಲ್ಲಿ ಯಾವ ಹೊಸ ಅಂಶ ಅಥವಾ ಸಮಸ್ಯೆಗೆ ಸಂಬಂಧಿಸಿ ಈ ಕುಲಾಂತರಿ ಪ್ರಯೋಗವನ್ನು ಮಾಡಹೊರಟಿದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಮೆಟಾಹೆಲಿಕ್ಸ್ ಎನ್ನುವ ಕಂಪೆನಿಯನ್ನು ರ್ಯಾಲಿಸ್ ಕಂಪೆನಿ ಕೊಂಡುಕೊಳ್ಳುವ ಸಮಯದಲ್ಲಿ ಮೆಟಾಹೆಲಿಕ್ಸ್ ಕಂಪೆನಿಯು ಹತ್ತಿಯಲ್ಲಿ ಸ್ಪೊಡಾಪ್ಟೆರಾ (ಎಲೆ ತಿನ್ನುವ ತಂಬಾಕು ಹುಳ) ನಿಯಂತ್ರಣಕ್ಕೆ Cry1C ವಂಶವಾಹಿಯನ್ನು ಒಳಗೊಳ್ಳಿಸಿ ಕುಲಾಂತರಿ ಹತ್ತಿ ತಳಿಯೊಂದನ್ನು ಅಭಿವೃದ್ಧಿಪಡಿಸಿತ್ತು. ಅದರ ಜೀವ ಸುರಕ್ಷತಾ ಪರೀಕ್ಷೆಗಳೆಲ್ಲಾ ಸಂಪೂರ್ಣಗೊಂಡಿತ್ತೆಂದು ರ್ಯಾಲಿಸ್ ಕಂಪೆನಿಯ ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ದಾಖಲಾಗಿದೆ. ಈಗ ಮೆಟಾಹೆಲಿಕ್ಸ್ ಕಂಪೆನಿ ಮಾಡಿದ್ದ ಈ ಪ್ರಯೋಗವನ್ನು ಕೈಬಿಟ್ಟು ಹೊಸದಾಗಿ ಗುಲಾಬಿ ಕಾಯಿಕೊರಕ (ಪಿಂಕ್ ಬೋಲ್‌ವರ್ಮ್) ನಿಯಂತ್ರಣಕ್ಕೆ ಕುಲಾಂತರಿ ತಳಿಯನ್ನು ಸಿದ್ಧಪಡಿಸುವ ಯೋಚನೆ ಇರುವುದಾಗಿ ರ್ಯಾಲಿಸ್ ಕಂಪೆನಿಯ ವಿಜ್ಞಾನಿಗಳು ಹೇಳುತ್ತಿದ್ದಾರೆ. ಇವೆಲ್ಲಾ ತೀರಾ ಗೊಂದಲಮಯ ಹೇಳಿಕೆಗಳಾಗಿವೆ.

ಇನ್ನು ಮೆಕ್ಕೆಜೋಳದ ವಿಚಾರಕ್ಕೆ ಬಂದರೆ, ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕದ ಕೃಷಿಯನ್ನು ಮೆಕ್ಕೆಜೋಳ ಆವರಿಸಿಕೊಂಡಿರುವ ಪ್ರಮಾಣ ಮತ್ತು ವೇಗವನ್ನು ನೋಡಿದರೆ ದಿಗ್ಭ್ರಮೆಯಾಗುತ್ತದೆ. ಪಯೊನಿಯರ್, ಸಿಜೆಂಟಾ, ಅಡ್ವಾಂಟ, ಯುಪಿಎಲ್(ಯುನೈಡೆಡ್ ಫಾಸ್ಫರಸ್ ಲಿಮಿಟೆಡ್), ಮಹಿಕೋ ಮುಂತಾದ ದೈತ್ಯ ಕಂಪೆನಿಗಳು ಸ್ಪರ್ಧೆಗೆ ಬಿದ್ದು ಪ್ರತಿ ವರ್ಷ ಅಧಿಕ ಇಳುವರಿಯ ಹೊಸ ಹೊಸ ಹೈಬ್ರಿಡ್ ಮೆಕ್ಕೆಜೋಳದ ಬೀಜಗಳನ್ನು ದುಬಾರಿ ಬೆಲೆಗೆ ಮಾರುಕಟ್ಟೆಗೆ ಬಿಡುತ್ತಾ ರೈತರನ್ನು ಸೆಳೆದುಕೊಳ್ಳುತ್ತಿವೆ. ಕಳೆದ ಎರಡು ದಶಕಗಳಲ್ಲಿ ಕರ್ನಾಟಕದಲ್ಲಿ ಅದೆಷ್ಟು ವೈವಿಧ್ಯಮಯ ಆಹಾರ ಬೆಳೆಗಳನ್ನು ಮೆಕ್ಕೆ ಜೋಳ ನಾಶಪಡಿಸಿದೆ ಎಂದು ನೋಡಿದರೆ ಗಾಬರಿಯಾಗುತ್ತದೆ. ಅಧಿಕ ಇಳುವರಿಯೊಂದನ್ನೇ ಎತ್ತಿ ತೋರಿಸಿ, ಮೆಕ್ಕೆಜೋಳ ಬೇಸಾಯಕ್ಕೆ ತಗಲುವ ಅಧಿಕ ಖರ್ಚು, ಅತೀ ಕಡಿಮೆ ಮಾರುಕಟ್ಟೆ ಬೆಲೆಗಳಿಂದ ರೈತರು ಅಪಾರ ನಷ್ಟಕ್ಕೆ ಒಳಗಾಗುತ್ತಿರುವುದನ್ನು ಮರೆಮಾಚಲಾಗುತ್ತಿದೆ. ಈಗಾಗಲೇ ರೈತರು ಮೆಕ್ಕೆಜೋಳ ಬೇಸಾಯದಲ್ಲಿ ವಿಪರೀತ ರಸಗೊಬ್ಬರ-ಕೀಟನಾಶಕದ ಜೊತೆ ಕಳೆನಾಶಕವನ್ನೂ ವ್ಯಾಪಕವಾಗಿ ಬಳಸುತ್ತಿದ್ದಾರೆ. ಈಗ ರ್ಯಾಲಿಸ್ ಕಂಪೆನಿ ಕಳೆನಾಶಕ ಸಹಿಷ್ಣು (herbicide tolerant- HT) ಕುಲಾಂತರಿ ಮೆಕ್ಕೆಜೋಳವನ್ನು ಅಭಿವೃದ್ಧಿಪಡಿಸಹೊರಟಿದೆ. ಈ ಹಿಂದೆ ಮೊನ್ಸಾಂಟೊ ಕಂಪೆನಿ ಅಭಿವೃದ್ಧಿಪಡಿಸಿದ HT ಕುಲಾಂತರಿ ಮೆಕ್ಕೆಜೋಳ ಸದ್ಯ ಹದಿನಾಲ್ಕು ದೇಶಗಳಲ್ಲಿ ಬಳಕೆಯಲ್ಲಿದ್ದು ಇದಕ್ಕೆ ರೌಂಡಪ್ ಕಳೆನಾಶಕ ಹೊಡೆದಾಗ ಮೆಕ್ಕೆಜೋಳವೊಂದೇ ಉಳಿದುಕೊಂಡು ಸುತ್ತಮುತ್ತಲ ಒಂದು ಹುಲ್ಲುಕಡ್ಡಿಯೂ ಬಿಡದೆ ಅಕ್ಷರಶಃ ಸುಟ್ಟು ಹೋಗುತ್ತದೆ. ಕರ್ನಾಟಕದ ಜೀವ ವೈವಿಧ್ಯವನ್ನು ಇದು ಸಂಪೂರ್ಣ ನಿರ್ಮೂಲನ ಮಾಡಿಬಿಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಅನಿವಾರ್ಯವಾಗಿ ಮೆಕ್ಕೆಜೋಳಕ್ಕೆ ದಾಸರಾಗುತ್ತಿರುವ ರೈತರಿಗೆ ವಿವಿಧ ಆಹಾರ ಧಾನ್ಯಗಳನ್ನು, ಬಹುಬೆಳೆಗಳನ್ನು ಬೆಳೆಯಲು ಸರಕಾರ ಉತ್ತೇಜನ ನೀಡಬೇಕೇ ಹೊರತು ವಿನಾಶಕಾರಿ ಕುಲಾಂತರಿ ಬೀಜವನ್ನು ಅವರ ಮೇಲೆ ಹೇರುವುದಲ್ಲ.

ಕೊನೆಯದಾಗಿ, ನಿರ್ಬಂಧಿತವಾಗಿ ಮಾಡುವ ಕ್ಷೇತ್ರ ಪ್ರಯೋಗದಲ್ಲಿ ಪರಿಸರದ ಮೇಲಾಗಲೀ, ಜೀವಿಗಳ ಮೇಲಾಗಲೀ ಯಾವುದೇ ಪರಿಣಾಮ ಇರುವುದಿಲ್ಲ ಎಂದು ಹೇಳಿಕೊಂಡು ಸರಕಾರದ ಮನವೊಲಿಸಲು ರ್ಯಾಲಿಸ್ ಕಂಪೆನಿ ಪ್ರಯತ್ನಿಸುತ್ತಿದೆ. ಆದರೆ ವಾಸ್ತವದಲ್ಲಿ, ನಮ್ಮ ಬೆಳೆಗಳನ್ನು ಕುಲಾಂತರಿ ಮಾಲಿನ್ಯಗೊಳಿಸುವ ಪ್ರಕ್ರಿಯೆ ಕ್ಷೇತ್ರ ಪ್ರಯೋಗಳಿಂದಲೇ ಪ್ರಾರಂಭವಾಗುತ್ತದೆ. ನಿರ್ಬಂಧಿತ ಎಂದು ಹೇಳಿಕೊಳ್ಳುವ ಈ ಕ್ಷೇತ್ರ ಪ್ರಯೋಗಗಳಲ್ಲಿ ಬೆಳೆಗಳನ್ನು ಹೊಲಗಳಲ್ಲಿ ಮುಕ್ತವಾಗಿ ಬೆಳೆಯಲಾಗುತ್ತದೆ. ಇಲ್ಲಿ ಪಾಲಿಸಬೇಕಾದ ಕಟ್ಟುಕಟ್ಟಳೆಗಳನ್ನು ಬಹುತೇಕ ಪಾಲಿಸುವುದಿಲ್ಲ. ಹೀಗಾಗಿ ಕುಲಾಂತರಿ ಮಾಲಿನ್ಯವು ಮುಕ್ತವಾಗಿ ಪರಿಸರಕ್ಕೆ ಸೇರಿ ಹಿಮ್ಮೆಗಗೊಳಿಸಲಾಗದಂತಹ ಘಾಸಿಯನ್ನು ಉಂಟುಮಾಡುತ್ತದೆ. ಇದು ಈವರೆಗಿನ ಕುಲಾಂತರಿ ಕ್ಷೇತ್ರ ಪ್ರಯೋಗಗಳಲ್ಲಿ ಪ್ರಪಂಚಾದ್ಯಂತ ವ್ಯಾಪಕವಾಗಿ ಕಂಡು ಬಂದಿದೆ. ಬಿಜಾಪುರದಲ್ಲಿ ಈ ಹಿಂದೆ ಕುಲಾಂತರಿ ಮೆಕ್ಕೆ ಜೋಳದ ಕ್ಷೇತ್ರ ಪ್ರಯೋಗದಲ್ಲಿ ಯಾವ ರೀತಿಯಲ್ಲಿ ನಿರ್ಬಂಧಗಳನ್ನು ಮೀರಲಾಗಿತ್ತು ಎಂಬುದು ತಮಗೆ ತಿಳಿದಿದೆ. ಪ್ರಪಂಚದೆಲ್ಲೆಡೆ ಕುಲಾಂತರಿ ತಂತ್ರಜ್ಞಾನ ಅಪಾಯಕಾರಿ ಮಾತ್ರವಲ್ಲ, ಹಳಸಲು ತಂತ್ರಜ್ಞಾನ ಎಂದೂ ಸಾಬೀತಾಗಿದ್ದು 20ಕ್ಕೂ ಹೆಚ್ಚು ದೇಶಗಳು ಕುಲಾಂತರಿ ಬೆಳೆಗಳನ್ನು ಸಂಪೂರ್ಣ ನಿಷೇಧ ಮಾಡಿವೆ. ಯೂರೋಪಿನ 28 ದೇಶಗಳಲ್ಲಿ ಅರ್ಧಕ್ಕೂ ಹೆಚ್ಚು ದೇಶಗಳು ಕುಲಾಂತರಿ ಮುಕ್ತ ದೇಶಗಳಾಗಿವೆ. ನಮ್ಮ ದೇಶದಲ್ಲಿ ಬಿಟಿ ಹತ್ತಿಯ ಕೆಟ್ಟ ಪರಿಣಾಮಗಳನ್ನು ಕಂಡ ಎಲ್ಲಾ ರಾಜ್ಯಗಳು ಕುಲಾಂತರಿ ಬದನೆ ಮತ್ತು ಸಾಸಿವೆಗಳನ್ನು ಹೋರಾಡಿ ಹಿಮ್ಮೆಟ್ಟಿಸಿದವು. ಕೇರಳ, ತಮಿಳುನಾಡು, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಒಡಿಶಾ, ಛತ್ತಿಸ್‌ಗಡ, ಗುಜರಾತ್ ರಾಜ್ಯಗಳೆಲ್ಲಾ ಬಹಳ ಹಿಂದೆಯೇ ತಮ್ಮಲ್ಲಿ ಕುಲಾಂತರಿ ಕ್ಷೇತ್ರ ಪ್ರಯೋಗಗಳಿಗೆ ಅನುಮತಿ ಕೊಡದಿರಲು ತೀರ್ಮಾನಿಸಿದವು. ಹೀಗಿರುವಾಗ ಕರ್ನಾಟಕ ಸರಕಾರಕ್ಕೆ ಇದರ ಅನಿವಾರ್ಯತೆ ಖಂಡಿತಾ ಇಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ರ್ಯಾಲಿಸ್ ಕಂಪೆನಿಯ ಹತ್ತಿ ಮತ್ತು ಕುಲಾಂತರಿ ಕ್ಷೇತ್ರ ಪ್ರಯೋಗಕ್ಕೆ ಕರ್ನಾಟಕ ಸರಕಾರ ಯಾವ ಕಾರಣಕ್ಕೂ ಅನುಮತಿ ನೀಡಕೂಡದೆಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ.

-‘ನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ’(ರೈತ ಸಂಘಟನೆಗಳು, ಸಾವಯವ ಕೃಷಿ ಸಂಘಟನೆಗಳು, ಕೃಷಿ ಕೂಲಿಕಾರ ಸಂಘಟನೆಗಳು, ಗ್ರಾಮೀಣ ಮಹಿಳಾ ಸಂಘಟನೆಗಳು, ಪರಿಸರ ಸಂಘಟನೆಗಳು ಸೇರಿದಂತೆ ರಾಜ್ಯದ 40ಕ್ಕೂ ಹೆಚ್ಚು ಸಂಘಟನೆಗಳ ಸಮನ್ವಯ); ಗ್ರಾಮ ಸೇವಾ ಸಂಘ; ಅ.ನಾ.ಯಲ್ಲಪ್ಪರೆಡ್ಡಿ, ಖ್ಯಾತ ಪರಿಸರವಾದಿಗಳು; ನಾಗೇಶ್ ಹೆಗಡೆ, ಖ್ಯಾತ ವಿಜ್ಞಾನ ಮತ್ತು ಪರಿಸರ ಬರಹಗಾರರು; ಡಾ. ಪ್ರಕಾಶ್ ಕಮ್ಮರಡಿ, ಕೃಷಿ ಅರ್ಥಶಾಸ್ತ್ರಜ್ಞರು ಮತ್ತು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News