ಆಸಿಯಾನ್ ಶೃಂಗಸಭೆಗೆ ಮ್ಯಾನ್ಮಾರ್ ಸೇನಾಡಳಿತದ ಮುಖಂಡರಿಗೆ ಆಹ್ವಾನವಿಲ್ಲ

Update: 2021-10-16 18:08 GMT
photo:twitter.com/@AFP

ಸಿಂಗಾಪುರ, ಅ.16: ಅಕ್ಟೋಬರ್ 26ರಿಂದ 28ರವರೆಗೆ ನಡೆಯಲಿರುವ ‘ಅಸೋಸಿಯೇಷನ್ ಆಫ್ ಸೌತ್ಈಸ್ಟ್ ಏಶಿಯನ್ ನೇಷನ್ಸ್(ಆಸಿಯಾನ್) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮ್ಯಾನ್ಮಾರ್ನ ರಾಜಕೀಯೇತರ ಪ್ರತಿನಿಧಿಯನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಸಿಂಗಾಪುರದ ವಿದೇಶ ವ್ಯವಹಾರ ಸಚಿವಾಲಯ ಶನಿವಾರ ಹೇಳಿಕೆ ನೀಡಿದೆ. ಆಗ್ನೇಯ ಏಶ್ಯಾ ರಾಷ್ಟ್ರಗಳ ಒಕ್ಕೂಟ(ಆಸಿಯಾನ್) ಕೈಗೊಂಡಿರುವ ಅಪರೂಪದ ನಿರ್ಧಾರದಿಂದ ಈ ವರ್ಷದ ಫೆಬ್ರವರಿಯಲ್ಲಿ ಕ್ಷಿಪ್ರ ಸೇನಾ ಕ್ರಾಂತಿಯ ಮೂಲಕ ಮ್ಯಾನ್ಮಾರ್ ಸರಕಾರವನ್ನು ಉರುಳಿಸಿ ಅಧಿಕಾರ ವಶಕ್ಕೆ ಪಡೆದಿದ್ದ ಸೇನಾಡಳಿತ ಸರಕಾರದ ಮುಖಂಡ ಮಿನ್ಆಂಗ್ ಹಿಯಾಂಗ್ಗೆ ಅನಿರೀಕ್ಷಿತ ಹಿನ್ನಡೆಯಾಗಿದೆ. ತಟಸ್ಥ ಧೋರಣೆ ತಳೆಯುವ ಆಸಿಯಾನ್ನ ಸಾಂಪ್ರದಾಯಿಕ ಕಾರ್ಯನೀತಿಗೆ ವಿರುದ್ಧವಾದ ದಿಟ್ಟ ನಿಲುವನ್ನು ಇದೇ ಪ್ರಥಮ ಬಾರಿಗೆ ಕೈಗೊಳ್ಳಲಾಗಿದೆ.

ಮ್ಯಾನ್ಮಾರ್ನ ಸೇನಾಡಳಿತ ಸರಕಾರದ ಉನ್ನತ ಮುಖಂಡ ಮಿನ್ಆಂಗ್ ಹಿಯಾಂಗ್ರನ್ನು ಶೃಂಗಸಭೆಯಿಂದ ಹೊರಗಿರಿಸುವ ನಿರ್ಧಾರ ಅತ್ಯಂತ ಕಠಿಣವಾಗಿತ್ತು, ಆದರೆ ಆಸಿಯಾನ್ನ ವಿಶ್ವಾಸಾರ್ಹತೆಯನ್ನು ಎತ್ತಿಹಿಡಿಯಲು ಇದು ಅನಿವಾರ್ಯವಾಗಿದೆ. ಎಪ್ರಿಲ್ನಲ್ಲಿ ಆಸಿಯಾನ್ ಮುಖಂಡರು ಅಂಗೀಕರಿಸಿದ್ದ 5 ಅಂಶಗಳ ಯೋಜನೆಯನ್ನು ಜಾರಿಗೊಳಿಸುವಲ್ಲಿ ಮ್ಯಾನ್ಮಾರ್ನ ಸೇನಾಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸಿಂಗಾಪುರದ ವಿದೇಶ ವ್ಯವಹಾರ ಇಲಾಖೆ ಹೇಳಿದೆ.

5 ಅಂಶಗಳ ಯೋಜನೆ ಅನುಷ್ಠಾನದಲ್ಲಿ ಸಾಕಷ್ಟು ಪ್ರಗತಿಯಾಗದಿರುವುದು ಹಾಗೂ ಮ್ಯಾನ್ಮಾರ್ನಲ್ಲಿ ಎಲ್ಲಾ ಪಕ್ಷದವರನ್ನೂ ಸೇರಿಸಿಕೊಂಡು ರಚನಾತ್ಮಕ ಸಂವಾದ ಕಾರ್ಯ ಆರಂಭವಾಗದಿರುವ ಹಿನ್ನೆಲೆಯಲ್ಲಿ ಶೃಂಗಸಭೆಗೆ ಮ್ಯಾನ್ಮಾರ್ನ ರಾಜಕೀಯೇತರ ಪ್ರತಿನಿಧಿಯನ್ನು ಆಹ್ವಾನಿಸಲು ಸದಸ್ಯ ರಾಷ್ಟ್ರಗಳು ಶಿಫಾರಸು ಮಾಡಿವೆ ಎಂದು ಆಸಿಯಾನ್ನ ಪ್ರಸಕ್ತ ಅಧ್ಯಕ್ಷದೇಶ ಬ್ರೂನೈ ಹೇಳಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News