ಬೆಂಗಳೂರು; ನಗರದೆಲ್ಲೆಡೆ ಹಬ್ಬದ ತ್ಯಾಜ್ಯ ರಾಶಿ

Update: 2021-10-16 18:48 GMT

ಬೆಂಗಳೂರು, ಅ.16: ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಹೆಚ್ಚುವರಿಯಾಗಿ ತ್ಯಾಜ್ಯ ಉತ್ಪತ್ತಿಯಾಗಿದ್ದು, ಎಲ್ಲೆಡೆ ರಾಶಿ ಬಿದ್ದಿದ್ದ ತ್ಯಾಜ್ಯದ ದೃಶ್ಯಗಳು ಸಾಮಾನ್ಯವಾಗಿವೆ.

ರಸ್ತೆಯ ಇಕ್ಕೆಲಗಳು ಮತ್ತು ಪಾದಚಾರಿ ಮಾರ್ಗಗಳಲ್ಲಿ ಮಾರಾಟವಾಗದೆ ಉಳಿದ ಬಾಳೆಕಂಬ, ಬೂದುಗುಂಬಳ, ಮಾವಿನಸೊಪ್ಪು ಮತ್ತು ಹೂವುಗಳು ರಾಶಿ ಬಿದ್ದಿದ್ದು, ಕೊಳೆತು ದುರ್ವಾಸನೆ ಬೀರುತ್ತಿವೆ. ಇದರಿಂದ ವಾಹನಗಳ ಸಂಚಾರಕ್ಕೆ ಮತ್ತು ಪಾದಚಾರಿಗಳ ಓಡಾಟಕ್ಕೆ ತೊಡಕುಂಟಾಗುತ್ತಿದೆ.

ನಗರದಲ್ಲಿ ನಿತ್ಯ ಸುಮಾರು 4 ಸಾವಿರ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಶೇ.25ರಷ್ಟು ಕಸ ನಗರ ಹಲವೆಡೆ ವಿಲೇವಾರಿಯಾಗದೆ ಹಾಗೆಯೇ ಉಳಿದಿದೆ. ಕೆಲ ಪೌರಕಾರ್ಮಿಕರು ಕೆಲಸಕ್ಕೆ ಗೈರಾಗಿರುವ ಕಾರಣ, ಕಸ ವಿಲೇವಾರಿಯಲ್ಲಿ ವ್ಯತ್ಯಯವಾಗಿದೆ.

ಮುಖ್ಯವಾಗಿ ಇಲ್ಲಿನ ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ, ಅವೆನ್ಯೂ ರಸ್ತೆ, ಹೆಬ್ಬಾಳ, ಕನಕಪುರ ರಸ್ತೆ, ಯಶವಂತಪುರ, ಆಡುಗೋಡಿ, ಕೆ.ಆರ್.ಪುರ, ಯಲಹಂಕ, ಮೈಸೂರು ರಸ್ತೆ, ಗಾಂಧಿಬಜಾರ್, ಜಯನಗರ, ಬನಶಂಕರಿ ಸೇರಿದಂತೆ ಹಲವೆಡೆ ಬಿಕರಿಯಾಗದೆ ಉಳಿದ ಬಾಳೆಕಂಬ, ಬೂದುಗುಂಬಳಕಾಯಿ ರಾಶಿ ರಾಶಿ ಬಿದ್ದಿವೆ. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News