ರೈತ ಚಳವಳಿಗಳಿಂದ ಹಿಂದೂ-ಮುಸ್ಲಿಮ್ ಸಾಮರಸ್ಯದೆಡೆಗೆ

Update: 2021-10-17 09:37 GMT

ಚಳವಳಿಗಳು ಹಾಗೂ ಪ್ರತಿಭಟನೆಗಳು ತಮ್ಮದೇ ಆದ ರೀತಿಯಲ್ಲಿ ಹಿಂದುತ್ವ ಕಥಾನಕಗಳನ್ನು ಬುಡಮೇಲುಗೊಳಿಸಲು ಸಮರ್ಥವಾಗಿ ಮತ್ತು ಜಾತ್ಯತೀತ ರಾಜಕಾರಣದ ಮಹತ್ವವನ್ನು ನವೀಕರಿಸಿದೆ.

ರಾಜಕೀಯ ಪಕ್ಷಗಳು ನೀಡಲಾರದ ಕೊಡುಗೆಯನ್ನು ರಾಜಕೀಯ ಸಂವಾದಗಳಿಗೆ ಸಾಮಾಜಿಕ ರಾಜಕೀಯ ಚಳವಳಿಗಳು ನೀಡುತ್ತವೆ ಎನ್ನುವುದೇ ಉದಾರವಾದಿ ಪ್ರಜಾಪ್ರಭುತ್ವದ ಹಿರಿಮೆ.

ಭಾರತದ ಪೌರತ್ವ (ತಿದ್ದುಪಡಿ) ಮಸೂದೆಯ ವಿರುದ್ಧ ನಡೆದ ಪ್ರತಿಭಟನೆಗಳು ಮತ್ತು ಈಗ ನಡೆಯುತ್ತಿರುವ ರೈತ ಚಳವಳಿಯೇ ಇದಕ್ಕೆ ಉತ್ತಮ ಉದಾಹರಣೆ. ಈ ಚಳವಳಿಗಳು ಹಾಗೂ ಪ್ರತಿಭಟನೆಗಳು ತಮ್ಮದೇ ಆದ ರೀತಿಯಲ್ಲಿ ಹಿಂದೂತ್ವ ಕಥಾನಕಗಳನ್ನು ಬುಡಮೇಲುಗೊಳಿಸಲು ಸಮರ್ಥವಾಗಿ ಮತ್ತು ಜಾತ್ಯತೀತ ರಾಜಕಾರಣದ ಮಹತ್ವವನ್ನು ನವೀಕರಿಸಿದೆ.

2013ರ ಮುಝಪ್ಫರ್ ನಗರ ದೊಂಬಿಗಳು ನಡೆದ ಬಳಿಕ ಹಿಂದೂತ್ವ ರಾಜಕಾರಣ ನಿರ್ದಿಷ್ಟವಾಗಿ ಪಶ್ಚಿಮ ಉತ್ತರಪ್ರದೇಶದಲ್ಲಿ ಪ್ರಬಲಗೊಂಡಿತು ಮತ್ತು ಧಾರ್ಮಿಕ ಧ್ರುವೀಕರಣವೇ ಒಂದು ರಾಜಕೀಯ ದಾಳವಾಯಿತು. ಆದರೆ ಇತ್ತೀಚೆಗೆ ಮುಝಪ್ಫರ್ ನಗರದ ಮಹಾಪಂಚಾಯತ್ ಒಂದರಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್ ಅವರು ನೀಡಿದ ಘೋಷಣೆ ‘‘ಅಲ್ಲಾಹು ಅಕ್ಬರ್ ಹರಹರ ಮಹಾದೇವ್’’ ಆ ಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಐಕ್ಯತೆಯ ಒಂದು ಸಂದೇಶ ಮೊಳಗಿತು. ಪಶ್ಚಿಮ ಉತ್ತರ ಪ್ರದೇಶ ಅಥವಾ ಭಾರತದ ಇತರ ಪ್ರದೇಶಗಳಲ್ಲಿ ಜಾತ್ಯತೀತ ಸಾಮಾಜಿಕ ಸಾಮರಸ್ಯಕ್ಕೆ ಹಿಂದೂತ್ವ ರಾಜಕಾರಣ ನೀಡಿರುವ ಹೊಡೆತವನ್ನು, ಮಾಡಿರುವ ಅಪಾರ ಹಾನಿಯನ್ನು ಒಂದು ಮಹಾಪಂಚಾಯತ್ ಸರಿಪಡಿಸಲಾರದು, ನಿಜ. ಆದರೆ ಪರಿಸ್ಥಿತಿಯನ್ನು ಬದಲಾಯಿಸಲು ಕನಿಷ್ಠ ಒಂದು ಪ್ರಯತ್ನವಾದರೂ ನಡೆಯುತ್ತಿದೆಯಲ್ಲ ಎನ್ನುವುದೇ ಸಮಾಧಾನದ ಸಂಗತಿ.

 ‘‘ಅಲ್ಲಾಹು ಅಕ್ಬರ್, ಹರಹರ ಮಹಾದೇವ್’’ ಘೋಷಣೆಗೆ ಒಂದು ದೀರ್ಘ ಇತಿಹಾಸವಿದೆ. ಮಹೇಂದ್ರ ಸಿಂಗ್ ಟಿಕಾಯತ್ ನೇತೃತ್ವದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಆರಂಭದ ದಿನಗಳಲ್ಲಿ ಈ ಘೋಷಣೆಯ ಮೂಲವಿದೆ. 1980ರ ದಶಕದ ಅಂತ್ಯಭಾಗದಲ್ಲಿ ಬಿಕೆಯು ಸಂಘಟಿಸಿದ ಒಂದು ಬೃಹತ್ ಪ್ರತಿಭಟನೆ ವೇಳೆ ನಡೆದ ಗೋಲಿಬಾರ್‌ನಲ್ಲಿ ಇಬ್ಬರು ರೈತರು-ಅಕ್ಬರ್ ಅಲಿ, ಓರ್ವ ಮುಸ್ಲಿಂ ಮತ್ತು ಜೈಪಾಲ್, ಓರ್ವ ಹಿಂದೂ-ಕೊಲ್ಲಲ್ಪಟ್ಟರು ಅವರ ಮೃತಶರೀರಗಳನ್ನು ಮುಖ್ಯ ರಸ್ತೆಯಲ್ಲಿಟ್ಟು ಬಿಕೆಯು ಪ್ರತಿಭಟನೆಯನ್ನು ಮುಂದುವರಿಸಿತು. ಅದರ ಜಾತ್ಯತೀತ ಚೌಕಟ್ಟಿನ ಸಂಕೇತವಾಗಿ ಈ ಪ್ರಸಿದ್ಧ ಘೋಷಣೆ ಹುಟ್ಟಿಕೊಂಡಿತು.

 ಟಿಕಾಯತ್ ಅವರ ಜೊತೆಗಾರರಲ್ಲಿ ಒಬ್ಬರು ಗುಲಾಂ ಮುಹಮ್ಮದ್ ಜೋಲಾ. 2011ರಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ನಿಧನ ಹೊಂದಿದ ಬಳಿಕ ಅವರ ಮಕ್ಕಳು (ಮುಖ್ಯವಾಗಿ ರಾಕೇಶ್ ಟಿಕಾಯತ್) ಹಿಂದೂ ಬಲಪಂಥೀಯರ ಭಾಷೆಯಲ್ಲಿ ಮಾತಾಡತೊಡಗಿದಾಗ ಜೋಲಾರವರು ಬಿಕೆಯುನಿಂದ ಹೊರನಡೆದು ತನ್ನದೇ ಆದ ‘ಭಾರತೀಯ ಕಿಸಾನ್ ಮಜ್ದೂರ್ ಮಂಚ್’ (ಬಿಕೆಎಂಎಂ) ಎಂಬ ರೈತಸಂಘವನ್ನು ಸ್ಥಾಪಿಸಿದರು. ‘‘ಏಕ್ ಹೋ ನೇಕ್ ಹೋ’’ (ಒಗ್ಗಟ್ಟಾಗಿ ಸಜ್ಜನರಾಗಿ) ಎಂಬುದು ಅದರ ಘೋಷಣೆ ಹೊಸ ಘೋಷಣೆಯಾಗಿತ್ತು. ಇತ್ತೀಚೆಗೆ ಈ ಲೇಖಕರಿಗೆ ನೀಡಿದ ಸಂದರ್ಶನವೊಂದರಲ್ಲಿ 80ರ ಹರೆಯದ ಜೋಲಾ ಒಂದು ಘಟನೆಯನ್ನು ನೆನಪಿಸಿಕೊಂಡರು: ಹರಿದ್ವಾರದ ಹರ್‌ಕಿ ಪೌರೀ ಆವರಣದಲ್ಲಿ ನಡೆದ ಪ್ರತಿಭಟನೆಯೊಂದರ ವೇಳೆ ಮುಸ್ಲಿಮ್ ರೈತರಿಗೆ ಶುಕ್ರವಾರದ ನಮಾಝ್ ಮಾಡಲು ಅನುವು ಮಾಡಿಕೊಡುವಂತೆ ಮಹೇಂದ್ರಸಿಂಗ್ ಟಿಕಾಯತ್ ತನ್ನನ್ನು ಕೇಳಿಕೊಂಡಿದ್ದರು. ಕೆಲವರು ಇದಕ್ಕೆ ಒಪ್ಪದಾಗ ಟಿಕಾಯತ್ ಹೇಳಿದ ಮಾತು ‘‘ಅಲ್ಲಿ ಅವರು ಮಾಡುವುದು ನಮಾಝ್; ನಮಾಝ್ ಅಂದರೆ ಬಯ್ಗುಳವಲ್ಲ’’. ಒಂದೊಮ್ಮೆ ಇಂತಹ ಧಾರ್ಮಿಕ ಸಾಮರಸ್ಯವನ್ನು ಮೊೆದಿದ್ದ ಪ್ರದೇಶ ಈಗ ಧಾರ್ಮಿಕ ಧ್ರುವೀಕರಣದ ಸುಡು ತಾಣವಾಗಿದೆ.

ಧಾರ್ಮಿಕ ಧ್ರುವೀಕರಣ ಕಡಿಮೆಯಾಗುತ್ತಿರುವುದಕ್ಕೆ ಈಗ ಸ್ವಲ್ಪಪುರಾವೆ ಕಾಣಿಸುತ್ತಿದೆಯಾದರೂ, ಮತಾಂತರದ ವಿಷಯದ ಸುತ್ತ ಉತ್ತರಪ್ರದೇಶವನ್ನು ಧ್ರುವೀಕರಿಸುವ ಪ್ರಯತ್ನಗಳು ಕೂಡ ನಡೆಯುತ್ತಿವೆ. ದೇಶದೆಲ್ಲೆಡೆ ಹಿಂದೂಗಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗುತ್ತಿದೆ; ಭಾರತವನ್ನು ಮುಸ್ಲಿಂ ದೇಶವಾಗಿ ಮಾಡುವುದು ಇದರ ಉದ್ದೇಶ ಎಂದು ಪ್ರಚಾರ ಮಾಡುವುದು ಬಲಪಂಥೀಯ ಹಿಂದೂತ್ವಕ್ಕೆ ಭಾರೀ ಪ್ರಿಯವಾದ ಪ್ರಚಾರವಾಗಿದೆ. ಈ ಪ್ರಚಾರವನ್ನು, ಅಭಿಯಾನವನ್ನು ಒಂದು ಅಸ್ತ್ರವಾಗಿ ಬಳಸುವ ಉತ್ತರಪ್ರದೇಶ ಸರಕಾರದ ಪ್ರಯತ್ನಗಳು ಬರಲಿರುವ ಅಸೆಂಬ್ಲಿ ಚುನಾವಣೆಗಳಲ್ಲಿ ರಾಜಕೀಯ ಚರ್ಚೆಗಳ ಮುಖ್ಯ ವಿಷಯವಾಗುವ ಸಾಧ್ಯತೆ ಇದೆ. ಅದೇನಿದ್ದರೂ, ರೈತರ ಚಳವಳಿ ಕನಿಷ್ಠಪಕ್ಷ ಪಶ್ಚಿಮ ಉತ್ತರಪ್ರದೇಶದಲ್ಲಿ ಹಿಂದೂತ್ವದ ಇಂತಹ ಕಥಾನಕವನ್ನು ಬುಡಮೇಲುಗೊಳಿಸಿ ಹಿಂದೂ-ಮುಸ್ಲಿಂ ಮೈತ್ರಿಯ ಸಾಮರಸ್ಯದ ಅವಶ್ಯಕತೆಯ ಮಹತ್ವವನ್ನು ಎತ್ತಿ ಹಿಡಿದಿವೆ.

TheHindu

ಕೃಪೆ: (ಲೇಖಕರು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರು ಹಾಗೂ ಸದ್ಯದಲ್ಲೇ ಪ್ರಕಟವಾಗಲಿರುವ ‘ಶಿಕ್ವಾ ಎ ಹಿಂದ್: ದಿ ಪೊಲಿಟಿಕಲ್ ಫ್ಯೂಚರ್ ಆಫ್ ಇಂಡಿಯನ್ ಮುಸ್ಲಿಂ’ ಪುಸ್ತಕದ ಲೇಖಕರು’)

Writer - ಶೇಖ್ ಮುಜೀಬುರ್ರಹ್ಮಾನ್

contributor

Editor - ಶೇಖ್ ಮುಜೀಬುರ್ರಹ್ಮಾನ್

contributor

Similar News