ಕೋವಿಡ್ ಪ್ರಮಾದಕ್ಕೆ ಬ್ರೆಝಿಲ್ ಅಧ್ಯಕ್ಷರ ವಿರುದ್ಧ ನರಹತ್ಯೆ ಆರೋಪ: ಸೆನೆಟ್ ವರದಿ

Update: 2021-10-20 03:42 GMT
ಬ್ರೆಝಿಲ್ ಅಧ್ಯಕ್ಷ ಜಯೀರ್ ಬೊಲ್ಸೊನರೊ (Photo source: Twitter@jairbolsonaro)

ಬ್ರಸಿಲಿಯಾ, ಅ.20: ಬ್ರೆಝಿಲ್ ಕೋವಿಡ್-19 ಸಾಂಕ್ರಾಮಿಕವನ್ನು ನಿಭಾಯಿಸಿದ ಬಗ್ಗೆ ತನಿಖೆ ನಡೆಸಿದ ಸೆನೆಟ್ ಸಮಿತಿ, ಅಧ್ಯಕ್ಷ ಜಯೀರ್ ಬೊಲ್ಸೊನರೊ ವಿರುದ್ಧ ನರಹತ್ಯೆ ಸೇರಿದಂತೆ 13 ಅಪರಾಧ ಪ್ರಕರಣಗಳನ್ನು ದಾಖಲಿಸಲು ಶಿಫಾರಸು ಮಾಡಿದೆ. ಅಧ್ಯಕ್ಷರು ಕೈಗೊಂಡ ತಪ್ಪು ನಿರ್ಧಾರಗಳು ವೈರಸ್ ಸೋಂಕು ಹರಡಲು ಕಾರಣವಾಗಿದ್ದು, ಇದರಿಂದ ಆರು ಲಕ್ಷಕ್ಕೂ ಅಧಿಕ ಮಂದಿಯ ಸಾವು ಸಂಭವಿಸಿದೆ ಎಂದು ಕರಡು ವರದಿಯಲ್ಲಿ ಹೇಳಲಾಗಿದೆ ಎಂಬುದಾಗಿ ರಾಯ್ಟರ್ಸ್‌ ವರದಿ ಮಾಡಿದೆ.

ಆದರೆ ಇಂಥ ಆರೋಪದ ಬಗ್ಗೆ ಅಧ್ಯಕ್ಷರು ವಿಚಾರಣೆ ಎದುರಿಸಬೇಕಾದ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ. ಏಕೆಂದರೆ ಅಧ್ಯಕ್ಷರ ವಿರುದ್ಧ ವಿಚಾರಣೆ ನಡೆಯಬೇಕಿದ್ದರೆ ಬ್ರೆಝಿಲ್‌ನ ಪ್ರಾಸಿಕ್ಯೂಟರ್ ಜನರಲ್ ನಿರ್ಧಾರ ಕೈಗೊಳ್ಳಬೇಕು. ಆದರೆ ಇವರನ್ನು ಅಧ್ಯಕ್ಷರೇ ನೇಮಕ ಮಾಡಿರುತ್ತಾರೆ. ಈ ವರದಿಯನ್ನು ರಾಜಕೀಯ ದುರುದ್ದೇಶದ ವರದಿ ಎಂದು ಅಧ್ಯಕ್ಷರು ಟೀಕಿಸಿದ್ದಾರೆ.

ಸೆನೆಟ್ ಸದಸ್ಯ ರೆನನ್ ಕಲ್ಹೆರಿಸ್ ನಡೆಸಿದ ತನಿಖೆ ಆಧಾರದಲ್ಲಿ ಈ ಕರಡು ವರದಿ ಸಿದ್ಧಪಡಿಸಲಾಗಿದ್ದು, ಸೆನೆಟ್ ಈ ಬಗ್ಗೆ ಮತದಾನ ಮಾಡಿ ಪರಿವರ್ತಿಸಬೇಕಿದೆ. ಮುಂದಿನ ವಾರ ಈ ಬಗ್ಗೆ ಮತದಾನ ನಡೆಯಲಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಅಧ್ಯಕ್ಷರ ಕಚೇರಿ ನಿರಾಕರಿಸಿದೆ. ಈ ತನಿಖೆ ಒಂದು ಪ್ರಹಸನ ಎಂದು ಬೆಂಬಲಿಗರ ಜತೆ ಮಾತನಾಡಿದ ಬೊಲ್ಸೊನರೊ ಹೇಳಿದ್ದಾರೆ.

ಬ್ರೆಝಿಲ್, ಅಮೆರಿಕವನ್ನು ಹೊರತುಪಡಿಸಿ ಗರಿಷ್ಠ ಕೋವಿಡ್ ಸಾವನ್ನು ಕಂಡ ದೇಶವಾಗಿದೆ. ಲಾಕ್‌ಡೌನ್ ಮಾಡದಿರುವುದು, ಸಾರ್ವಜನಿಕವಾಗಿ ಮಾಸ್ಕ್ ಧರಿಸದಿರುವುದು ಮತ್ತು ಇದುವರೆಗೆ ತಾವು ಲಸಿಕೆ ಪಡೆದಿಲ್ಲ ಎಂದು ಸಾರ್ವಜನಿಕ ಹೇಳಿಕೆ ನೀಡಿದ ಅಧ್ಯಕ್ಷರ ಕ್ರಮವನ್ನು ಸಾರ್ವಜನಿಕ ಆರೋಗ್ಯ ತಜ್ಞರು ವ್ಯಾಪಕವಾಗಿ ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News