ಧೀಮಂತ ಮಾನವತಾವಾದಿ

Update: 2021-10-23 19:30 GMT

ಜಿಕೆಜಿ ಯಾವತ್ತೂ ಯಾವ ವ್ಯಕ್ತಿಯನ್ನೂ ವೈಯಕ್ತ್ತಿಕವಾಗಿ ವಿರೋಧಿಸಿದವರಲ್ಲ. ಅವರ ವಿರೋಧ ಎಡಬಿಡಂಗಿ ತಾತ್ವಿಕ ನಿಲುವುಗಳ, ಅಕಾರಣವಾದ ಸಾಮಾಜಿಕ-ಧಾರ್ಮಿಕ ವಿದ್ವೇಷಗಳ ಕುರಿತಾದದ್ದಾಗಿರುತ್ತಿತ್ತೇ ವಿನಃ ವೈಯಕ್ತಿಕವಾದದ್ದಾಗಿರುತ್ತಿರಲಿಲ್ಲ.


 * 1985ರ ಮೇ ತಿಂಗಳು. ನನಗೆ ಪ್ರತಿಷ್ಠಿತ ಬ್ರಿಟಿಷ್ ಕೌನ್ಸಿಲ್ ಸ್ಕಾಲರ್‌ಶಿಪ್ ದೊರಕಿ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದ ಆನ್ವಯಿಕ ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಅಧ್ಯಯನಕ್ಕಾಗಿ ಇಂಗ್ಲೆಂಡ್‌ಗೆ ಹೊರಡುವ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ನಾನು ನೌಕರಿ ಮಾಡುತ್ತಿದ್ದ ಸಂಸ್ಥೆಯಲ್ಲಿ ಒಂದು ವರ್ಷದ ಅವಧಿಗೆ ನನಗೆ ಅಧ್ಯಯನ ರಜೆ ಸೂಕ್ತವಾದ ರೀತಿಯಲ್ಲಿ ಮಂಜೂರಾಗಬೇಕಾಗಿತ್ತು. ಸರಕಾರಿ ಇಲಾಖೆಗಳ ಅನಿವಾರ್ಯವಾದ ಶ್ರೇಣೀಕರಣ ವ್ಯವಸ್ಥೆಯಲ್ಲಿ ಇದು ಸುಲಭದ ಕೆಲಸವಾಗಿರಲಿಲ್ಲ. ಅದಾಗಲೇ ನನಗೆ ಆತ್ಮೀಯರಾಗಿದ್ದ ಪ್ರೊ. ಜಿ.ಕೆ. ಗೋವಿಂದ ರಾವ್ ಅವರನ್ನು ಭೇಟಿಯಾಗಿ ನನಗೆ ಸಹಾಯ ಮಾಡಬಹುದೇ? ಎಂದು ಕೇಳಿದೆ. ಹೀಗೆ ಕೇಳಲು ಕಾರಣವೂ ಇತ್ತು: ಅವರ ಆಪ್ತರೊಬ್ಬರು ಶಿಕ್ಷಣ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ಹಿಂದುಮುಂದು ನೋಡದೆ ''ಓಹೋ ಖಂಡಿತವಾಗಿ. ಬನ್ನಿ ಹೋಗೋಣ'' ಎಂದವರೇ ನನ್ನನ್ನು ಆ ಅಧಿಕಾರಿಯ ಕಚೇರಿಗೆ ಕರೆದುಕೊಂಡು ಹೋದರು. ಅಲ್ಲಿ ಅವರಿಗೆ ನನ್ನನ್ನು ಪರಿಚಯಿಸಿ ''ಇವರ ಕೆಲಸ ಮಾಡಿಕೊಡಿ'' ಎಂದು ವಿನಯದಿಂದಲೇ ಅವರ ಎಂದಿನ ಖಚಿತ ಧ್ವನಿಯಲ್ಲಿ ಹೇಳಿದರು. ಮುಂದಿನ ಕೆಲವು ವಾರಗಳ ಒಳಗಾಗಿ ನನಗೆ ಬೇಕಾಗಿದ್ದ ಜಿಒ ಬಂತು.

ಇಂಗ್ಲೆಂಡ್‌ನಲ್ಲಿ ಅಧ್ಯಯನ ಮುಗಿಸಿ ಮರಳಿ ಬಂದವ ಪುನಃ ಬೆಂಗಳೂರಿನ ಅವರ ಮನೆಗೆ ಹೋಗಿ ಸ್ಮರಣಿಕೆಯೊಂದನ್ನು ಕೃತಜ್ಞತಾಪೂರ್ವಕವಾಗಿ ಕೊಟ್ಟಾಗ ಅವರು ತಮ್ಮ ಎಂದಿನ ಮುಗುಳ್ನಗೆ ಬೀರುತ್ತಾ ''ಥ್ಯಾಂಕ್ಸ್, ಭಾಸ್ಕರ್'' ಎಂದದ್ದು ನೆನಪಾಗುತ್ತದೆ. ಅವರ ಆ ಮುಗುಳ್ನಗು ಕಳೆದ 35 ವರ್ಷಗಳಿಂದ ನನ್ನ ಕಣ್ಮುಂದೆ ಹಾದು ಹೋಗುತ್ತಲೇ ಇತ್ತು.

* ಇನ್ನೂ ಹಿಂದಕ್ಕೆ ಹೋಗುತ್ತೇನೆ. 1980ರ ದಶಕದ ಮೊದಲ ಅರ್ಧದಲ್ಲೊಂದು ದಿನ ಜಿಕೆಜಿ ಉಡುಪಿಗೆ ಬಂದಿದ್ದರು. ನಾನು ಅವರನ್ನು ಭೇಟಿಯಾದೆ. ಅವರು ಮಾತನಾಡುತ್ತಾ ''ಉಡುಪಿಯಲ್ಲಿ ಈಗ ಏನಾದರೂ ರಂಗಚಟುವಟಿಕೆ ನಡೆಯುತ್ತಿದೆಯೇ?'' ಎಂದು ಕೇಳಿದರು. ''ಹೌದು ಸರ್, ಹೋಗೋಣ'' ಎಂದು ಅವರನ್ನು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಂಜೆ ವೇಳೆ ನಡೆಯುತ್ತಿದ್ದ ಮ್ಯಾಕ್‌ಬೆತ್ ನಾಟಕದ ರಂಗ ತಾಲೀಮಿಗೆ ಕರೆದುಕೊಂಡು ಹೋದೆ. ಉಡುಪಿಯ ಸಾಂಸ್ಕೃತಿಕ ಸಂಘಟನೆ 'ರಥಬೀದಿ ಗೆಳೆಯರು (ರಿ.)'ಗಾಗಿ ಅಲ್ಲಿ ರಂಗಕರ್ಮಿ ಬಿ.ಆರ್. ನಾಗೇಶ್ ಮ್ಯಾಕ್‌ಬೆತ್ ರಿಹರ್ಸಲ್ ನಡೆಸುತ್ತಿದ್ದರು. ನಾಟಕದ ಆರಂಭದಲ್ಲಿ ಬರುವ ಮೂವರು ಯಕ್ಷಿಣಿಯರು ಮ್ಯಾಕ್‌ಬೆತ್‌ನ್ನು ಇದಿರುಗೊಳ್ಳುವ ದೃಶ್ಯದಲ್ಲಿ ಓರ್ವ ಯಕ್ಷಿಣಿಯಾಗಿ (ಮುಂದಕ್ಕೆ ಕನ್ನಡದ ಪ್ರಸಿದ್ಧ ನಟಿಯಾದ) ವಿನಯಾಪ್ರಸಾದ್ ಅಭಿನಯಿಸುತ್ತಿದ್ದರು. ಸ್ವಲ್ಪ ಹೊತ್ತು ಅಲ್ಲೇ ಇದ್ದ ಜಿಕೆಜಿ ರಂಗ ತಾಲೀಮಿನ ಬಗ್ಗೆ ತನ್ನ ಮೆಚ್ಚುಗೆ ಸೂಚಿಸಿದ್ದರು.

* ಇದಾಗಿ ಬಹಳ ವರ್ಷಗಳ ನಂತರ ಉಡುಪಿಯ ಚಿತ್ತರಂಜನ್ ಸರ್ಕಲ್‌ನಲ್ಲಿ ನಡೆದ ದಲಿತರ ಒಂದು ಬೃಹತ್ ಸಮಾವೇಶದಲ್ಲಿ ಜಿಕೆಜಿ, ನಾನು ಮತ್ತು ಬನ್ನಂಜೆ ರಾಮಾಚಾರ್ಯರು ಭಾಷಣಕಾರರಾಗಿದ್ದೆವು. ತನ್ನ ಎಂದಿನ ಭಾಷಣದ ಧಾಟಿಯಲ್ಲೇ ಮಾತಾಡಿದ ಜಿಕೆಜಿ ಅಂದು ಕೂಡಾ ತನ್ನ ಭಾಷಣದಲ್ಲಿ ಪೇಜಾವರರ ದ್ವಂದ್ವ ನಿಲುವನ್ನು ತರಾಟೆಗೆ ತೆಗೆದುಕೊಂಡರು. ಆದರೆ ಈ ಹಿಂದೆ, 1986ರಲ್ಲಿ ಪೇಜಾವರರ ತೃತೀಯ ಪರ್ಯಾಯದ ಅವಧಿಯಲ್ಲಿ ರಾಜಾಂಗಣದಲ್ಲಿ ಪ್ರೊ. ಎಲ್. ಎಸ್. ಶೇಷಗಿರಿರಾವ್, ಡಾ. ಯು.ಆರ್. ಅನಂತಮೂರ್ತಿ ಹಾಗೂ ಜಿಕೆಜಿ ಅವರ ಮೂರು ದಿನಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಕೆಜಿ ಪೇಜಾವರರ ಸಮ್ಮುಖದಲ್ಲಿ ಭಾಷಣ ಮಾಡಿದ್ದರು.

ಜಿಕೆಜಿ ಅವರ ಬಹುಮುಖ ವ್ಯಕ್ತಿತ್ವದ, ಸ್ನೇಹಮಯಿ ಸ್ವಭಾವದ, ಪರೋಪಕಾರಿ ಗುಣದ ಮತ್ತು ಜಾತಿ, ಮತ, ಪಂಥಗಳನ್ನು ಮೀರಿದ ಅವರ ಸಾಮಾಜಿಕ ಕಾಳಜಿಯ ಉದಾಹರಣೆಗಳಾಗಿ ಮೇಲಿನ ಘಟನೆಗಳನ್ನು ಉಲ್ಲೇಖಿಸಿದ್ದೇನೆ. ಜಿಕೆಜಿ ಯಾವತ್ತೂ ಯಾವ ವ್ಯಕ್ತಿಯನ್ನೂ ವೈಯಕ್ತ್ತಿಕವಾಗಿ ವಿರೋಧಿಸಿದವರಲ್ಲ. ಅವರ ವಿರೋಧ ಎಡಬಿಡಂಗಿ ತಾತ್ವಿಕ ನಿಲುವುಗಳ, ಅಕಾರಣವಾದ ಸಾಮಾಜಿಕ-ಧಾರ್ಮಿಕ ವಿದ್ವೇಷಗಳ ಕುರಿತಾದದ್ದಾಗಿರುತ್ತಿತ್ತೇ ವಿನಃ ವೈಯಕ್ತಿಕವಾದದ್ದಾಗಿರುತ್ತಿರಲಿಲ್ಲ.

ಜಿಕೆಜಿ ಅವರಿಗೆ ಸಮಾಜ, ಸಾಹಿತ್ಯ, ರಾಜಕಾರಣ, ಧರ್ಮದ ಬಗ್ಗೆ ಸ್ಪಷ್ಟವಾದ ಧೋರಣೆ, ನಿಲುವು ಇತ್ತು. ಅವರ ಚಿಂತನೆ ಯಾವಾಗಲೂ ವಸ್ತುನಿಷ್ಠವಾಗಿತ್ತು. ನೋಡುವವರ ಕಣ್ಣಿಗೆ ಅವರು ಪ್ರಖರ ವಿಚಾರವಾದಿಯಾಗಿ ಕಾಣಿಸುತ್ತಿದ್ದರಾದರೂ, ಆ ವಿಚಾರವಾದದ ಹಿಂದೆ ಎಲ್ಲರ ಕಷ್ಟಗಳಿಗೂ ಮಿಡಿಯುವ ಭಾವನಾತ್ಮಕವಾದ ಒಂದು ಹೃದಯವಿತ್ತು, ಒಬ್ಬ ಕವಿಯ ಮನಸಿತ್ತು. ದೇವರ ಬಗ್ಗೆ ಮಾತಾಡುತ್ತಾ ಅವರೊಮ್ಮೆ ''ಸೂರ್ಯೋದಯ ಕಂಡಾಗ, ಆ ಪ್ರಖರ ಸೌಂದರ್ಯದ ಮುಂದೆ ನಾನು ಭಾವುಕನಾಗಿಬಿಡುತ್ತೇನೆ'' ಎಂದದ್ದು ನೆನಪಾಗುತ್ತದೆ.

ದೇಶದ ಆಗುಹೋಗುಗಳಿಗೆ ತನ್ನದೇ ಆದ ನಿಲುವಿನಿಂದ ಸ್ಪಂದಿಸುತ್ತಿದ್ದ ಗೋವಿಂದರಾವ್ ಕರ್ನಾಟಕದ ರಾಜಕಾರಣ ಮತ್ತು ಸಾಂಸ್ಕೃತಿಕ ಸಾಕ್ಷಿಪ್ರಜ್ಞೆಯಂತಿದ್ದರು. ಅವರು ರಾಜ್ಯದ ಸಾಮಾಜಿಕ-ಧಾರ್ಮಿಕ-ಸಾಂಸ್ಕೃತಿಕ ಸ್ಥಿತಿಗತಿಯನ್ನು ಅರ್ಥ ಮಾಡಿಕೊಳ್ಳುತ್ತಿದ್ದ, ಅರ್ಥೈಸುತ್ತಿದ್ದ ರೀತಿ ಅನನ್ಯವಾಗಿತ್ತು. ನಾಡಿಗೆ ಸಂಬಂಧಿಸಿದಂತೆ ಅವರ ನಡೆ-ನುಡಿ ತೆರೆದ ಬದುಕಾಗಿತ್ತು. ಅವರನ್ನು ಓರ್ವ ನಟ, ಲೇಖಕ, ಹೋರಾಟಗಾರ, ರಂಗಕರ್ಮಿ, ವಿಚಾರವಾದಿ, ಚಿಂತಕ ಎಂದು ಕನ್ನಡ ಸಾರಸ್ವತ ಲೋಕ ಗುರುತಿಸಿ ಗೌರವಿಸಿದೆಯಾದರೂ ಅವರು ನಿಜವಾಗಿ ಇವೆಲ್ಲವನ್ನು ಮೀರಿದ ಓರ್ವ ಧೀಮಂತ ಮಾನವತಾವಾದಿಯಾಗಿದ್ದರು. ಇದನ್ನು ಯಾಕೆ ಒತ್ತಿ ಹೇಳಬೇಕಾಗಿದೆ ಎಂದರೆ ಇವತ್ತು ವಿಚಾರವಾದ, ವೈಚಾರಿಕತೆ, ವಿಚಾರವಾದಿ, ಬುದ್ಧಿಜೀವಿ, ಚಿಂತಕ ಎಂಬ ಶಬ್ದಗಳಿಗೆ ಅಪಾರ್ಥ ಪ್ರಾಪ್ತಿಯಾಗಿದೆ. ಕಳೆದ ಎರಡು, ಮೂರು ದಶಕಗಳಲ್ಲಿ ದೇಶದಲ್ಲಾಗಿರುವ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಮತೀಯ ಸಮೀಕರಣಗಳಿಂದಾಗಿ ಒಂದೊಮ್ಮೆ ಈ ಪದಗಳಿಗಿದ್ದ ಅರ್ಥವೇ ಇಂದು ಬದಲಾಗಿಹೋಗಿದೆ. ಅನಿಶ್ಚಿತತೆ, ಆತಂಕ ಹಾಗೂ ಒಂದು ರೀತಿಯ ಭಯದ ವಾತಾವರಣದಲ್ಲಿ ಮುಕ್ತಚಿಂತನೆ ಯಾರಿಗೂ ಬೇಡವಾದ ಸರಕಾಗಿದೆ. ಇಂಥ ಸನ್ನಿವೇಶದಲ್ಲಿ ಜಿ.ಕೆ. ಗೋವಿಂದರಾವ್ ತನ್ನ ಅರ್ಥಪೂರ್ಣ ಜೀವನ ಯಾತ್ರೆ ಮುಗಿಸಿ ಮರಳಿ ಬಾರದ ಲೋಕಕ್ಕೆ, ಅಜ್ಞಾತ ತಾಣಕ್ಕೆ ತೆರಳಿದ್ದಾರೆ. ಆದರೆ ಅವರ ಜೊತೆ ತೆರಳದ ಅವರ ಚಿಂತನೆಗಳು ಮುಂದಿನ ತಲೆಮಾರುಗಳಿಗೆ ದಾರಿದೀಪವಾದಾವು ಎಂಬ ಭರವಸೆ ಇನ್ನೂ ಇಲ್ಲೇ ಉಳಿದಿದೆ ಎಂಬ ಸಮಾಧಾನ ಅವರನ್ನು ಅರ್ಥ ಮಾಡಿಕೊಂಡ ಕನ್ನಡನಾಡಿಗಿದೆ. ಅವರ ಸಿಟ್ಟು ಬೆರೆತ ವ್ಯಂಗ್ಯದ ಮಾತುಗಳನ್ನು, ವಿಡಂಬನೆಯ ಮೂಲಕ ಸಮಾಜದ ಡಾಂಭಿಕರನ್ನು ಅವರು ಚುಚ್ಚುತ್ತಿದ್ದ ಅನನ್ಯ ಶೈಲಿಯನ್ನು ಮರೆಯಲಾದೀತೆ?

-bhaskarrao599@gmail.com

Writer - ಡಾ. ಬಿ. ಭಾಸ್ಕರ ರಾವ್

contributor

Editor - ಡಾ. ಬಿ. ಭಾಸ್ಕರ ರಾವ್

contributor

Similar News