ತಲೋಜಾ ಜೈಲಿನ ʼಅಂದಾ ಸರ್ಕಲ್‌ʼ ಗೆ ವರ್ಗಾಯಿಸಿದ ಬಳಿಕ ನವ್ಲಾಖ ಆರೋಗ್ಯ ಸ್ಥಿತಿ ಹದಗೆಡುತ್ತಿದೆ: ಜೊತೆಗಾರ ಹೇಳಿಕೆ

Update: 2021-10-24 16:49 GMT

ಮುಂಬೈ, ಅ. 23: ಮುಂಬೈಯಲ್ಲಿರುವ ತಲೋಜಾ ಕಾರಾಗೃಹದ ‘ಅಂದಾ ಸರ್ಕಲ್’ ಎಂದು ಕರೆಯಲಾಗುವ ಅತಿ ಭದ್ರತೆಯ ಬರಾಕ್ಗೆ ವರ್ಗಾಯಿಸಿದ ಬಳಿಕ ಸಾಮಾಜಿಕ ಹೋರಾಟಗಾರ ಗೌತಮ್ ನವ್ಲಾಖ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆೆ ಎಂದು ಜೊತೆಗಾರ ಸಭಾ ಹುಸೈನ್ ಶನಿವಾರ ಹೇಳಿದ್ದಾರೆ.

ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಯಾಗಿರುವ ನವ್ಲಾಖ ಅವರಿಗೆ ತಮ್ಮ ಕುಟುಂಬದ ಸದಸ್ಯರಿಗೆ ಹಾಗೂ ವಕೀಲರಿಗೆ ಫೋನ್ ಕರೆ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಹುಸೈನ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘‘ಅಂದಾ ಸರ್ಕಲ್ನಲ್ಲಿ ಅವರು ಜೈಲಿನ ಕಾಂಕ್ರೆಟ್ ರಹಿತ ಹಸಿರು ಪ್ರದೇಶದಲ್ಲಿ ದಿನನಿತ್ಯ ನಡೆಯುವ ಹಾಗೂ ಶುದ್ಧ ಗಾಳಿ ಸೇವನೆಯ ಅವಕಾಶದಿಂದ ವಂಚಿತರಾಗಿದ್ದಾರೆ. ಇದರಿಂದ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿದೆ. ತಜ್ಞ ವೈದ್ಯಕೀಯ ಆರೈಕೆಯ ಅಗತ್ಯ ಇವರಿಗೆ ಇದೆ. ತನ್ನ ವಿರುದ್ಧ ದಾಖಲಿಸಲಾದ ಸುಳ್ಳು ಪ್ರಕರಣ ಹಾಗೂ ಅನ್ಯಾಯದ ವಿರುದ್ಧ ಹೋರಾಡಲು ಅವರು ಬದುಕಬೇಕಾಗಿದೆ’’ ಎಂದು ಹುಸೈನ್ ಹೇಳಿದ್ದಾರೆ.

ಭೀಮಾ ಕೋರೆಗಾಂವ್ ಪ್ರಕರಣ ಪುಣೆಯ ಸಮೀಪದ ಗ್ರಾಮದಲ್ಲಿ 2018ರಲ್ಲಿ ಸಂಭವಿಸಿದ ಜಾತಿ ಹಿಂಸಾಚಾರಕ್ಕೆ ಸಂಬಂಧಿಸಿದ್ದು. ಹಿಂಸಾಚಾರಕ್ಕೆ ಸಂಚು ರೂಪಿಸಿರುವ ಆರೋಪದಲ್ಲಿ ಬಂಧಿತರಾದವರಲ್ಲಿ ನವ್ಲಾಖ ಕೂಡ ಒಬ್ಬರು. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದ ಹಾಗೂ ಹಲವರು ಗಾಯಗೊಂಡಿದ್ದರು. ಸೆಪ್ಟಂಬರ್ನಲ್ಲಿ ನವ್ಲಾಖಾ ಅವರು ತನ್ನನ್ನು ಗೃಹ ಬಂಧನಕ್ಕೆ ಒಳಪಡಿಸುವಂತೆ ಕೋರಿ ಬಾಂಬೆ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ವೃದ್ಧಾಪ್ಯದ ಕಾರಣಕ್ಕೆ ತಲೋಜಾ ಕಾರಾಗೃಹದಲ್ಲಿ ವಾಸಿಸಲು ಕಷ್ಟವಾಗುತ್ತಿದೆ. ಎದೆ ಸಂಬಂಧಿ ವೈದ್ಯಕೀಯ ಪರೀಕ್ಷೆಯ ಅಗತ್ಯತೆ ಇದೆ ಎಂದು ಉಲ್ಲೇಖಿಸಿದ್ದರು.

ನವ್ಲಾಖಾ ಅವರು ಅಸಮರ್ಥನೀಯ ಸೆರೆವಾಸವನ್ನು ಧೈರ್ಯ ಹಾಗೂ ಉತ್ಸಾಹದಿಂದ ಎದುರಿಸುತ್ತಿದ್ದಾರೆ ಎಂದು ಹುಸೈನ್ ಹಾಗೂ ಮಹಿಳಾ ಸಾಮಾಜಿಕ ಹೋರಾಟಗಾರ್ತಿಯೋರ್ವರು ರವಿವಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News