ಪೆರುವಿನ ಜನಸಾಮಾನ್ಯರ ಪರಿಸ್ಥಿತಿ ಬದಲಾಗಬಹುದೇ?

Update: 2021-10-25 19:30 GMT

ಪೆರುವಿನಂತಹ ರಾಷ್ಟ್ರಗಳು ಇಂದು ತಲುಪಿರುವ ದುರಂತ ಸ್ಥಿತಿಗಳಿಗೆ ಭಾರೀ ಜಾಗತಿಕ ಕಾರ್ಪೊರೇಟ್ ಪ್ರೇರಿತ ವಿಶ್ವಬ್ಯಾಂಕ್‌ನಂತಹ ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳದು ಪ್ರಧಾನ ಪಾತ್ರವಾಗಿದೆ ಎನ್ನುವುದು ಈಗ ಸಾಕಷ್ಟು ಜನರಿಗೆ ತಿಳಿದಿರುವ ವಿಚಾರ. ಜನಸಾಮಾನ್ಯರಲ್ಲಿ ಒಬ್ಬರಾಗಿ ಜನಸಾಮಾನ್ಯರ ಪರವಾಗಿ ಮಾತನಾಡುತ್ತಾ ಬಂದ ಕ್ಯಾಸ್ಟಿಲ್ಲೋ ಈಗ ಅಧ್ಯಕ್ಷರಾಗಿ ಆಯ್ಕೆಯಾದಾಗ ತನ್ನ ಆರ್ಥಿಕ ಸಲಹೆಗಾರರನ್ನಾಗಿ ಅದೇ ವಿಶ್ವಸಂಸ್ಥೆಯ ಅರ್ಥಶಾಸ್ತ್ರಜ್ಞನನ್ನು ನೇಮಕ ಮಾಡಿಕೊಂಡಿದ್ದಾರೆ. ಆ ವ್ಯಕ್ತಿಯೇ ಅಧ್ಯಕ್ಷರ ಹಿಂದಿನ ಘೋಷಣೆಗಳ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಹಾಗಿದ್ದಲ್ಲಿ ಪೆರುವಿನ ರಾಜಕೀಯ ಅಧಿಕಾರದಲ್ಲಿ ಏನಾದರೂ ಬದಲಾವಣೆ ಆಗಿದೆಯೆಂದು ನಂಬಲು ಸಾಧ್ಯವೇ? 


ದಕ್ಷಿಣ ಅಮೆರಿಕದ ಒಂದು ಪ್ರಮುಖ ರಾಷ್ಟ್ರ ಪೆರು. ಇತ್ತೀಚೆಗೆ ಈ ರಾಷ್ಟ್ರ ಜಾಗತಿಕವಾಗಿ ಸಾಕಷ್ಟು ಸುದ್ದಿ ಮಾಡತೊಡಗಿದೆ. ಅದಕ್ಕೆ ಸ್ವತಂತ್ರ ಪೆರುವಿನ ಇನ್ನೂರು ವರ್ಷಗಳ ಇತಿಹಾಸದಲ್ಲಿ ಸಾಮಾನ್ಯ ಬಡ ರೈತನ ಮಗ ಹಾಗೂ ಶಿಕ್ಷಕ ವೃತ್ತಿಯ, ವೃತ್ತಿಪರ ರಾಜಕಾರಣಿಯಲ್ಲದ, ಶಿಕ್ಷಕರ ಸಂಘಟನೆಯ ನೇತಾರ 51 ವರ್ಷದ ವ್ಯಕ್ತಿಯಾದ ಪೆಡ್ರೋ ಕ್ಯಾಸ್ಟಿಲ್ಲೋ (Pedro Castillo) ಪೆರುವಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಒಂದು ಮುಖ್ಯ ಕಾರಣ. ಪೆರುವಿನ ಮಾವೋವಾದಿ ಎಡಪಂಥೀಯ ಪಕ್ಷ ಪೆರು ಕಮ್ಯುನಿಸ್ಟ್ ಪಕ್ಷ (ಶೈನಿಂಗ್ ಪಾಥ್)ದ ಅಧ್ಯಕ್ಷ ಆಗಿದ್ದ 86 ವರ್ಷದ ಮ್ಯಾನುಯೆಲ್ ರುಬೆನ್ ಅಬೀಮಲ್ ಗುಝ್ಮನ್ ರೆನೊಸೋ (Manuel Ruben Abimael Guzman Reynoso) ಸೆರೆಮನೆಯಲ್ಲೇ ಸಾವಿಗೆ ಈಡಾಗಿದ್ದು ಎರಡನೇ ಮುಖ್ಯ ಕಾರಣವಾಗಿದೆ.

ಪೆಡ್ರೋ ಕ್ಯಾಸ್ಟಿಲ್ಲೋ ಅಧ್ಯಕ್ಷರನ್ನಾಗಿ ಅಧಿಕೃತವಾಗಿ ಘೋಷಿಸಿದ್ದು ಕಳೆದ ಜುಲೈ 20ರಂದು, ಗೊಂಜಾಲೋ ಎಂದೇ ಹೆಚ್ಚು ಪರಿಚಿತರಾದ ಅಬೀಮಲ್ ಗುಝ್ಮನ್ ಭಾರೀ ಭದ್ರತೆಯ ಸೆರಮನೆಯಲ್ಲಿ ಸಾವನ್ನು ಕಂಡಿದ್ದು ಕಳೆದ ಸೆಪ್ಟಂಬರ್ 11ರಂದು. ಪೆರುವಿನ ಈ ಎರಡು ಘಟನೆಗಳು ಅಮೆರಿಕ, ಯುರೋಪ್, ಆಫ್ರಿಕಾ ಮತ್ತು ಏಶ್ಯ ಖಂಡಗಳ ರಾಷ್ಟ್ರಗಳಲ್ಲಿ ಹಲವಾರು ಪ್ರತಿಕ್ರಿಯೆಗಳಿಗೆ ಕಾರಣವಾದವು. ಪೆಡ್ರೋ ಕ್ಯಾಸ್ಟಿಲ್ಲೋ ಪೆರುವಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದನ್ನು ಜಾಗತಿಕವಾಗಿ ಎಡ ಹಾಗೂ ಒಂದು ಸ್ತರದ ಸಾಮಾನ್ಯ ಪ್ರಜಾಸತ್ತಾತ್ಮಕ ವಲಯವು ಉತ್ಸಾಹದಿಂದ ಸ್ವಾಗತಿಸಿತು. ಹಾಗೆಯೇ ಗೊಂಜಾಲೋರ ಸಾವನ್ನು ಸರಕಾರಿ ಕೊಲೆ ಎಂದು ಖಂಡಿಸಿ ಜಾಗತಿಕವಾಗಿ ಹಲವಾರು ರಾಷ್ಟ್ರಗಳಲ್ಲಿ ಪ್ರತಿಭಟನೆಗಳು ನಡೆದು ಖಂಡನೆಗಳಿಗೆ ಈಡಾಯಿತು. ಹಲವಾರು ರಾಷ್ಟ್ರಗಳಲ್ಲಿ, ಗೊಂಜಾಲೋರ ಸ್ಮರಣ ಸಭೆಗಳು ನಡೆದವು. ಮಾವೋವಾದಿ ಕ್ರಾಂತಿಕಾರಿ ಎಡ ಚಿಂತನೆಯ ವಲಯವು ಗೊಂಜಾಲೋ ಸಾವಿನ ಬಗ್ಗೆ ಹೆಚ್ಚು ತೀಕ್ಣವಾಗಿ ಪ್ರತಿಕ್ರಿಯಿಸಿದ್ದಲ್ಲದೆ ಗೊಂಜಾಲೋ ಸಾವನ್ನು ಸಾಮ್ರಾಜ್ಯಶಾಹಿ ಬಾಲಂಗೋಚಿಯಾದ ಪೆರು ಸರಕಾರ ನಡೆಸಿದ ಕೊಲೆ ಎಂದೇ ವ್ಯಾಖ್ಯಾನಿಸಿ ಪ್ರತಿಭಟನೆಗಳನ್ನು ಸಂಘಟಿಸಿತು.

 ಪೆರು ಗಣರಾಜ್ಯ 33 ದಶಲಕ್ಷ ಜನಸಂಖ್ಯೆ ಇರುವ ರಾಷ್ಟ್ರ. ಇಪ್ಪತ್ತೈದು ಪ್ರಾಂತಗಳನ್ನು ಹೊಂದಿದೆ. ಜಾಗತಿಕವಾಗಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 82ನೇ ಸ್ಥಾನದಲ್ಲಿದೆ. ಅಂತರ್‌ರಾಷ್ಟ್ರೀಯ ಹಣಕಾಸು ನಿಧಿಯ ಅಂಕಿ-ಅಂಶದ ಪ್ರಕಾರ ಈ ರಾಷ್ಟ್ರ ಒಟ್ಟು ಕೊಳ್ಳುವ ಶಕ್ತಿ ಹೋಲಿಕೆಯಾಧರಿತ ರಾಷ್ಟ್ರೀಯ ಉತ್ಪನ್ನದಲ್ಲಿ ಜಾಗತಿಕವಾಗಿ 47ನೇ ಸ್ಥಾನದಲ್ಲಿ ಇದ್ದರೆ ಸರಾಸರಿ ತಲಾದಾಯದಲ್ಲಿ ನೂರಾ ಮೂರನೇ ಸ್ಥಾನದಲ್ಲಿದೆ. ಪೆರುವಿನ ಅಭಿವೃದ್ಧಿ ದರ ಹೆಚ್ಚಿದ್ದರೂ ಜನಸಾಮಾನ್ಯರ ಬದುಕುಗಳಲ್ಲಿ ಅದರ ಪ್ರತಿಫಲನ ಸಕಾರಾತ್ಮಕವಾಗಿಲ್ಲ ಎಂಬುದನ್ನು ಗಮನಿಸಬೇಕಿದೆ. ಇಂತಹ ಪರಿಸ್ಥಿತಿ ಹಲವು ರಾಷ್ಟ್ರಗಳಲ್ಲಿ ನಾವು ನೋಡಬಹುದು.

ಮುಖ್ಯ ಭಾಷೆ ಸ್ಪಾನಿಷ್ ಆಗಿದ್ದು ಕ್ವೆಚ್ಚುವಾ, ಆಯ್ಮೆರ ಇನ್ನಿತರ ಮೂಲನಿವಾಸಿ ಭಾಷೆಗಳಿವೆ. ಉತ್ತರದಲ್ಲಿ ಈಕ್ವೆಡಾರ್ ಮತ್ತು ಕೊಲಂಬಿಯಾ, ಪೂರ್ವದಲ್ಲಿ ಬ್ರೆಝಿಲ್, ಆಗ್ನೇಯದಲ್ಲಿ ಬೊಲಿವಿಯಾ, ದಕ್ಷಿಣದಲ್ಲಿ ಚಿಲಿ ರಾಷ್ಟ್ರಗಳು ಮತ್ತು ದಕ್ಷಿಣ ಮತ್ತು ಪಶ್ಚಿಮದಲ್ಲಿ ಫೆಸಿಫಿಕ್ ಸಮುದ್ರ ಇರುವ ಈ ರಾಷ್ಟ್ರದಲ್ಲಿ ಆಂಡೀಸ್ ಪರ್ವತಸಾಲುಗಳು ಅಮೆಝಾನ್ ಅರಣ್ಯದವರೆಗೂ ಚಾಚಿಕೊಂಡಿವೆ. ಇದು ಜಗತ್ತಿನ 19ನೇ ದೊಡ್ಡ ರಾಷ್ಟ್ರವಾಗಿದೆ. ಲಿಮಾವನ್ನು ರಾಜಧಾನಿಯಾಗಿ ಹೊಂದಿರುವ ಈ ರಾಷ್ಟ್ರ ಜಗತ್ತಿನ ನಾಗರಿಕತೆಯ ತೊಟ್ಟಿಲುಗಳಲ್ಲಿ ಒಂದಾಗಿದೆ. ಇದನ್ನು ಕಾರಲ್ ನಾಗರಿಕತೆ ಅಥವಾ ನೋರ್ಟೆ ಚಿಕೋ ಅಥವಾ ಕಾರಲ್- ಸುಪೆ ನಾಗರಿಕತೆ ಎಂದು ಕರೆಯಲಾಗುತ್ತಿದೆ. ಹದಿನಾರನೇ ಶತಮಾನದಲ್ಲಿ ಪೆರು ಸ್ಪೈನ್ ಸಾಮ್ರಾಜ್ಯದ ದಾಳಿಗೆ ಒಳಗಾಯಿತು. 1821ರಲ್ಲಿ ಸ್ಪೈನ್ ಸಾಮ್ರಾಜ್ಯದಿಂದ ಇದು ತನ್ನ ಸ್ವಾತಂತ್ರ್ಯ ಪಡೆದಿದ್ದರೂ ನಂತರ ಕೂಡ ಬಾಹ್ಯ ಆಕ್ರಮಣಗಳು ಜರುಗಿ ‘ಆಯಾಕುಚೋ ಯುದ್ಧ’ ಎಂದು ಹೆಸರಾದ ನಿರ್ಣಾಯಕ ಯುದ್ಧ ನಡೆದು 1824ರಲ್ಲಿ ಸಂಪೂರ್ಣವಾಗಿ ಸ್ವತಂತ್ರವನ್ನು ಘೋಷಿಸಿಕೊಂಡಿತು. ಪೆರು ಹನ್ನೆರಡು ವರ್ಷಗಳ ಸೇನಾಡಳಿತಕ್ಕೆ ಕೂಡ ಒಳಪಡುತ್ತದೆ. 1990ರಲ್ಲಿ ಸೇನಾಧಿಕಾರಿ ಅಲ್ಬರ್ಟೋ ಪ್ಯುಜಿಮೋರಿ ಅಧ್ಯಕ್ಷರಾಗಿ ಚುನಾಯಿತರಾಗಿ ಮೂರು ಅವಧಿಗೆ ಅಧ್ಯಕ್ಷರಾಗಿ ಮುಂದುವರಿದು ಭಾರೀ ಹಗರಣಗಳು ಹಾಗೂ ನಿರಂಕುಶ ಆಡಳಿತದ ಕಾರಣದಿಂದಾಗಿ 2000ದಲ್ಲಿ ಅನಿವಾರ್ಯವಾಗಿ ರಾಜೀನಾಮೆ ಕೊಡಬೇಕಾಗುತ್ತದೆ. ಪೆರುವಿನ ಜನಸಮುದಾಯಗಳಲ್ಲಿ ಬಿಳಿ ಮತ್ತು ಮೂಲನಿವಾಸಿ ಮಿಶ್ರ ಸಮುದಾಯವಾದ ಮೆಸ್ಟಿಜೋ ಶೇ. 60.20ರಷ್ಟು ಇದೆ. ಉಳಿದಂತೆ ಮೂಲನಿವಾಸಿ ಸಮುದಾಯ ಶೇ. 25.80ರಷ್ಟು, ಬಿಳಿಯರು ಶೇ.5.89ರಷ್ಟು, ಕರಿಯರು 3.87ರಷ್ಟು ಇದ್ದರೆ ಉಳಿದಂತೆ ಜಪಾನಿ, ಚೀನಿ ಇನ್ನಿತರ ಮೂಲದವರು ಅಲ್ಪಪ್ರಮಾಣದಲ್ಲಿ ಇದ್ದಾರೆ.

ಗೊಂಜಾಲೋ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದವರು. ಮಾರ್ಕ್ಸ್‌ವಾದ, ಲೆನಿನ್ ವಾದ ಮತ್ತು ಮಾವೋವಾದದ ಪ್ರಭಾವಕ್ಕೆ ಒಳಗಾದ ಗೊಂಜಾಲೋ 1969ರಲ್ಲಿ ಪೆರು ಸರಕಾರದ ವಿರುದ್ಧ ಬಂಡಾಯವನ್ನು ಸಂಘಟಿಸುತ್ತಾರೆ. ನಂತರ 1970ರಲ್ಲಿ ಭೂಗತರಾಗಿ ಸಶಸ್ತ್ರ ಬಂಡಾಯವನ್ನು ಮುನ್ನಡೆಸುತ್ತಾರೆ. ಅವರ ಬಂಡಾಯವನ್ನು ಪೆರುವಿನ ಜನತೆಯ ಯುದ್ಧ ಎಂದು ಕರೆದುಕೊಳ್ಳುತ್ತಾ 1992ರಲ್ಲಿ ಅವರು ಮತ್ತವರ ಕೇಂದ್ರ ಸಮಿತಿಯ ಸದಸ್ಯರುಗಳು ಬಂಧಿತರಾಗುವವರೆಗೂ ಅದರ ಅಧ್ಯಕ್ಷರಾಗಿ ನೇತೃತ್ವ ವಹಿಸಿದ್ದರು. 1992ರಿಂದ 2021ರ ಸೆಪ್ಟಂಬರ್ 11ರ ಅವರ ಸಾವಿನವರೆಗೂ ಅವರು ಭಾರೀ ಭದ್ರತೆಯ ತೀವ್ರ ನಿರ್ಬಂಧದ ಸೆರೆವಾಸದಲ್ಲಿ ಇದ್ದರು. ಅವರಿಗೆ ಸರಿಯಾದ ವ್ಯವಸ್ಥೆ ಹಾಗೂ ವೈದ್ಯಕೀಯ ಚಿಕಿತ್ಸೆ ನೀಡದೆ ಸಾಯಿಸಲಾಯಿತು ಎಂಬ ಗಂಭೀರ ಆರೋಪಗಳು ಹಲವು ವಲಯಗಳಿಂದ ಕೇಳಿಬರುತ್ತಿವೆ. ಯಾಕೆಂದರೆ ಅವರ ವಯಸ್ಸಿನ ಕಾರಣ ಹಾಗೂ ಆರೋಗ್ಯದ ದೃಷ್ಟಿಯಿಂದ ಅವರನ್ನು ಬಿಡುಗಡೆ ಮಾಡಬೇಕೆಂಬ ಜಾಗತಿಕ ಅಭಿಯಾನವೂ ಕೂಡ ನಡೆದುಕೊಂಡು ಬಂದಿತ್ತು. ಪೆರುವಿನ ಈಗಿನ ಹೊಸ ಸರಕಾರವೂ ಕೂಡ ಹಿಂದಿನ ಪ್ಯುಜಿಮೋರಿ ಮತ್ತು ನಂತರದ ಅವರ ಮಗಳ ಸರಕಾರಗಳಂತೆ ಆ ಒತ್ತಾಯಗಳನ್ನು ಮಾನ್ಯ ಮಾಡಿರಲಿಲ್ಲ.

ಪೆರುವಿನ ಹೊಸ ಅಧ್ಯಕ್ಷ ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಂವಿಧಾನವನ್ನು ಪೆರುವಿನ ಜನಸಾಮಾನ್ಯರ ಪರವಿರುವಂತೆ ಪುನರ್ ರಚಿಸುವುದಾಗಿಯೂ, ಗಣಿಗಾರಿಕೆಯನ್ನು, ನೈಸರ್ಗಿಕ ಅನಿಲ ಕ್ಷೇತ್ರಗಳನ್ನು ರಾಷ್ಟ್ರೀಕರಿಸುವುದಾಗಿಯೂ, ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಮತ್ತು ಆದ್ಯತೆ ಕೊಡುವುದಾಗಿಯೂ, ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡುವುದಾಗಿಯೂ ಘೋಷಿಸಿದ್ದರು. ಅಲ್ಬರ್ಟೋ ಪ್ಯುಜಿಮೋರಿ ಅಧ್ಯಕ್ಷರಾಗಿದ್ದಾಗ ಸಂವಿಧಾನವನ್ನು ಮಾರ್ಪಡಿಸಿ ಆರೋಗ್ಯ, ಶಿಕ್ಷಣ ಮೊದಲಾದ ಜನಕಲ್ಯಾಣ ಕಾರ್ಯಗಳಿಗೆ ಸರಕಾರ ವ್ಯಯಿಸುವುದನ್ನು ತಡೆಯುವ, ನಿಯಂತ್ರಿಸುವ ತಿದ್ದುಪಡಿಗಳನ್ನು ಸೇರಿಸಲಾಗಿತ್ತು. ಅದರಿಂದಾಗಿ ಪೆರು ಜನರಿಗೆ ಶಿಕ್ಷಣ, ಆರೋಗ್ಯ ಮೊದಲಾದ ಮೂಲಭೂತ ಅವಶ್ಯಕತೆಗಳು ಅಲಭ್ಯವಾಗಿಬಿಟ್ಟಿತು. ಕೋವಿಡ್ ನೆಪದಲ್ಲಿ ಈಗಾಗಲೇ ಸುಮಾರು ಎರಡು ಲಕ್ಷಕ್ಕಿಂತಲೂ ಹೆಚ್ಚು ಪೆರು ಜನರು ಸಾವಿಗೆ ಈಡಾಗಿದ್ದಾರೆ. ಪೆರುವನ್ನು ವಿಶ್ವಸಂಸ್ಥೆ ಮೇಲ್ಮಧ್ಯಮ ಆರ್ಥಿಕತೆ ಎಂದು ಕರೆಯುತ್ತದೆ. ಈ ದೇಶವು 39ನೇ ದೊಡ್ಡ ಆರ್ಥಿಕತೆಯನ್ನು ಹೊಂದಿದೆ. ಜಾಗತಿಕವಾಗಿ ರಫ್ತಿನಲ್ಲಿ 59ನೇ ಸ್ಥಾನವನ್ನು ಹೊಂದಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆಂದು ಜಾಗತಿಕವಾಗಿ ಗುರುತಿಸಲಾಗುತ್ತಿದೆ. ತಾಮ್ರ, ಚಿನ್ನ, ಬೆಳ್ಳಿ, ಸೀಸ, ಝಿಂಕ್ ಮೊದಲಾದ ನೈಸರ್ಗಿಕ ಖನಿಜಗಳು ಹಾಗೂ ನೈಸರ್ಗಿಕ ತೈಲಸಂಪತ್ತನ್ನು ಹೊಂದಿರುವ ರಾಷ್ಟ್ರವಿದು. ಕಾಫಿ, ಹತ್ತಿ, ಕಬ್ಬು, ಭತ್ತ, ಕೋಕೋ, ಕೋಳಿಸಾಕಣೆ, ದನಸಾಕಣೆ ಇತ್ಯಾದಿ ಇಲ್ಲಿನ ಪ್ರಮುಖ ಕೃಷಿಯಾಗಿದೆ.

ನೈಸರ್ಗಿಕ ಖನಿಜಗಳ ಗಣಿಗಾರಿಕೆಗಳ ಹಿಡಿತ ಬಹುತೇಕವಾಗಿ ಅಮೆರಿಕ ಮೂಲದ ಕಂಪೆನಿಗಳ ಕೈಯಲ್ಲಿವೆ. ಅಲ್ಬರ್ಟೋ ಫ್ಯುಜಿಮೋರಿ ಚುನಾಯಿತ ಸರ್ವಾಧಿಕಾರಿಯಾಗಿ ಪ್ರಧಾನವಾಗಿ ಅಮೆರಿಕ ಮೂಲದ ಭಾರೀ ಕಾರ್ಪೊರೇಟ್‌ಗಳ ಹಿತಾಸಕ್ತಿಯನ್ನು ಕಾಪಾಡಿಕೊಂಡು ಅದಕ್ಕೆ ತಕ್ಕಂತೆ 1993ರಲ್ಲಿ ಸಂವಿಧಾನವನ್ನು, ಕಾನೂನುಗಳನ್ನು ಬದಲಾಯಿಸಿದ್ದರು. ಅವರ ಆಡಳಿತದಲ್ಲಿ ಪೆರುವಿನ ಜನಸಾಮಾನ್ಯರು ರೋಸಿ ಹೋಗಿದ್ದರು. ಫ್ಯುಜಿಮೋರಿ ಮಾಡಿದ ದೊಡ್ಡ ಪ್ರಮಾಣದ ಭ್ರಷ್ಟಾಚಾರದ ಹಗರಣಗಳು ಬಯಲಿಗೆ ಬಂದು ನ್ಯಾಯಾಂಗದ ಕಟ್ಟೆಗೆ ತಲುಪಿ ಭಾರೀ ಒತ್ತಡ ಉಂಟಾಗಿದ್ದರಿಂದಾಗಿ ಪದತ್ಯಾಗ ಮಾಡಬೇಕಾಗಿ ಬಂದಿತ್ತು. ಕೊನೆಗೆ ಅಲ್ಬರ್ಟೋ ಫ್ಯುಜಿಮೋರಿ ಬಂಧನಕ್ಕೆ ಒಳಗಾಗಬೇಕಾಯಿತು. ಆರ್ಥಿಕ ಬಿಕ್ಕಟ್ಟಿನ ಪರಿಣಾಮವಾಗಿ ರಾಜಕೀಯ ಅಸ್ಥಿರತೆ ಬೆಳೆಯುತ್ತಾ ಹೋಯಿತು. ಅದರಲ್ಲೂ ಕಳೆದ ಏಳು ವರ್ಷಗಳಲ್ಲಿ ಪೆರುವಿನಲ್ಲಿ ನಡೆದ ವಿದ್ಯಮಾನಗಳು ಸ್ಫೋಟಕ ಪರಿಸ್ಥಿತಿಯನ್ನು ಸೃಷ್ಟಿಸಿತ್ತು. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಮೂವರು ಅಧ್ಯಕ್ಷರಾಗಿ ಅಧಿಕಾರಕ್ಕೇರಿ ಇಳಿಯಬೇಕಾಯಿತು. ಪೆರು ರಾಷ್ಟ್ರದ ಈ ಹಿಂದಿನ ಹತ್ತು ಜನ ಅಧ್ಯಕ್ಷರಲ್ಲಿ ಏಳು ಜನರು ಅಪರಾಧಿಗಳಾಗಿ ಶಿಕ್ಷೆಗೆ ಒಳಗಾಗಿದ್ದಾರೆ ಇಲ್ಲವೇ ಭ್ರಷ್ಟಾಚಾರಕ್ಕಾಗಿ ತನಿಖೆ ಎದುರಿಸುತ್ತಿದ್ದಾರೆ ಎಂದರೆ ಅಲ್ಲಿನ ರಾಜಕೀಯ ಅಸ್ಥಿರತೆಯ ಪ್ರಮಾಣ ಯಾವ ಮಟ್ಟದ್ದು ಎಂಬುದು ಅರ್ಥವಾಗಬಹುದು. ಇವೆಲ್ಲದರ ಪರಿಣಾಮವಾಗಿ ಪೆರುವಿನ ಜನಸಾಮಾನ್ಯರು ತತ್ತರಿಸಿಹೋಗಿದ್ದರು. ನಿರುದ್ಯೋಗದ ಪ್ರಮಾಣ ಹಿಂದೆಂದಿಗಿಂತಲೂ ಅಧಿಕವಾದವು. ಕೊರೋನ ಸಂದರ್ಭದಲ್ಲಿ ಮತ್ತೂ ಎರಡು ದಶಲಕ್ಷ ಜನರ ಉದ್ಯೋಗಾವಕಾಶಗಳು ನಷ್ಟವಾದವು. ಹೆಚ್ಚು ಕಮ್ಮಿ ಪೆರುವಿನ ಮೂವರಲ್ಲಿ ಒಬ್ಬರು ತೀವ್ರ ಬಡತನಕ್ಕೆ ತುತ್ತಾಗಿದ್ದಾರೆ ಎಂದು ವರದಿಗಳು ಹೇಳುತ್ತವೆ.

ಇಂತಹ ಒಂದು ನಿರ್ದಿಷ್ಟ ಸಂದರ್ಭದಲ್ಲಿ ಪೆರು ಚುನಾವಣೆ ನಡೆದು ಜನಸಾಮಾನ್ಯರಲ್ಲಿ ಒಬ್ಬರಾಗಿರುವ ಗ್ರಾಮೀಣ ಪ್ರದೇಶದ ವ್ಯಕ್ತಿ ಪೆಡ್ರೋ ಕ್ಯಾಸ್ಟಿಲ್ಲೋ ಚುನಾಯಿತರಾಗಿದ್ದಾರೆ. ಅವರ ಗೆಲುವು ಸರಳ ಮತ್ತು ಸರಾಗವಾಗಿ ನಡೆಯಲಿಲ್ಲ. ಎದುರಾಳಿ ಅಭ್ಯರ್ಥಿ ಈ ಹಿಂದಿನ ಅಧ್ಯಕ್ಷೆ ಕಿಕೋ ಫ್ಯುಜಿಮೋರಿಗಿಂತ ಕೇವಲ 44,000 ಮತಗಳನ್ನು ಹೆಚ್ಚಾಗಿ ಪೆಡ್ರೋ ಕ್ಯಾಸ್ಟಿಲ್ಲೋ ಪಡೆದಿದ್ದಾರೆ. ಕಿಕೋ ಭ್ರಷ್ಟಾಚಾರ ಹಗರಣಗಳಿಗಾಗಿ ಈಗ ಸೆರೆವಾಸದಲ್ಲಿರುವ ಅಲ್ಬರ್ಟೋ ಫ್ಯುಜಿಮೋರಿಯ ಮಗಳು. ಚುನಾವಣಾ ಫಲಿತಾಂಶವನ್ನು ಕಿಕೋ ಒಪ್ಪದೆ ಚುನಾವಣಾ ಅಕ್ರಮ ನಡೆದಿದೆ ಎಂದೆಲ್ಲಾ ವಿವಾದ ಸೃಷ್ಟಿಸಿದರು. ಬೀದಿ ಪ್ರದರ್ಶನಗಳು ಎರಡೂ ಕಡೆಯವರ ಪರ ನಡೆಯತೊಡಗುತ್ತದೆ. ಚುನಾವಣಾ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲು ಆರುವಾರಗಳ ಕಾಲ ಹಿಡಿದವು. ಕ್ಯಾಸ್ಟಿಲ್ಲೋರನ್ನು ಅಧ್ಯಕ್ಷರನ್ನಾಗಿ ನೋಡಲು ಸೇನೆಯ ಮಾಜಿ ಹಾಗೂ ಹಾಲಿ ಅಧಿಕಾರಿಗಳು ಅಸಮ್ಮತಿ ಹಾಗೂ ಅಸಮಾಧಾನ ಬಹಿರಂಗವಾಗಿ ಪ್ರಕಟಿಸುತ್ತಾರೆ. ಈ ಬಗ್ಗೆ ಜನರ ಆಕ್ರೋಶ ಹಾಗೂ ಇತರ ಒತ್ತಡ ಹೆಚ್ಚಾದ ನಂತರ ‘‘ಜನರು ಚುನಾಯಿಸಿದವರನ್ನು ನಾವು ಗೌರವಯುತವಾಗಿ ಸ್ವೀಕರಿಸುತ್ತೇವೆ’’ ಎಂದು ಸೇನೆ ಪ್ರಕಟಿಸಿತು.

ರಾಷ್ಟ್ರಾದ್ಯಂತ ಬಿಗುವಿನ ವಾತಾವರಣ ಹರಡತೊಡಗಿತು. ಚುನಾವಣೆಯ ಮೇಲೆ ನಿಗಾ ವಹಿಸಲು ಅಮೆರಿಕ ಯುರೋಪ್ ಮೊದಲಾದೆಡೆಯಿಂದ ಬಂದಿದ್ದ ಅಂತರ್‌ರಾಷ್ಟ್ರೀಯ ವೀಕ್ಷಕರು ಮತ್ತು ಅಮೆರಿಕ ಪರವಾದ ಆರ್ಗನೈಸೇಶನ್ ಫಾರ್ ಅಮೆರಿಕನ್ ಸ್ಟೇಟ್ಸ್ ಸಂಸ್ಥೆ ಯಾವುದೇ ಚುನಾವಣಾ ಅಕ್ರಮ ನಡೆದಿಲ್ಲ, ಚುನಾವಣೆ ನ್ಯಾಯಸಮ್ಮತವಾಗಿ ನಡೆದಿದೆ ಎಂದು ದೃಢೀಕರಿಸುತ್ತಾರೆ. ಅಂತರ್‌ರಾಷ್ಟ್ರಿಯವಾಗಿಯೂ ಚುನಾವಣಾ ಫಲಿತಾಂಶವನ್ನು ಒಪ್ಪಬೇಕೆಂಬ ಒತ್ತಡ ಹೆಚ್ಚಾಯಿತು. ಕೊನೆಗೆ ಅನಿವಾರ್ಯವಾಗಿ ಕಿಕೋ ಫ್ಯುಜಿಮೋರಿ ಚುನಾವಣಾ ಸೋಲನ್ನು ಒಪ್ಪಿಕೊಂಡರು. ಪೆಡ್ರೋ ಕ್ಯಾಸ್ಟಿಲ್ಲೋರನ್ನು ಪೆರುವಿನ ಹೊಸ ಅಧ್ಯಕ್ಷರನ್ನಾಗಿ ಘೋಷಿಸಲಾಯಿತು.

ಚುನಾವಣಾ ಪೂರ್ವದಲ್ಲಿ ಕ್ಯಾಸ್ಟಿಲ್ಲೋ ಗಣಿಗಾರಿಕೆ, ತೈಲ ಮೊದಲಾದ ಕ್ಷೇತ್ರಗಳನ್ನು ರಾಷ್ಟ್ರೀಕರಿಸುವುದಾಗಿ ಘೋಷಿಸಿದ್ದರೂ ಈಗವರು ಅದರಿಂದ ಹಿಂದೆ ಸರಿದಿದ್ದಾರೆ. ಅವರು ತಮ್ಮ ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡ ವಿಶ್ವಬ್ಯಾಂಕಿನ ಅರ್ಥಶಾಸ್ತ್ರಜ್ಞ ಪೆಡ್ರೋ ಫ್ರಾಂಕೋ ಇದನ್ನು ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವಿದೆ. ಪೆರುವಿನಂತಹ ರಾಷ್ಟ್ರಗಳು ಇಂದು ತಲುಪಿರುವ ದುರಂತ ಸ್ಥಿತಿಗಳಿಗೆ ಭಾರೀ ಜಾಗತಿಕ ಕಾರ್ಪೊರೇಟ್ ಪ್ರೇರಿತ ವಿಶ್ವಬ್ಯಾಂಕ್‌ನಂತಹ ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳದು ಪ್ರಧಾನ ಪಾತ್ರವಾಗಿದೆ ಎನ್ನುವುದು ಈಗ ಸಾಕಷ್ಟು ಜನರಿಗೆ ತಿಳಿದಿರುವ ವಿಚಾರ. ಜನಸಾಮಾನ್ಯರಲ್ಲಿ ಒಬ್ಬರಾಗಿ ಜನಸಾಮಾನ್ಯರ ಪರವಾಗಿ ಮಾತನಾಡುತ್ತಾ ಬಂದು ಈಗ ಅಧ್ಯಕ್ಷರಾಗಿ ಆಯ್ಕೆಯಾದಾಗ ತನ್ನ ಆರ್ಥಿಕ ಸಲಹೆಗಾರರನ್ನಾಗಿ ಅದೇ ವಿಶ್ವಸಂಸ್ಥೆಯ ಅರ್ಥಶಾಸ್ತ್ರಜ್ಞನನ್ನು ನೇಮಕ ಮಾಡಿಕೊಂಡಿದ್ದಾರೆ. ಆ ವ್ಯಕ್ತಿಯೇ ಅಧ್ಯಕ್ಷರ ಹಿಂದಿನ ಘೋಷಣೆಗಳ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಹಾಗಿದ್ದಲ್ಲಿ ಪೆರುವಿನ ರಾಜಕೀಯ ಅಧಿಕಾರದಲ್ಲಿ ಏನಾದರೂ ಬದಲಾವಣೆ ಆಗಿದೆಯೆಂದು ನಂಬಲು ಸಾಧ್ಯವೇ? ಇದಕ್ಕೆ ಇಂಬು ಕೊಡುವಂತೆ ಹಲವಾರು ಘಟನೆಗಳು ಪೆರುವಿನಲ್ಲಿ ನಡೆಯತೊಡಗಿವೆ. ರಾಜಕೀಯ ಸ್ಥಿರತೆಯ ವಿಚಾರ ತೂಗುಯ್ಯಿಲೆಯಲ್ಲಿದೆ. ಹೊಸ ಅಧ್ಯಕ್ಷ ಎರಡು ತಿಂಗಳ ಒಳಗಾಗಿ ತನ್ನ ಆಯ್ಕೆಯ ಪ್ರಧಾನಿ ಹಾಗೂ ಮಂತ್ರಿ ಮಂಡಲದ ರಾಜೀನಾಮೆ ಪಡೆದು ಹೊಸ ಪ್ರಧಾನಿ ಹಾಗೂ ಮಂತ್ರಿಮಂಡಲ ರಚಿಸಬೇಕಾಗಿ ಬಂದಿದೆ. ಸೇನೆಯ ಹಲವು ಅಧಿಕಾರಿಗಳು ಅವರ ಹುದ್ದೆ ತೊರೆಯುವ ಹಾದಿ ಹಿಡಿದಿದ್ದಾರೆ. ಅಲ್ಲದೆ ಪೆರುವಿನ ಕಾಂಗ್ರೆಸ್ ನಲ್ಲಿ ಅಧ್ಯಕ್ಷರ ಫ್ರಿ ಪೆರು ಪಾರ್ಟಿಯ ಹಿಡಿತ ಇಲ್ಲದೆ ಎದುರಾಳಿ ಪಕ್ಷಗಳ ಕೂಟದ ಹಿಡಿತವಿದೆ. ಅದರಲ್ಲೂ ಕಿಕೋ ಫ್ಯುಜಿಮೋರಿಯ ಹಿಡಿತ ಕೂಡ ಸಾಕಷ್ಟಿದೆ. ಅದೂ ಅಲ್ಲದೆ ಎಡಪಂಥೀಯ ಎನ್ನುವ ಫ್ರೀ ಪೆರು ಪಾರ್ಟಿಯಲ್ಲಿ ಬಣಜಗಳಗಳು ಕೂಡ ಇವೆ. ಪೆರುವಿನಲ್ಲಿ ಶೈನಿಂಗ್ ಪಾತ್‌ನ ಸಶಸ್ತ್ರ ಬಂಡಾಯ ಈಗಲೂ ಸಕ್ರಿಯವಾಗಿದೆ ಎಂಬ ವರದಿಗಳಿವೆ.

ಹಾಲಿ ಇರುವ ಆಡಳಿತ ವ್ಯವಸ್ಥೆಯ ಬುನಾದಿಯ ಮೇಲೆ ಜನಸಾಮಾನ್ಯರಲ್ಲಿ ಒಬ್ಬರು ಅಧಿಕಾರಕ್ಕೇರಿದರೂ ಜನಸಾಮಾನ್ಯರನ್ನು ಒಂದಷ್ಟು ಕಾಲ ಭ್ರಮೆಗೆ ಒಳಪಡಿಸುವ ಮೂಲಕ, ಸಮಾಧಾನ ಪಡಿಸಿ, ಸ್ಫೋಟಕ ಪರಿಸ್ಥಿತಿಯನ್ನು ತಣಿಸುವ ಕೆಲಸ ಬಿಟ್ಟರೆ, ಜನಸಾಮಾನ್ಯರ ಪರವಾಗಿ ಬೇರೇನೂ ಮೂಲಭೂತ ಬದಲಾವಣೆಗಳನ್ನು ಮಾಡಲಾಗದು ಎಂಬುದಕ್ಕೆ ಈಗ ಪೆರುವಿನ ಉದಾಹರಣೆ ಹೊಸ ಸೇರ್ಪಡೆ ಎನಿಸತೊಡಗಿದೆ.


ಮಿಂಚಂಚೆ: nandakumarnandana67@gmail.com

Writer - ನಂದಕುಮಾರ್ ಕೆ.ಎನ್.

contributor

Editor - ನಂದಕುಮಾರ್ ಕೆ.ಎನ್.

contributor

Similar News