×
Ad

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಪ್ರತಿಮೆಗಳ ತೆರವು: ಕ್ರಮಕ್ಕೆ ಹೈಕೋರ್ಟ್ ಆದೇಶ

Update: 2021-10-30 17:33 IST

ಬೆಂಗಳೂರು, ಅ.30: ಬಿಬಿಎಂಪಿ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಅನಧಿಕೃತ ಧ್ವಜಸ್ತಂಭ ಹಾಗೂ ಪ್ರತಿಮೆಗಳ ತೆರವಿಗೆ ದೂರು ಸಲ್ಲಿಕೆಯಾದರೆ, ಆ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ಪಾಲಿಕೆಗೆ ನಿರ್ದೇಶಿಸಿದೆ.

ರಸ್ತೆ ಮತ್ತು ಪಾದಚಾರಿ ಮಾರ್ಗಗಳಲ್ಲಿ ಸ್ಥಾಪಿಸಲಾಗಿರುವ ಅನಧಿಕೃತ ಧ್ವಜಸ್ತಂಭ ಮತ್ತು ಪ್ರತಿಮೆಗಳ ತೆರವು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. 

ಅರ್ಜಿದಾರರ ಪರ ವಾದಿಸಿದ ವಕೀಲರು, ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಮೇಲಿನ ಅನಧಿಕೃತ ಪ್ರತಿಮೆ ಮತ್ತು ಧ್ವಜಸ್ತಂಭಗಳಿಂದ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಅವುಗಳನ್ನು ತೆರವುಗೊಳಿಸಲು ಸರಕಾರ ಮತ್ತು ಪೆÇಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿದರು.

ಬಿಬಿಎಂಪಿ ಪರ ವಕೀಲರು ವಾದಿಸಿ, ನಿರ್ದಿಷ್ಟವಾಗಿ ಯಾವ ಪ್ರತಿಮೆಯಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಅರ್ಜಿದಾರರು ಹೇಳಿಲ್ಲ. ನಗರದಲ್ಲಿ ಕೆಲ ಪ್ರತಿಮೆಗಳು ಎರಡು ದಶಕಗಳಿಂದ ಇವೆ. ಅವುಗಳಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಇಲ್ಲ. ಒಂದು ವೇಳೆ ಯಾವ ಪ್ರತಿಮೆಯಿಂದ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ನಿಖರವಾಗಿ ತಿಳಿಸಿದರೆ, ಆ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಹೇಳಿಕೆ ದಾಖಲಿಸಿಕೊಂಡ ಪೀಠ, ಯಾವ ಪ್ರತಿಮೆಯಿಂದ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಬಗ್ಗೆ 10 ದಿನಗಳಲ್ಲಿ ಅರ್ಜಿದಾರರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರು ಸಲ್ಲಿಸಬೇಕು. ಒಂದು ವೇಳೆ, ಅರ್ಜಿದಾರರು ದೂರು ಸಲ್ಲಿಸಿದರೆ, ಆ ಕುರಿತು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕ್ರಮ ಜರುಗಿಸಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News