ಅಮೆರಿಕ ನೌಕಾಪಡೆ ಜತೆಗಿನ ಘರ್ಷಣೆಯ ಬೆನ್ನಲ್ಲೇ ಇರಾನ್‌ನಲ್ಲಿ ಬೃಹತ್ ಸೇನಾ ಕವಾಯತು ಆರಂಭ

Update: 2021-11-07 16:54 GMT
photo:AP

ಟೆಹ್ರಾನ್, ನ.7: ಒಮನ್ ಬಳಿ ಸಮುದ್ರದಲ್ಲಿ ತೈಲ ಟ್ಯಾಂಕರ್‌ನ ಜಫ್ತಿಗೆ ಸಂಬಂಧಿಸಿ ಇರಾನ್‌ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ಸ್ ಕಾರ್ಪ್ಸ್(ಐಆರ್‌ಜಿಸಿ) ಮತ್ತು ಅಮೆರಿಕದ ನೌಕಾಪಡೆ ಮಧ್ಯೆ ಘರ್ಷಣೆ ನಡೆದ ಬಳಿಕ, ಇರಾನ್‌ನ ಸೇನಾಪಡೆಯು ಬೃಹತ್ ಪ್ರಮಾಣದ ಸೇನಾ ಕವಾಯತು ನಡೆಸಿದೆ ಎಂದು ವರದಿಯಾಗಿದೆ.

ರವಿವಾರ ಬೆಳಿಗ್ಗೆ ಆರಂಭವಾದ ಈ ಕವಾಯತಿನಲ್ಲಿ ಇರಾನ್‌ನ ಭೂಸೇನೆ, ನೌಕಾಪಡೆ ಹಾಗೂ ವಾಯುದಳ ಪಾಲ್ಗೊಂಡಿದೆ. ಯೋಧರು, ನೌಕೆಗಳು, ಶಸ್ತ್ರಸಜ್ಜಿತ ವಾಹನಗಳು, ಮಾನವ ರಹಿತ ಮತ್ತು ಮಾನವ ಸಹಿತ ಯುದ್ಧವಿಮಾನ, ರಕ್ಷಣೆ ಮತ್ತು ಆಕ್ರಮಣದ ಸಾಮರ್ಥ್ಯವುಳ್ಳ ಕ್ಷಿಪಣಿ ಮತ್ತು ರೇಡಾರ್ ವ್ಯವಸ್ಥೆಗಳಯ ಸೇನಾ ಕವಾಯತಿನಲ್ಲಿ ಪಾಲ್ಗೊಂಡಿವೆ.

ಓಮನ್ ಕೊಲ್ಲಿಯಲ್ಲಿರುವ ಹೋರ್ಮಝ್ ಜಲಸಂಧಿಯ ಪೂರ್ವಭಾಗದಲ್ಲಿ, ಹಿಂದು ಮಹಾಸಾಗರದ ಉತ್ತರದಲ್ಲಿರುವ 1 ಮಿಲಿಯನ್ ಚದರ ಕಿ.ಮೀ ಸಮುದ್ರವ್ಯಾಪ್ತಿಯಲ್ಲಿ ಈ ಕವಾಯತು ನಡೆಯುತ್ತಿದೆ ಎಂದು ಇರಾನ್ ಸೇನಾಪಡೆಯ ಮುಖ್ಯ ಕಮಾಂಡರ್ ಅಬ್ದುಲ್‌ರಹೀಂ ವೌಸವಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಈ ಪ್ರದೇಶದಲ್ಲಿ ನಮ್ಮ ಪಡೆಗಳ ಚಲನವಲನದ ಬಗ್ಗೆ ನಮ್ಮ ಶತ್ರು ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ , ಈ ಪ್ರದೇಶದಲ್ಲಿ ಶತ್ರುವಿನ ಚಲನವಲನದ ಬಗ್ಗೆ ಹೆಚ್ಚಿನ ನಿಗಾ ವಹಿಸಲು ನಿರ್ಧರಿಸಿದ್ದೇವೆ. ಹಲವು ದಿನ ನಡೆಯಲಿರುವ ಕವಾಯತಿನ ಆರಂಭದ ದಿನ ಸಮುದ್ರದಲ್ಲಿ ಶತ್ರುಗಳ ನೌಕೆಯನ್ನು ನಿಗ್ರಹಿಸುವ ಕಾರ್ಯಾಚರಣೆ ನಡೆಯಲಿದೆ. ಕ್ಷಿಪಣಿ ಮತ್ತು ರೇಡಾರ್ ವ್ಯವಸ್ಥೆಗಳು ದೇಶದ ಜಲವ್ಯಾಪ್ತಿಯ ರಕ್ಷಣೆಯ ಕಾರ್ಯದ ಅಣಕುಪ್ರದರ್ಶನ ನಡೆಸಲಿವೆ ಎಂದವರು ಹೇಳಿದ್ದಾರೆ.

ಸಮುದ್ರದಲ್ಲಿ ಸ್ಪೀಡ್‌ಬೋಟ್‌ಗಳು ಗಸ್ತು ತಿರುಗುತ್ತಿರುವುದು, ಹೆಲಿಕಾಪ್ಟರ್‌ಗಳಲ್ಲಿ ಯೋಧರ ಸಾಹಸ ಪ್ರದರ್ಶನ, ಕಡಲ ತಡಿಯಲ್ಲಿ ಕಮಾಂಡೋಗಳು ಪ್ಯಾರಾಶೂಟ್ ಮೂಲಕ ಹೆಲಿಕಾಪ್ಟರ್‌ನಿಂದ ಕೆಳಗಿಳಿಯುವುದು ಮುಂತಾದ ವೀಡಿಯೊಗಳನ್ನು ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ಪ್ರಸಾರ ಮಾಡಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News