ದಯವಿಟ್ಟು ನಂಬಿ, ದೇಶದ ವರ್ಚಸ್ಸು ಹೆಚ್ಚುತ್ತಿದೆ!

Update: 2021-11-08 07:13 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘‘ಪ್ರಧಾನಿ ಮೋದಿಯವರು ಈ ದೇಶದ ವರ್ಚಸ್ಸನ್ನು ವಿಶ್ವದಲ್ಲಿ ಹೆಚ್ಚಿಸುತ್ತಿದ್ದಾರೆ. ಆದರೆ ಇದಕ್ಕೆ ವಿರೋಧ ಪಕ್ಷಗಳು ಅಡ್ಡಿಯನ್ನುಂಟು ಮಾಡುತ್ತಿವೆ’’ ಎಂದು ಯಾವುದೇ ಪಾಪಪ್ರಜ್ಞೆಯಿಲ್ಲದೆ ಈ ದೇಶದ ವಿತ್ತ ಸಚಿವ ನಿರ್ಮಲಾ ಸೀತಾರಾಮ್ ಅವರು ಹೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮಧ್ಯ ಪ್ರದೇಶದ ಸಚಿವರೊಬ್ಬರು ‘‘ಆದಾಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಬೆಲೆ ಏರಿಕೆ ಕೂಡ ಅನಿರ್ವಾಯ’’ ಎಂಬ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದ್ದಾರೆ. ಒಂದು ದೇಶ ಅಭಿವೃದ್ಧಿಯತ್ತ ಮುನ್ನಡೆಯಬೇಕಾದರೆ ಮೊತ್ತ ಮೊದಲು ಆಳುವವರು ದೇಶದ ಸ್ಥಿತಿಗತಿಯನ್ನು ಒಪ್ಪಿಕೊಳ್ಳಬೇಕು. ವಾಸ್ತವವನ್ನು ಮುಚ್ಚಿ ಹಾಕಿ ‘ದೇಶದಲ್ಲಿ ಎಲ್ಲವೂ ಸರಿಯಾಗಿದೆ’ ಎಂದು ನೂರು ಬಾರಿ ಹೇಳಿದಾಕ್ಷಣ ದೇಶದಲ್ಲಿ ಯಾವ ಬದಲಾವಣೆಗಳೂ ಆಗುವುದಿಲ್ಲ. ನೋಟು ನಿಷೇಧವಾಗಿ 5 ವರ್ಷವಾಯಿತು. ನೋಟು ನಿಷೇಧ ಆರ್ಥಿಕತೆಯ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಉಂಟು ಮಾಡಿದೆ? ನೋಟು ನಿಷೇಧದಿಂದಾಗಿ ಕಪ್ಪು ಹಣ ದೇಶದ ಖಜಾನೆ ಸೇರಿತೇ? ನೋಟು ನಿಷೇಧದಿಂದ ಈ ದೇಶಕ್ಕೆ ಆದ ಲಾಭವೇನು? ಎನ್ನುವ ವಿವರಗಳನ್ನು ಸರಕಾರ ಈವರೆಗೆ ಬಹಿರಂಗ ಪಡಿಸಿಲ್ಲ. ಇದೇ ಸಂದರ್ಭದಲ್ಲಿ ನೋಟು ನಿಷೇಧದ ಬಳಿಕ ಸಣ್ಣ ಉದ್ದಿಮೆಗಳು ಸರ್ವನಾಶವಾದ ಅಂಕಿಅಂಶಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇವೆ. ನಿರುದ್ಯೋಗ ಹೆಚ್ಚಳವಾಗಿದೆ. ಗಾಯಕ್ಕೆ ಬರೆ ಹಾಕಿದಂತೆ, ಕೊರೋನ ಲಾಕ್‌ಡೌನ್ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು.

ಲಾಕ್‌ಡೌನ್‌ನಿಂದಾಗಿ ದೇಶ ಆರ್ಥಿಕವಾಗಿ ಮಕಾಡೆ ಮಲಗಿತು. ಗಂಗಾನದಿಯಲ್ಲಿ ಮೃತದೇಹಗಳು ತೇಲಿದವು. ಆಕ್ಸಿಜನ್ ಇಲ್ಲದೆ ಸಾಲು ಸಾಲು ಸಾವುಗಳು ಸಂಭವಿಸಿದವು. ವಲಸೆ ಕಾರ್ಮಿಕರ ಸಾವು ನೋವುಗಳಿಗೆ ವಿಶ್ವ ಮರುಗಿತು. ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ಬಳಿಕವಷ್ಟೇ ಕೇಂದ್ರ ಸರಕಾರ ಉಚಿತ ಲಸಿಕೆಯನ್ನು ಒದಗಿಸಿತು. ಆದರೆ ಲಸಿಕೀಕರಣದಲ್ಲಿ ಗುರಿ ತಲುಪುವ ದಾರಿ ಬಹುದೂರವಿದೆ. ಪಿಎಂ ಕೇರ್ಸ್‌ ನಿಧಿಯನ್ನು ಸ್ಥಾಪಿಸಿ ಜನರಿಂದ ಹಣ ಸಂಗ್ರಹಿಸಿ, ಇದೀಗ ಅದಕ್ಕೂ ಸರಕಾರಕ್ಕೂ ಸಂಬಂಧವೇ ಇಲ್ಲ ಎಂದು ಹೇಳುತ್ತಿದೆ. ಉಚಿತ ಲಸಿಕೆಗಳಿಗಾಗಿ ಸಾಲ ಮಾಡುವುದಕ್ಕೆ ಮುಂದಾಗಿದೆ. ಹಾಗಾದರೆ, ಈ ದೇಶದ ವರ್ಚಸ್ಸನ್ನು ಮೋದಿಯವರು ಹೇಗೆ ವಿಶ್ವದಲ್ಲಿ ಹೆಚ್ಚಿಸುತ್ತಿದ್ದಾರೆ? ಎನ್ನುವುದನ್ನು ವಿತ್ತ ಸಚಿವೆಯೇ ವಿವರಿಸಬೇಕಾಗುತ್ತದೆ. ದೇಶದಲ್ಲಿ ರೈತರ ಆತ್ಮಹತ್ಯೆಗಳು ಸುದ್ದಿಯಾಗುತ್ತಿದ್ದವು. ಆದರೆ 2020ರಲ್ಲಿ ರೈತರಿ ಗಿಂತ ಹೆಚ್ಚು ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ ಹೇಳುತ್ತಿದೆ.

2020ರಲ್ಲಿ 11,716 ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಉದ್ಯಮಿಗಳಲ್ಲಿ ಹೆಚ್ಚಿನವರು ಪುರುಷರು. ಅವರಲ್ಲೂ ಶೇ. 36 ಬೀದಿ ಬದಿ ಮಾರಾಟಗಾರರು. ಶೇ.37 ವ್ಯಾಪಾರಿಗಳು. 2020ರಲ್ಲಿ ಕರ್ನಾಟಕದಲ್ಲೇ 1,772 ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಸರಕಾರಿ ಅಂಕಿಅಂಶಗಳು. ತೀರಾ ಸಣ್ಣ ಮಟ್ಟದ ವ್ಯಾಪಾರಿಗಳ ಆತ್ಮಹತ್ಯೆಯ ಅಂಕಿಸಂಕಿಗಳು ಇದರಲ್ಲಿ ಉಲ್ಲೇಖವಾಗಿಲ್ಲ. ಇವೆಲ್ಲ ನರೇಂದ್ರ ಮೋದಿಯ ಅಥವಾ ಭಾರತದ ವರ್ಚಸ್ಸನ್ನು ಯಾವ ರೀತಿಯಲ್ಲಿ ಹೆಚ್ಚಿಸುತ್ತವೆ? ಉದ್ಯಮಿಗಳ ಆತ್ಮಹತ್ಯೆಯ ಹಿಂದೆ, ಆರ್ಥಿಕ ನಷ್ಟಗಳು ಬಹುಮುಖ್ಯವಾಗಿರುತ್ತದೆ. ಇಂತಹ ಆತ್ಮಹತ್ಯೆಯಿಂದ ಉದ್ಯಮಿಯೊಬ್ಬನೇ ಸಂಕಟಕ್ಕೀಡಾಗುವುದಿಲ್ಲ. ಅವನ ಸಂಸ್ಥೆಯಲ್ಲಿರುವ ಉದ್ಯೋಗಿಗಳ ಮೇಲೂ ಇದು ದುಷ್ಪರಿಣಾಮವನ್ನು ಬೀರುತ್ತವೆ. ಲಾಕ್‌ಡೌನ್ ದಿನಗಳ ಬಳಿಕ ಉದ್ಯಮ, ಸಿನೆಮಾ, ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ಆತ್ಮಹತ್ಯೆ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಆತ್ಮಹತ್ಯೆಯಲ್ಲಿ ಯುವಕರೇ ಮುಂಚೂಣಿಯಲ್ಲಿರುವುದು ಆತಂಕಕಾರಿ. ವಿತ್ತ ಸಚಿವರು ಇವೆಲ್ಲವನ್ನೂ ಸರಕಾರದ ಹೆಗ್ಗಳಿಕೆಯಾಗಿ ಗುರುತಿಸಿದರೆ, ಪಾತಾಳ ತಲುಪಿರುವ ಭಾರತದ ಅಭಿವೃದ್ಧಿಯನ್ನು ಮೇಲೆತ್ತುವವರು ಯಾರು?

ಎಲ್ಲವನ್ನು ಕೊರೋನದ ತಲೆಗೆ ಕಟ್ಟಿ ಪಾರಾಗುವ ಯತ್ನದಲ್ಲಿದ್ದಾರೆ ವಿತ್ತ ಸಚಿವರು. ಆದರೆ ಈ ದೇಶದ ಆರ್ಥಿಕತೆ ದುರ್ಬಲಗೊಂಡಿದ್ದು ನೋಟು ನಿಷೇಧದ ಬಳಿಕ. ಯಾವುದೇ ಪೂರ್ವಸಿದ್ಧತೆಯಿಲ್ಲದ ಈ ನೋಟು ನಿಷೇಧ ಕಪ್ಪು ಹಣವನ್ನು ಹೊರಗೆಳೆಯುವ ಬದಲು, ಕಪ್ಪನ್ನು ಬಿಳಿ ಮಾಡುವುದಕ್ಕೆ ಸಹಕರಿಸಿತು. ಇದರಿಂದ ಖಜಾನೆಗೆ ಭಾರೀ ನಷ್ಟವುಂಟಾಯಿತು. ನಗರಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳು ನಿಂತು ಬಿಟ್ಟವು. ಹಳ್ಳಿಯಿಂದ ನಗರಕ್ಕೆ ವಲಸೆ ಬಂದವರ ಮೇಲೆ ಇದು ತೀವ್ರ ಪರಿಣಾಮವನ್ನುಂಟು ಮಾಡಿತು. ನೋಟು ನಿಷೇಧ ನಡೆಯದೇ ಇದ್ದಿದ್ದರೆ ಭಾರತದ ಆರ್ಥಿಕತೆ ಸುಭದ್ರವಾಗಿರುತ್ತಿತ್ತು ಮಾತ್ರವಲ್ಲ, ಕೊರೋನವನ್ನು ಎದುರಿಸುವಲ್ಲಿ ಅದು ಶಕ್ತವಾಗುತ್ತಿತ್ತು. ಈ ದೇಶಕ್ಕೆ ಕೊರೋನವನ್ನು ಆಹ್ವಾನಿಸಿದವರೇ ಸ್ವತಃ ಮೋದಿ.

ವಿಶ್ವ ಕೊರೋನದಿಂದ ತತ್ತರಿಸುವ ಸಂದರ್ಭದಲ್ಲಿ ಮೋದಿ ನೇತೃತ್ವದಲ್ಲೇ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ನಡೆಯಿತು. ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಆಗಲೇ ನಿರ್ಬಂಧ ಹೇರಿದ್ದಿದ್ದರೆ ಕೊರೋನ ಈ ಮಟ್ಟಿಗೆ ಹಬ್ಬುತ್ತಿರಲಿಲ್ಲ. ಇದಾದ ಬಳಿಕ ಬಿಜೆಪಿ ನಾಯಕರ ಪ್ರಾಯೋಜಕತ್ವದಲ್ಲೇ ದಿಲ್ಲಿ ಗಲಭೆ ನಡೆಯಿತು. ಕೋಟೆ ಸೂರೆ ಹೋದ ಬಳಿಕ ದಿಡ್ಡಿ ಬಾಗಿಲು ಹಾಕಿದಂತೆ, ದೇಶದಲ್ಲಿ ಕೊರೋನ ಹರಡಿದ ಬಳಿಕ ವಿಮಾನ ನಿಲ್ದಾಣಗಳಲ್ಲಿ ನಿರ್ಬಂಧ ಹೇರಲಾಯಿತು. ವಲಸೆ ಕಾರ್ಮಿಕರಿಗೆ ಯಾವುದೇ ವ್ಯವಸ್ಥೆಯನ್ನು ಮಾಡದೆ ಲಾಕ್‌ಡೌನ್ ಹೇರಲಾಯಿತು. ಪರಿಣಾಮವಾಗಿ ಲಾಕ್‌ಡೌನ್‌ನ ಉದ್ದೇಶ ವಿಫಲವಾಯಿತು. ಒಂದೆಡೆ ಜನರು ಮನೆಯೊಳಗೆ ಕಿಟಕಿ, ಬಾಗಿಲು ಹಾಕಿ ಭದ್ರವಾಗಿ ಕೂತಿದ್ದರೆ, ಇತ್ತ ವಲಸೆ ಕಾರ್ಮಿಕರು ದಾರಿ ತಿಳಿಯದೆ ಸಾಲು ಸಾಲಾಗಿ ರಸ್ತೆಯ ಮೇಲೆ ನೆರೆದಿದ್ದರು. ವಲಸೆ ಕಾರ್ಮಿಕರ ಈ ಸಾವು ನೋವುಗಳು ಈ ದೇಶಕ್ಕೆ ಯಾವ ರೀತಿಯಲ್ಲಿ ವರ್ಚಸ್ಸನ್ನು ತಂದುಕೊಟ್ಟಿವೆ ಎನ್ನುವುದನ್ನು ವಿತ್ತ ಸಚಿವರೇ ವಿವರಿಸಬೇಕಾಗಿದೆ. ಆಕ್ಸಿಜನ್ ಸಿಲಿಂಡರ್ ಕೊರತೆ ಎದುರಾದಾಗಲೂ ಸರಕಾರ ಕೈ ಚೆಲ್ಲಿ ಕೂತಿತ್ತು. ಸುಪ್ರೀಂಕೋರ್ಟ್ ಚಾಟಿಯೇಟಿಗೆ ಅದು ಎಚ್ಚೆತ್ತುಕೊಂಡಿತು. ಕೊರೋನ ನಿರ್ವಹಣೆಗೆ ಸಂಬಂಧಿಸಿ ಪದೇ ಪದೇ ಸುಪ್ರೀಂಕೋರ್ಟ್‌ನಿಂದ ಅವಮಾನಿತನಾಗುವುದು ಪ್ರಧಾನಿ ಸ್ಥಾನಕ್ಕೆ ದೊರಕಿದ ಹೆಗ್ಗಳಿಕೆಯೆಂದು ವಿತ್ತ ಸಚಿವರು ಭಾವಿಸಿದ್ದಾರೆಯೇ?

ತಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿ ಹಾಕುವುದಕ್ಕೆ ಕೋಟ್ಯಂತರ ವೆಚ್ಚದಲ್ಲಿ ಅನುತ್ಪಾದಕ ಪ್ರತಿಮೆಗಳನ್ನು ಸರಕಾರ ನಿರ್ಮಿಸುತ್ತಿದೆ. ತ್ರಿಪುರ, ಅಸ್ಸಾಂ, ಉತ್ತರ ಪ್ರದೇಶದಲ್ಲಿ ಕೋಮುಗಲಭೆಗಳನ್ನು ಸೃಷ್ಟಿಸುತ್ತಿದೆ. ಕಳೆದ 10 ತಿಂಗಳಿಂದ ರೈತರು ಸರಕಾರದ ನೀತಿಗಳನ್ನು ವಿರೋಧಿಸಿ ರಸ್ತೆಯಲ್ಲಿದ್ದಾರೆ. ಇವೆಲ್ಲ ಈ ದೇಶದ ವರ್ಚಸ್ಸನ್ನು ಹೆಚ್ಚಿಸುವ ಸಂಗತಿಗಳೇ? ಪೆಟ್ರೋಲ್, ಗ್ಯಾಸ್ ಸಿಲಿಂಡರ್ ಬೆಲೆಯೇರಿಕೆ ಜನ ಸಾಮಾನ್ಯರ ಬದುಕನ್ನು ಕಂಗೆಡಿಸುತ್ತಿದೆ. ಲಾಕ್‌ಡೌನ್‌ನಿಂದಾಗಿ ಉದ್ಯೋಗ, ಆದಾಯಗಳಿಲ್ಲದೆ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಇನ್ನೊಂದೆಡೆ, ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನ ತಲುಪಿದೆ. ಇದರ ಬೆನ್ನಿಗೇ ರಫೇಲ್ ಹಗರಣ, ಪೆಗಾಸಸ್‌ನಂತಹ ಹಗರಣಗಳಿಂದ ಸರಕಾರ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಅನುಭವಿಸುತ್ತಿದೆ. ಪ್ರಧಾನಿ ಮೋದಿಯವರು ಪತ್ರಿಕಾಗೋಷ್ಠಿಗಳಿಗೆ ಅಂಜುತ್ತಾ ಓಡಾಡುತ್ತಿದ್ದಾರೆ. ಮಾಧ್ಯಮಗಳನ್ನು ಕೊಂಡುಕೊಂಡು, ತನ್ನ ಭೋಪರಾಕ್ ಕರಪತ್ರವನ್ನಾಗಿಸುತ್ತಿದ್ದಾರೆ. ತನ್ನ ವಿರುದ್ಧ ಬರೆದ ಮಾಧ್ಯಮಗಳನ್ನು ಬಹಿರಂಗವಾಗಿಯೇ ದಮನಿಸುತ್ತಿದ್ದಾರೆ. ಅಲ್ಪಸಂಖ್ಯಾತರು, ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಬಡವರು ಇನ್ನಷ್ಟು ಬಡವರಾಗುತ್ತಿದಂತೆಯೇ ಅನಿಲ್ ಅಂಬಾನಿ, ಅದಾನಿಗಳು ವಿಶ್ವದ ನಂ.1 ಶ್ರೀಮಂತರಾಗಿ ಕಂಗೊಳಿಸುತ್ತಿದ್ದಾರೆ. ಭಾರತ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಹಲವು ದಶಕಗಳು ಹಿಂದಕ್ಕೆ ಚಲಿಸಿವೆ. ಇವೆಲ್ಲವೂ ಭಾರತದ ವರ್ಚಸ್ಸನ್ನು ಹೆಚ್ಚಿಸಿದೆ ಎಂದು ನಂಬಿರುವ ಅರ್ಥ ಸಚಿವರು, ಈ ದೇಶದವನ್ನು ಹೇಗೆ ತಾನೇ ಒಳಿತಿನೆಡೆಗೆ ಮುನ್ನಡೆಸಬಲ್ಲರು?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News