ಉತ್ತರಪ್ರದೇಶ: ಪೊಲೀಸ್ ಠಾಣೆಯಲ್ಲಿ ಯುವಕನ ಅನುಮಾನಾಸ್ಪದ ಸಾವು; ಐವರು ಪೊಲೀಸರ ಅಮಾನತು

Update: 2021-11-10 06:34 GMT

ಇಟಾಹ್(ಉತ್ತರ ಪ್ರದೇಶ): ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯಲ್ಲಿ 22 ವರ್ಷದ ಯುವಕ ಮಂಗಳವಾರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನಂತರ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು NDTV ವರದಿ ಮಾಡಿದೆ.

ಮಹಿಳೆಯನ್ನು ಅಪಹರಿಸಿ ಬಲವಂತದ ಮದುವೆಯಾದ ಘಟನೆಗೆ ಸಂಬಂಧಿಸಿ ಕಳೆದ ವಾರ ದಾಖಲಾಗಿದ್ದ ಪ್ರಕರಣದಲ್ಲಿ ಮಂಗಳವಾರ ಬೆಳಗ್ಗೆ ಅಲ್ತಾಫ್ ಎಂಬ ವ್ಯಕ್ತಿಯನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು.

ಪೊಲೀಸ್ ಠಾಣೆಯಲ್ಲಿ ಯುವಕ ಶೌಚಾಲಯಕ್ಕೆ ಹೋಗುವುದಾಗಿ ಹೇಳಿದ. ಕೆಲವು ನಿಮಿಷಗಳ ನಂತರ ಆತ ಹಿಂತಿರುಗದಿದ್ದಾಗ  ಪೊಲೀಸರು ಒಳಗೆ ಹೋಗಿ ನೋಡಿದಾಗ ಆತ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದ. ತಕ್ಷಣವೇ  ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಆತ 5 -10 ನಿಮಿಷಗಳಲ್ಲಿ ಮೃತಪಟ್ಟ ಎಂದು ಇಟಾಹ್‌ನ ಪೊಲೀಸ್ ಮುಖ್ಯಸ್ಥ ರೋಹನ್ ಪ್ರಮೋದ್ ಬೋತ್ರೆ ಅವರು ಹೇಳಿದರು.

ಪ್ರಕರಣದಲ್ಲಿ ಅಮಾನತುಗೊಂಡಿರುವ ಐವರು ಪೊಲೀಸರ  ಮೇಲೆ ನಿರ್ಲಕ್ಷ್ಯದ ಆರೋಪ ಹೊರಿಸಲಾಗಿದೆ  ಎಂದು ಹೇಳಿಕೆಯೊಂದು ತಿಳಿಸಿದೆ.

"ನಾನು ನನ್ನ ಮಗುವನ್ನು ಪೊಲೀಸರಿಗೆ ಒಪ್ಪಿಸಿದ್ದೇನೆ. ಆದರೆ ಅವರು ನೇಣು ಹಾಕುವಲ್ಲಿ ಭಾಗಿಯಾಗಿರುವ ಶಂಕೆ ಇದೆ’’ ಎಂದು ಯುವಕನ ತಂದೆ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News