ಛಾತ್ ಹಬ್ಬದ ಬಳಿಕ ದಿಲ್ಲಿಯ ಯಮುನಾ ನದಿ ಮಾಲಿನ್ಯ ನೊರೆ ನಿವಾರಿಸಲು ನೀರು ಸಿಂಪಡಣೆ

Update: 2021-11-10 18:22 GMT

ಹೊಸದಿಲ್ಲಿ, ನ. 10: ಕಾಳಿಂದಿ ಕುಂಜ್‌ನಲ್ಲಿ ತುಂಬಿದ ನೊರೆಯನ್ನು ಚದುರಿಸಲು ಯಮುನಾ ನದಿಯಲ್ಲಿ ದಿಲ್ಲಿ ಸರಕಾರ 15 ದೋಣಿಗಳನ್ನು ನಿಯೋಜಿಸಿದ ಒಂದು ದಿನದ ಬಳಿಕ ನಾಗರಿಕ ಸಂಸ್ಥೆಗಳು ಬುಧವಾರ ಬಿದಿರಿನ ಬಲೆಗಳನ್ನು ಅಳವಡಿಸಿದೆ ಹಾಗೂ ನೊರೆ ಚದುರಿಸಲು ನೀರು ಸಿಂಪಡಿಸಿದೆ.

ದಿಲ್ಲಿಯಲ್ಲಿರುವ ಕೊಳಚೆ ನೀರು ಸಂಸ್ಕರಣಾ ಘಟಕವನ್ನು ನೂತನ ಗುಣಮಟ್ಟಕ್ಕೆ ಅನುಗುಣವಾಗಿ ಮೇಲ್ದರ್ಜೆಗೇರಿಸುವ ವರೆಗೆ ನೊರೆಯ ಸಮಸ್ಯೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಇತರ ಯಾವುದೇ ಅಲ್ಪಾವಧಿ ಕ್ರಮಗಳು ಕಾರ್ಯ ನಿರ್ವಹಿಸದೇ ಇರುವುದರಿಂದ ನೊರೆ ಚದುರಿಸಲು ನೀರು ಸಿಂಪಡಿಸಲು ನಿರ್ದೇಶನ ನೀಡಲಾಗಿದೆ ಎಂದು ದಿಲ್ಲಿ ಜಲ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. ‘‘ನೀರು ಸಿಂಪಡನೆ ನೊರೆಯನ್ನು ಛಿದ್ರಗೊಳಿಸಲಿದೆ. ನೊರೆಯಲ್ಲಿ ಸಿಲುಕಿರುವ ಗಾಳಿ ಗುಳ್ಳೆಗಳು ಮಾಯವಾಗಲಿವೆ. ಇದರಿಂದ ನೊರೆ ಚದುರಲಿದೆ’’ ಎಂದು ಅವರು ಹೇಳಿದ್ದಾರೆ.

ನೊರೆ ಸೆರೆಹಿಡಿಯಲು ಕಾಳಿಂದಿ ಕುಂಜ್‌ನಲ್ಲಿ ಬಿದಿರಿನ ಬಲೆಯನ್ನು ಉದ್ದಕ್ಕೂ ಅಳವಡಿಸಲಾಗಿದೆ ಎಂದು ನೀರಾವರಿ ಹಾಗೂ ಆಹಾರ ನಿಯಂತ್ರಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಛಾತ್ ಹಬ್ಬ ನಡೆಯುತ್ತಿರುವುದರಿಂದ ದಿಲ್ಲಿಯ ಯಮುನಾ ನದಿಯ ಮಾಲಿನ್ಯ ಮತ್ತೊಮ್ಮೆ ಗಮನ ಕೇಂದ್ರೀಕರಿಸುವಂತೆ ಮಾಡಿದೆ. ಬುಧವಾರ ಬೆಳಗ್ಗೆ ಅಸಂಖ್ಯ ಭಕ್ತರು ಕಾಳಿಂದಿ ಕುಂಜ್‌ನ ಯಮುನಾ ಘಾಟ್‌ನಲ್ಲಿ ಸೇರಿದ್ದರು. ಆದರೆ, ಅನಂತರ ಪೊಲೀಸರು ಅವರನ್ನು ಚದುರಿಸಿದ್ದರು. ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಯಮುನಾ ನದಿಯ ದಂಡೆಯಲ್ಲಿ ಛಾತ್ ಪೂಜೆ ನಡೆಸುವುದಕ್ಕೆ ಈ ಹಿಂದೆ ದಿಲ್ಲಿ ವಿಪತ್ತು ನಿವಹರ್ಣಾ ಪ್ರಾಧಿಕಾರ ನಿಷೇಧ ಹೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News