ಕಾಸಗಂಜ್ ಕಸ್ಟಡಿ ಸಾವು: "ಉ.ಪ್ರದೇಶದಲ್ಲಿ ಮಾನವ ಹಕ್ಕುಗಳು ಇನ್ನೂ ಅಸ್ತಿತ್ವದಲ್ಲಿವೆಯೇ?" ಎಂದು ಪ್ರಶ್ನಿಸಿದ ರಾಹುಲ್‌

Update: 2021-11-11 15:31 GMT

ಹೊಸದಿಲ್ಲಿ, ನ.11: ಕಾಸಗಂಜ್ನಲ್ಲಿ ಯುವಕನೋರ್ವ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಕುರಿತು ಪ್ರತಿಪಕ್ಷವು ಬಿಜೆಪಿ ಸರಕಾರದ ವಿರುದ್ಧ ದಾಳಿ ನಡೆಸಿದೆ.

ಉ.ಪ್ರದೇಶದಲ್ಲಿ ಮಾನವ ಹಕ್ಕುಗಳು ಇನ್ನೂ ಅಸ್ತಿತ್ವದಲ್ಲಿವೆಯೇ ಎಂದು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ.

ರಕ್ಷಕರೇ ಭಕ್ಷಕರಾಗಿದ್ದಾರೆ ಎನ್ನುವುದನ್ನು ಕಾಸಗಂಜ್ನಲ್ಲಿ ಅಲ್ತಾಫ್,ಆಗ್ರಾದಲ್ಲಿ ಅರುಣ ವಾಲ್ಮೀಕಿ ಮತ್ತು ಸುಲ್ತಾನ್ಪುರದಲ್ಲಿ ರಾಜೇಶ ಕೋರಿ ಅವರ ಲಾಕಪ್ ಸಾವುಗಳು ಸ್ಪಷ್ಟಪಡಿಸಿವೆ. ಪೊಲೀಸ್ ಕಸ್ಟಡಿ ಸಾವುಗಳಲ್ಲಿ ಉ.ಪ್ರದೇಶವು ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಬಿಜೆಪಿ ಆಡಳಿತದಡಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ಅಲ್ಲಿ ಯಾರೂ ಸುರಕ್ಷಿತರಲ್ಲ ಎಂದು ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. 

ಕಾಸಗಂಜ್ ಲಾಕಪ್ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ಅಗ್ರಹಿಸಿರುವ ಉ.ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಎಸ್.ಪಿ.ಅಧ್ಯಕ್ಷ ಅಖಿಲೇಶ್ ಯಾದವ್ ಅವರು,‌ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆಸಲಾಗಿದ್ದ ಯುವಕನ ಸಾವು ಅತ್ಯಂತ ಶಂಕಾಸ್ಪದವಾಗಿದೆ. ಕರ್ತವ್ಯಲೋಪದ ಹೆಸರಿನಲ್ಲಿ ಕೆಲವು ಪೊಲೀಸರ ಅಮಾನತು ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಬಿಜೆಪಿ ಆಡಳಿತದಲ್ಲಿ ಪೊಲೀಸರ ಬಗ್ಗೆ ವಿಶ್ವಾಸವನ್ನು ಮೂಡಿಸಲು ನ್ಯಾಯಾಂಗ ತನಿಖೆಯು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಮಾಜಿ ಎಂಎಲ್ಸಿ ಅಸೀಮ್ ಯಾದವ ನೇತೃತ್ವದ ನಿಯೋಗವೊಂದು ಶುಕ್ರವಾರ ಕಾಸಗಂಜ್ಗೆ ತೆರಳಿ ಮೃತ ಅಲ್ತಾಫ್ ನ ಕುಟುಂಬದ ಸದಸ್ಯರನ್ನು ಭೇಟಿಯಾಗಲಿದೆ ಮತ್ತು ಪಕ್ಷದ ನಾಯಕತ್ವಕ್ಕೆ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಎಸ್ಪಿ ಬುಧವಾರ ಪ್ರಕಟಿಸಿತ್ತು.
ಅಪ್ರಾಪ್ತವಯಸ್ಕಳೋರ್ವಳ ನಾಪತ್ತೆಗೆ ಸಂಬಂಧಿಸಿದಂತೆ ಕಾಸಗಂಜ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ಅಲ್ತಾಫ್ ಮಂಗಳವಾರ ಠಾಣೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಘಟನೆಗೆ ಸಂಬಂಧಿಸಿದಂತೆ ಠಾಣಾಧಿಕಾರಿ ಸೇರಿದಂತೆ ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಅಲ್ತಾಫ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News