ಏಶ್ಯಾ ಪೆಸಿಫಿಕ್ ವಲಯದಲ್ಲಿ ಶೀತಲಯುದ್ಧದ ಸ್ಥಿತಿ ಮರುಕಳಿಸಲು ಅವಕಾಶವಿಲ್ಲ: ಚೀನಾ ಎಚ್ಚರಿಕೆ

Update: 2021-11-11 18:24 GMT

ಬೀಜಿಂಗ್, ನ.11: ಏಶ್ಯಾ ಪೆಸಿಫಿಕ್ ವಲಯದಲ್ಲಿ ಶೀತಲಯುದ್ಧದ ಸಂದರ್ಭದ ಸ್ಥಿತಿ ಮರಳುತ್ತಿದೆ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಎಚ್ಚರಿಕೆ ನೀಡಿದ್ದಾರೆ. ಏಶ್ಯಾ ಪೆಸಿಫಿಕ್ ಆರ್ಥಿಕ ಸಹಕಾರ ಸಂಘಟನೆ(ಅಪೆಕ್) ಶೃಂಗಸಭೆಯ ನೇಪಥ್ಯದಲ್ಲಿ ಬುಧವಾರ ವೀಡಿಯೊ ಸಂದೇಶ ನೀಡಿರುವ ಜಿಂಪಿಂಗ್, ಸೈದ್ಧಾಂತಿಕ ಗೆರೆ ಎಳೆಯುವ ಅಥವಾ ಭೌಗೋಳಿಕ ರಾಜಕೀಯದ ಆಧಾರದಲ್ಲಿ ಸಣ್ಣ ಗುಂಪುಗಳನ್ನು ರೂಪಿಸುವ ಪ್ರಯತ್ನಗಳಿಗೆ ಸೋಲಾಗಲಿದೆ ಎಂದಿದ್ದಾರೆ. 

ಏಶ್ಯಾ ಪೆಸಿಫಿಕ್ ವಲಯದಲ್ಲಿ ಶೀತಲಯುದ್ಧದ ಅವಧಿಯ ಸಂಷರ್ಘದ ಅಥವಾ ವಿಭಜನೆಯ ಪ್ರಕ್ರಿಯೆ ಮರುಕಳಿಸಬಾರದು ಮತ್ತು ಮರುಕಳಿಸಲು ಸಾಧ್ಯವಿಲ್ಲ ಎಂದವರು ಎಚ್ಚರಿಸಿದ್ದಾರೆ. ಭಾರತ, ಜಪಾನ್, ಆಸ್ಟ್ರೇಲಿಯಾ ಸೇರಿದ ಕ್ವಾಡ್ ಸಂಘಟನೆ ರಚಿಸುವ ಮೂಲಕ ಏಶ್ಯಾ ಪೆಸಿಫಿಕ್ ವಲಯದಲ್ಲಿ ಚೀನಾದ ಆರ್ಥಿಕ ಮತ್ತು ಸೇನಾ ಪ್ರಭಾವವನ್ನು ಕಡಿಮೆಗೊಳಿಸುವ ಅಮೆರಿಕದ ಪ್ರಯತ್ನಗಳನ್ನು ಪರೋಕ್ಷವಾಗಿ ಉಲ್ಲೇಖಿಸಿ ಜಿಂಪಿಂಗ್ ಈ ಸಂದೇಶ ನೀಡಿದ್ದಾರೆ. ಬಳಿಕ ಅಪೆಕ್ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಜಿಂಪಿಂಗ್, ಕೋವಿಡ್ ಸೋಂಕಿನ ನೆರಳಿನಿಂದ ಹೊರಬಂದು ಮತ್ತೆ ಆರ್ಥಿಕ ಚಟುವಟಿಕೆಗೆ ವೇಗ ನೀಡುವ ಅಗತ್ಯವಿದೆ. 

ಕೊರೋನ ಸೋಂಕಿನ ಲಸಿಕೆಗಳ ನಡುವಿನ ಅಂತರವನ್ನು ಕಡಿಮೆಗೊಳಿಸಲು ದೇಶಗಳು ಕ್ರಮ ಕೈಗೊಳ್ಳಬೇಕು ಎಂದರು. ಲಸಿಕೆಗಳು ಜಾಗತಿಕ ಜನರ ಆರೋಗ್ಯದ ರಕ್ಷಣೆಯ ನಿಟ್ಟಿನಲ್ಲಿ ಉತ್ತಮ ವ್ಯವಸ್ಥೆಯಾಗಿರುವುದರಿಂದ ಲಸಿಕೆಗಳ ಸಮಾನ ಮತ್ತು ನ್ಯಾಯಯುತ ಹಂಚಿಕೆಯಾಗಬೇಕಿದೆ ಎಂದು ಜಿಂಪಿಂಗ್ ಆಗ್ರಹಿಸಿದ್ದಾರೆ. ಆನ್ಲೈನ್ ವೇದಿಕೆಯ ಮೂಲಕ ನಡೆಯುತ್ತಿರುವ ಅಪೆಕ್ ಶೃಂಗಸಭೆಗೆ ನ್ಯೂಝಿಲ್ಯಾಂಡ್ ಆತಿಥೇಯತ್ವ ವಹಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News