ಹವಾಮಾನ ಬದಲಾವಣೆ ದುರಂತ ತಡೆಯುವ ನಿಟ್ಟಿನಲ್ಲಿ ಶೀಘ್ರ ನಿರ್ಧಾರ ಅಗತ್ಯವಿದೆ: ವಿಶ್ವಸಂಸ್ಥೆ ಆಗ್ರಹ

Update: 2021-11-12 15:47 GMT

ಗ್ಲಾಸ್ಗೋ, ನ.12: ಹವಾಮಾನ ಬದಲಾವಣೆ ಸಮಸ್ಯೆಗೆ ಶೀಘ್ರ ಪರಿಹಾರ ರೂಪಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ನೇತೃತ್ವದಲ್ಲಿ ಬ್ರಿಟನ್ ನ ಗ್ಲಾಸ್ಗೋದಲ್ಲಿ ಹಮ್ಮಿಕೊಳ್ಳಲಾದ ಹವಾಮಾನ ಬದಲಾವಣೆ ಸಮಾವೇಶದಲ್ಲಿ 2 ವಾರದ ವ್ಯಾಪಕ ಚರ್ಚೆಯ ಬಳಿಕವೂ ಕೆಲವು ಮಹತ್ವದ ಸಮಸ್ಯೆಗಳಿಗೆ ಪರಿಹಾರ ರೂಪಿಸುವಲ್ಲಿ ವಿಫಲವಾಗಿರುವಂತೆಯೇ, ಹವಾಮಾನ ದುರಂತವನ್ನು ತಡೆಯುವ ನಿಟ್ಟಿನಲ್ಲಿ ತ್ವರಿತವಾಗಿ ಸೂಕ್ತ ಕಾರ್ಯಕ್ರಮ ರೂಪಿಸುವಂತೆ ವಿಶ್ವಮುಖಂಡರನ್ನು ವಿಶ್ವಸಂಸ್ಥೆ ಆಗ್ರಹಿಸಿದೆ. 

‘ಮಾಡಬೇಕಾದ ಕಾರ್ಯ ಇನ್ನೂ ಬಹಳಷ್ಟಿದೆ. ಇಡೀ ಜಗತ್ತೇ ನಮ್ಮನ್ನು ನೋಡುತ್ತಿದೆ’ ಎಂದು ಸಿಒಪಿ26 ಸಮಾವೇಶದ ಅಧ್ಯಕ್ಷತೆ ವಹಿಸಿರುವ ಬ್ರಿಟನ್ ಸಚಿವ ಅಲೋಕ್ ಶರ್ಮ ಹೇಳಿದ್ದಾರೆ. ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆ ಹಲವು ಮಹತ್ವದ ವಿಷಯಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಮಾಡಬೇಕಿರುವುದು ಇನ್ನೂ ಬೆಟ್ಟದಷ್ಟಿದೆ ಎಂದವರು ಗುರುವಾರ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಶಿಯಸ್ಗೆ ಮಿತಿಗೊಳಿಸುವ 2015ರ ಪ್ಯಾರಿಸ್ ಒಪ್ಪಂದದ ಗುರಿಯನ್ನು ತಲುಪುವ, ಹವಾಮಾನ ಬದಲಾವಣೆಯ ಕೆಟ್ಟ ಪರಿಣಾಮಗಳನ್ನು ನಿವಾರಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸುವ ಮುಖ್ಯ ಉದ್ದೇಶವನ್ನು ಸಿಒಪಿ26 ಸಮಾವೇಶ ಹೊಂದಿತ್ತು. ಆದರೆ ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಹಂತಹಂತವಾಗಿ ಕಡಿಮೆಗೊಳಿಸುವ ನಿರ್ಧಾರವನ್ನು ಹಲವು ರಾಷ್ಟ್ರಗಳು ಪ್ರಕಟಿಸಿದ್ದರಿಂದ , ಸಮುದ್ರದ ಮಟ್ಟ ಏರಿಕೆ, ಪ್ರವಾಹ, ಬರಗಾಲ ಮುಂತಾದ ಜಾಗತಿಕ ತಾಪಮಾನಕ್ಕೆ ಸಂಬಂಧಿಸಿದ ಸಮಸ್ಯೆ ಬಿಗಡಾಯಿಸುವ ಅಪಾಯವಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. 

ಶುಕ್ರವಾರ(ನವೆಂಬರ್ 12) ಸಮಾವೇಶದ ಅಂತಿಮ ದಿನವಾಗಿದ್ದು , ಪ್ಯಾರಿಸ್ ಒಪ್ಪಂದದ ಗುರಿ ತಲುಪಲು ಇನ್ನಷ್ಟು ಕಠಿಣ ನಿರ್ಧಾರಗಳನ್ನು ಈ ಸಂದರ್ಭ ಜಾಗತಿಕ ಮುಖಂಡರು ಘೋಷಿಸುವ ನಿರೀಕ್ಷೆಯಿದೆ. ಖನಿಜ ಮೂಲದ ತೈಲಗಳ ಬಳಕೆಯನ್ನು ಸಮಾಪ್ತಿಗೊಳಿಸುವ ದೃಷ್ಟಿಯಿಂದ ಈ ತೈಲಗಳಿಗೆ ಸಬ್ಸಿಡಿ ನೀಡುವುದನ್ನು ಹಂತಹಂತವಾಗಿ ಕಡಿಮೆಗೊಳಿಸಬೇಕು ಎಂದು ಸಮಾವೇಶದ ಆರಂಭದ ದಿನದಂದು ಹೊರಡಿಸಿದ ಕರಡು ನಿರ್ಣಯದಲ್ಲಿ ಸುಮಾರು 200 ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಲಾಗಿತ್ತು. ಆದರೆ ಅಂತಿಮ ದಿನವಾದ ಶುಕ್ರವಾರ ಪ್ರಕಟಿಸಿರುವ ಹೊಸ ನಿರ್ಣಯದಲ್ಲಿ ಕಲ್ಲಿದ್ದಲು ಕಾಲಂನ ಎದುರು ಅಕ್ಷಯ ಎಂಬ ಶಬ್ದವನ್ನು ಸೇರಿಸಲಾಗಿದೆ ಮತ್ತು ಖನಿಜ ಮೂಲಗಳಿಗೆ ನೀಡುವ ‘ಅನರ್ಹ’ ಸಬ್ಸಿಡಿಯನ್ನು ಹಂತಹಂತವಾಗಿ ಸಮಾಪ್ತಿಗೊಳಿಸಬೇಕು ಎಂದು ಬದಲಾಯಿಸಲಾಗಿದೆ. ಹೊಸ ನಿರ್ಣಯದ ವಾಕ್ಯ ಹೀಗಿದೆ ‘ದೇಶಗಳು ಕಡಿಮೆ ಇಂಗಾಲ ಹೊರಸೂಸುವ ಇಂಧನ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಸಂಶೋಧನೆಯನ್ನು ಹೆಚ್ಚಿಸಿಕೊಳ್ಳಬೇಕು. ಅಕ್ಷಯವಾದ ಕಲ್ಲಿದ್ದಲು ಸಂಪತ್ತನ್ನು ಹಂತಹಂತವಾಗಿ ದೂರಗೊಳಿಸುವ, ಖನಿಜ ಮೂಲದ ತೈಲಗಳಿಗೆ ನೀಡುವ ಅನರ್ಹ ಸಬ್ಸಿಡಿಯನ್ನು ಸಮಾಪ್ತಿಗೊಳಿಸಲು ಕಾರ್ಯಕ್ರಮ ರೂಪಿಸಬೇಕು’. ಈ ಬದಲಾವಣೆ ಅತ್ಯಂತ ಕೆಟ್ಟ ಸಂಕೇತವನ್ನು ನೀಡುತ್ತದೆ. ಖನಿಜ ತೈಲ ಹೇರಳವಾಗಿರುವ ಚೀನಾ ಮತ್ತು ಸೌದಿ ಅರೆಬಿಯಾ ಮುಂತಾದ ದೇಶಗಳ ಒತ್ತಡದಿಂದ ಈ ಬದಲಾವಣೆ ಮಾಡಲಾಗಿದೆ. ಖನಿಜ ತೈಲದ ಬಳಕೆ ನಿಷೇಧಿಸುವ ಅಗತ್ಯವಿಲ್ಲ ಎಂದು ಇಲ್ಲಿ ಪರೋಕ್ಷವಾಗಿ ಉಲ್ಲೇಖಿಸಲಾಗಿದೆ ’ ಎಂದು ಯುರೋಪಿಯನ್ ಯೂನಿಯನ್ನ ಹವಾಮಾನ ಕಾರ್ಯನೀತಿ ಮುಖ್ಯಸ್ಥ ಫ್ರಾನ್ಸ್ ಟಿಮ್ಮರ್ಮನ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News