ವಾತ್ಸಲ್ಯದ ತಾಯ್ತನದ ಭಾವಕ್ಕೆ ಅನ್ವರ್ಥ ಪ್ರೊ. ಸಬಿಹಾ

Update: 2021-11-12 19:30 GMT

ಹೆಣ್ಣು ತನ್ನನ್ನು ತಾನು ಅರಿಯುತ್ತಾ ಲೋಕವನ್ನು ಅರಿಯಲು ಯತ್ನಿಸಿದಾಗ ನಿಜವಾದ ಸಬಲೀಕರಣ ಸಾಧ್ಯವಾಗುತ್ತದೆ. ಒಳಲೋಕ ಮತ್ತು ಹೊರಲೋಕಗಳ ಮುಖಾಮುಖಿಯಲ್ಲಿ ಘಟಿಸುವ ನೂರಾರು ಸಂಗತಿಗಳಲ್ಲಿ ಅವಳು ತನ್ನ ಶಕ್ತಿ ಸಾಮರ್ಥ್ಯವನ್ನು ತಿಳಿಯುವುದರೊಂದಿಗೆ, ಸವಾಲುಗಳಿಗೆ ಉತ್ತರದಾಯಿಯಾಗಿ ತನ್ನ ಅಸ್ಮಿತೆಯನ್ನು ಸಾಬೀತು ಪಡಿಸುತ್ತಾಳೆ. ಬದುಕಿನಲ್ಲಿ ಸಿಕ್ಕ ಅವಕಾಶಗಳನ್ನು ಪಡೆದು ಯೋಜನಾಬದ್ಧವಾದ ನಡಿಗೆಯಿಂದ ಸರ್ವರೊಳು ಒಂದಾಗಿ, ಮಾನವ ಪ್ರೇಮದ ರೂವಾರಿಯಾಗಿ ಮೊಗೆದಷ್ಟೂ ನೀಡುವ ವಾತ್ಸಲ್ಯದ ತಾಯ್ತನದ ಭಾವಕ್ಕೆ ಅನ್ವರ್ಥ ಪ್ರೊ.ಸಬಿಹಾ.

‘‘ಎಲ್ಲ ಜೀವಿಗಳನ್ನೂ ತನ್ನಂತೆ ನೋಡುವವನು ಮತ್ತು ಎಲ್ಲಾ ಜೀವಿಗಳನ್ನು ತನ್ನಂತೆ ಅರಿತುಕೊಳ್ಳುವವನು ಸತ್ಯವನ್ನು ಅರಿಯುತ್ತಾನೆ’’ ಎನ್ನುವ ರವೀಂದ್ರನಾಥ ಟ್ಯಾಗೋರರ ನುಡಿಯು ಸಾಧಕರ ನಡೆಗಳಿಗೆ ಅನ್ವಯಿಸುತ್ತದೆ. ಸಾಮಾನ್ಯ ಹೆಣ್ಣು ಮಗಳೊಬ್ಬಳು ತನ್ನ ದಕ್ಷತೆ, ಶಿಸ್ತು, ಕರ್ತವ್ಯ ಪ್ರಜ್ಞೆಯಿಂದ ಅಸಾಮಾನ್ಯವಾದುದನ್ನು ಸಾಧಿಸಲು ಕಾರಣವಾದುದು ಎಲ್ಲ ಹೆಣ್ಣು ಮಕ್ಕಳಿಗೆ ಆದರ್ಶ ಮತ್ತು ಮಾದರಿ. ಅವರು ಒಂದು ಪರಂಪರೆಯ ಕೊಂಡಿಯಾಗಿ ದೃಢವಾದ ಹೆಜ್ಜೆ ಗುರುತುಗಳನ್ನು ಇರಿಸಿದ್ದಾರೆ.

 ಪ್ರೊ.ಸಬಿಹಾ ಭೂಮಿಗೌಡ ಅವರು ತಮ್ಮ ಮೂವತ್ತೊಂಬತ್ತು ವರ್ಷಗಳ ಅಧ್ಯಯನ ಮತ್ತು ಅಧ್ಯಾಪನದ ಜತೆಗೆ ಆಡಳಿತಾತ್ಮಕವಾಗಿ ಹಲವಾರು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ 62ನೆಯ ವಯಸ್ಸಿನಲ್ಲಿ ನಿವೃತ್ತಿ ಹೊಂದಿದ್ದಾರೆ. ಪ್ರೊ.ಸಬಿಹಾ ನಮ್ಮ ನಡುವಿನ ಅತ್ಯಂತ ಸೂಕ್ಷ್ಮ ಮನದ, ಒಳನೋಟಗಳುಳ್ಳ ಕವಿ, ಲೇಖಕಿ, ವಿಮರ್ಶಕಿ. ಒಂದು ತಲೆಮಾರನ್ನು ರೂಪಿಸಬಲ್ಲಷ್ಟು ಸೂಕ್ಷ್ಮತೆ ಮತ್ತು ಬದ್ಧತೆಯಿಂದ ಹೆಣ್ಣು ಕಣ್ಣೋಟದ ಬೋಧಕಿ. ಆಡಳಿತಾತ್ಮಕ ಸಾಮರ್ಥ್ಯ, ಶಿಸ್ತು, ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಕಾಯಕ ಪ್ರೀತಿಯ ಮಾದರಿ. ಈ ಮಾತಿಗೆ ಅವರ ಶಿಷ್ಯ ಬಳಗ, ಅವರು ಕೈಗೊಂಡ ಸಂಶೋಧನೆ, ಕಾರ್ಯಯೋಜನೆಗಳು, ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ನಾಲ್ಕು ವರ್ಷಗಳ ಅವಧಿಯಲ್ಲಿ ಅವರು ಕೈಗೊಂಡ ಕೆಲಸಗಳೇ ಸಾಕ್ಷಿ. ಮಹಿಳಾ ವಿ.ವಿ.ಯನ್ನು ಜನಸಾಮಾನ್ಯರೂ ಇಲ್ಲೊಂದು ವಿ.ವಿ.ಇದೆ ಎಂದು ತಿಳಿಯುವಂತೆ ಮಾಡಿದ್ದು, ಜನಮಾನಸಕ್ಕೆ ಒಯ್ದುದು ಅವರ ಹೆಚ್ಚುಗಾರಿಕೆ. ಅಧಿಕಾರದ ಉನ್ನತ ಸ್ಥಾನದಲ್ಲಿ ಇದ್ದಾಗಲೂ ಸ್ನೇಹಶೀಲರಾಗಿದ್ದು ಅದೇ ಕಕ್ಕುಲಾತಿ ಮತ್ತು ವಾತ್ಸಲ್ಯದಿಂದ ತನ್ನ ತವರಿನಂತೆ ಕರಾವಳಿ ಲೇಖಕಿ ಮತ್ತು ವಾಚಕಿಯರ ಸಂಘದ ಹಿರಿ ಕಿರಿಯರನ್ನು ನಡೆಸಿಕೊಂಡ ಪರಿ ಅನುಕರಣಶೀಲ. ಜಾತ್ಯತೀತತೆ, ಸ್ತ್ರೀ ವಾದ, ಘನತೆಯ ಬದುಕು, ಬೌದ್ಧಿಕ ಸ್ವಾಯತ್ತತೆ, ನಿಷ್ಪಕ್ಷ ಪಾರದರ್ಶಕ ಆಡಳಿತ, ಬಹುತ್ವ, ಪ್ರಜಾಪ್ರಭುತ್ವವಾದಿ ಮೌಲ್ಯ, ಮಾನವಪ್ರೇಮ ಮುಂತಾದ ಆದರ್ಶ ಮೌಲ್ಯಗಳನ್ನು ಬದುಕಿದವರು ಸಬಿಹಾ.

ಇದೇ ನವೆಂಬರ್ 14ರಂದು ಅವರು ಒಡನಾಡಿದ ಸಂಘಟನೆಗಳೆಲ್ಲರ ಸಹಯೋಗದಲ್ಲಿ ‘ಸಬಿಹಾಭಿನಂದನ’ ಕಾರ್ಯಕ್ರಮವು ಆಯೋಜನೆಗೊಂಡಿದ್ದು ‘ಒಡನಾಡಿ ಸಬಿಹಾ’ ಎಂಬ ಅಭಿನಂದನಾ ಹೊತ್ತಗೆಯು ಲೋಕಾರ್ಪಣೆ ಗೊಳ್ಳಲಿದೆ. ಕವಲಕ್ಕಿಯ ಕವಿ ಪ್ರಕಾಶನವು ಪ್ರಕಟಿಸಿರುವ ಅಭಿನಂದನಾ ಗ್ರಂಥಕ್ಕೆ ಡಾ. ಆರ್. ಸುನಂದಮ್ಮ, ಡಾ.ಒಂಕಾರ ಕಾಕಡೆ, ದು.ಸರಸ್ವತಿ ಮತ್ತು ಎಚ್.ಎಸ್.ಅನುಪಮಾ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ. ಕಿರಿಯರನ್ನು ಪ್ರೋತ್ಸಾಹಿಸುವ, ಪ್ರತಿಭೆಗಳನ್ನು ಗುರುತಿಸುವ, ಸ್ನೇಹಬಂಧದ ಬಾಂಧವ್ಯದ ಹೆಣಿಗೆಗಳನ್ನು ಹೆಣೆಯುವ, ಬದ್ಧತೆಯಿಂದ ತಾನು ವಹಿಸಿಕೊಂಡ ಜವಾಬ್ದಾರಿಗಳನ್ನು ನಿರ್ವಹಿಸುವ ಸಬಿಹಾ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ದಿಟ್ಟವಾಗಿ ಪ್ರಕಟಿಸುವವರೂ ಹೌದು. ತಿಳುವಳಿಕೆಯ ಹಸಿವು ಅವರನ್ನು ನಿರಂತರ ಕ್ರಿಯಾಶೀಲವಾಗಿ ಇರಿಸಿದೆ. ಸಣ್ಣ ಸಣ್ಣ ಸಂಗತಿಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಮತ್ತು ಪ್ರತಿಕ್ರಿಯಿಸುವ ಮನೋಧರ್ಮ ಅವರದು. ವೈಯಕ್ತಿಕವಾಗಿ ನನ್ನೊಳಗಿನ ಕವಿಯನ್ನು ಗುರುತಿಸಿದವರು ಸಬಿಹಾ ಮೇಡಂ. ಎಂ.ಎ. ಓದುವ ದಿನಗಳಲ್ಲಿ ಮೈಸೂರಿನ ಎಸ್.ಅನಂತನಾರಾಯಣ ಅವರು ‘ಗಂಗಾತರಂಗ’ ಪ್ರತಿಷ್ಠಾನದಿಂದ ನಡೆಸಿದ ಕವನ ವಿಮರ್ಶೆಯಲ್ಲಿ ಬಹುಮಾನಿತಳಾದಾಗ ಸಂಭ್ರಮಿಸಿದವರು ಅವರು.

ಸುರತ್ಕಲ್‌ನ ಗೋವಿಂದದಾಸ ಕಾಲೇಜಿನ ಲೀಲಾವತಿ ಎಸ್.ರಾವ್ ಮತ್ತು ಹಿರಿಯ ಲೇಖಕಿಯರಾದ ಬಿ.ಎಂ.ರೋಹಿಣಿ, ಚಂದ್ರಕಲಾ ನಂದಾವರ, ಸಾರಾ ಅಬೂಬಕರ್, ಪದ್ಮಾ ಶೆಣೈ ಇವರೆಲ್ಲ ಯೋಜನೆ ಮಾಡಿ ಕಟ್ಟಿದ ಲೇಖಕಿಯರ ಸಂಘದಲ್ಲಿ ಸಕ್ರಿಯರಾಗಿದ್ದವರು ಸಬಿಹಾ. ಕರಾವಳಿಯ ಬಳಗಕ್ಕೆ ಕಿರಿಯ ತಲೆಮಾರನ್ನು ಪರಿಚಯಿಸುವುದರೊಂದಿಗೆ ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ನಿರಂತರವಾಗಿ ಮಾಡಿದ್ದಾರೆ. ಕಾಯಕ ಪ್ರೇಮಿ ಸಬಿಹಾರ ಕೆಲಸ ಮಾಡುವ ಕ್ರಮವೇ ಅದ್ಭುತವಾದುದು. ಹಲವು ಕಾರ್ಯಯೋಜನೆಗಳಲ್ಲಿ ಅವರೊಂದಿಗೆ ಕೈಜೋಡಿಸಿ ಕೆಲಸ ಮಾಡಿದಾಗ ಸಿಕ್ಕ ಅನುಭವಗಳು ಅನನ್ಯ. ಅಧ್ಯಯನದ ಶಿಸ್ತು ಮತ್ತು ಬದ್ಧತೆಯನ್ನು ನಿಜವಾಗಿಯೂ ಬೋಧಿಸುವವರು. ಮಹಿಳಾ ವಿ.ವಿ.ಯಿಂದ ಪ್ರಕಟವಾದ ಸಂಸ್ಕೃತಿ ಮಾಲಿಕೆಯಲ್ಲಿ ‘ಕೃಷಿ ಸಂಸ್ಕೃತಿ’ ಸಂಪುಟದ ಸಂಪಾದಕಿ -ಮಾರ್ಗದರ್ಶಕಿ ಅವರು. ಇಡಿಯ ಕರ್ನಾಟಕದ ಕೃಷಿಯನ್ನು ಹೆಣ್ಣಿನ ಕಣ್ಣನೋಟದಲ್ಲಿ ದಾಖಲಿಸುವ ಅಧ್ಯಯನವದು. ರಾಜ್ಯಾದ್ಯಂತ ಕ್ಷೇತ್ರ ಕಾರ್ಯ, ಆಕರ ಸಂಗ್ರಹ, ವಿಂಗಡಣೆ, ವಿಶ್ಲೇಷಣೆ, ಒಳನೋಟಗಳು, ಫಲಿತಗಳು ಇವನ್ನೆಲ್ಲ ಸಾಧ್ಯವಾಗಿಸಿದ ರೀತಿ ಜತೆಗಿದ್ದು ಕೆಲಸ ಮಾಡಿದಾಗಲೇ ತಿಳಿಯುವಂತಹುದು. ಕೃಷಿಯನ್ನು ನಾನು ಬದುಕಿದ್ದಾದರೂ ಅದನ್ನು ನೋಡಿದ ಕ್ರಮ ಸಾಮಾನ್ಯವಾದುದು. ನಾನು ಬರಹ ರೂಪಕ್ಕೆ ಇಳಿಸಿದಾಗ ಸಿಕ್ಕ ಅನುಭವ ಹೊಸ ಹೊಳಹುಗಳಿಗೆ ಸಾಕ್ಷಿ. ನೀರಾವರಿಯ ಕ್ರಮದಲ್ಲಿ ಹೆಣ್ಣು ಮಕ್ಕಳು ನಿರ್ವಹಿಸುತ್ತಿದ್ದ ಶ್ರಮದ ದಾಖಲಾತಿಗೆ ಶಬ್ದದ ವಿವರಗಳು ಸಿಕ್ಕರೂ ಒಂದು ದಾಖಲಾತಿಯ ಚಿತ್ರ ಸಿಗದಿದ್ದಾಗ ಅದಕ್ಕೊಂದು ರೇಖಾಚಿತ್ರ ಮಾಡಿಸಿ ದಾಖಲು ಮಾಡಿದುದು ಒಂದು ವಿಶಿಷ್ಟ ಅನುಭೂತಿ. ಅದಕ್ಕಾಗಿ ಸಬಿಹಾ ವಹಿಸಿದ ಶ್ರಮ ಮಹತ್ವದ್ದು. ಆ ಖುಷಿಯನ್ನು ಗೆಳೆಯರೊಂದಿಗೆ ಹಂಚಿಕೊಂಡಿದ್ದು, ಇವೆಲ್ಲ ಮರೆಯಲಾರದ ನೆನಪುಗಳು.

ಕರ್ನಾಟಕ ಸಾಹಿತ್ಯ ಅಕಾಡಮಿಯು ಐವತ್ತು ವರ್ಷಗಳು ಪೂರೈಸಿದ ಸಂದರ್ಭದಲ್ಲಿ ನಡೆಸಿದ ಪರಿಣಾಮ ಅಧ್ಯಯನವನ್ನು ಆರು ತಿಂಗಳಲ್ಲಿ ನಡೆಸುವ ಯೋಜನೆ ಕೈಗೆತ್ತಿಕೊಂಡಾಗ ಅದಕ್ಕೆ ಉಪಯೋಗಿಸಿದ ಶ್ರಮ, ಸಮಯ, ಯೋಜನಾಬದ್ಧತೆ, ವ್ರತದಂತೆ ಕಾಣಿಸುವಂತಹುದು. ಇಂತಹ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ಕಾರ್ಯತತ್ಪರತೆಯ ಬದ್ಧತೆಯಿಂದ ಲಭಿಸುತ್ತದೆ. ಕೇವಲ ಓದು ಬರಹ ಅಧ್ಯಯನ ಮಾತ್ರವಲ್ಲ, ಸೃಜನಶೀಲ ಮತ್ತು ಸೃಜನೇತರ ಎಲ್ಲ ವಿಭಾಗಗಳಲ್ಲೂ ನಿರಂತರ ಕೈಯಾಡಿಸಿ ಸಂಗ್ರಹಯೋಗ್ಯ ಕೃತಿಗಳನ್ನು ರಚಿಸಿ ಸಂಪಾದಿಸಿದವರು. ಆದ್ದರಿಂದಲೇ ಕರ್ನಾಟಕದ ಉದ್ದಗಲಕ್ಕೂ ಗಟ್ಟಿದನಿಯ ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ. ವಿಶ್ವವಿದ್ಯಾನಿಲಯ ಅನುದಾನ ಆಯೋಗದಿಂದ ನಡೆಸಿದ ಮಹಿಳಾ ಚಳವಳಿ ಮತ್ತು ಹೋರಾಟದ ಬಗೆಗೆ ನಡೆಸಿದ ಕಾರ್ಯಯೋಜನೆ, ಅದರಲ್ಲಿ ತೊಡಗಿಸಿಕೊಂಡ ರೀತಿ, ಫಲಶ್ರುತಿಯಾಗಿ ಮಂಗಳೂರು ವಿ.ವಿ.ಯಲ್ಲಿ ಎರಡು ದಿನಗಳ ವಿಚಾರಸಂಕಿರಣದ ನೆನಪುಗಳು ಸಂಘಟನೆಯ ಹಾದಿಯಲ್ಲಿ ಅವಿಸ್ಮರಣೀಯ. ಕುಟುಂಬ ಮತ್ತು ವೃತ್ತಿಬದುಕನ್ನು ಸಮತೂಕದಲ್ಲಿ ನಡೆಸುತ್ತಾ, ಒಬ್ಬ ಗೃಹಿಣಿಯಾಗಿ ‘ಮನೆ’ಯೆಂಬ ಮನದಲ್ಲಿ ಮಾಡಿದ ಅಡುಗೆಯನ್ನು ಪ್ರೀತಿಯಿಂದ ಉಣಬಡಿಸುವ ಅವರ ಆಪ್ತತೆ ಎಲ್ಲಕ್ಕಿಂತ ಹಿರಿದು. ಮನದೊಳಗೆ ಹೊಕ್ಕವರನ್ನು ಮನೆಯೊಳಗೆ ಆಮಂತ್ರಿಸಿ ಒಡನಾಡುವ ಸಬಿಹಾ ಹೆಣ್ತನದ ಮಾದರಿ ರೂಪ. ಮಂಗಳೂರು ವಿ.ವಿ.ಯಿಂದ ನಿಯೋಜನೆಗೊಂಡು ಚಿಕ್ಕ ಅಳುವಾರದ ಕೇಂದ್ರಕ್ಕೆ ತೆರಳುವ ದೀರ್ಘ ಪ್ರಯಾಣವನ್ನೂ ಹೃಸ್ವಗೊಳಿಸಿದವರು. ಆಕಸ್ಮಿಕವಾಗಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿ, ನಾವು ಆತಂಕಗೊಂಡಾಗ ಅವರು ಸ್ಪಂದಿಸಿದ ಕ್ರಮವೇ ಸವಾಲಿಗೆ ಮುಖ ಮಾಡಿ ನಿಲ್ಲುವಂತಹುದು. ತಮ್ಮ ಬರವಣಿಗೆಯನ್ನು ಕವಿತೆಯಿಂದ ಆರಂಭಿಸಿ ಕತೆ, ಲಲಿತಪ್ರಬಂಧ, ಅಂಕಣ, ವ್ಯಕ್ತಿ ಚಿತ್ರ, ಪ್ರಬಂಧ, ಸ್ತ್ರೀ ವಾದ, ಸಂಸ್ಕೃತಿ ಚಿಂತನೆ, ಸಂಶೋಧನೆ, ಸಂಪಾದನೆ, ಅಧ್ಯಯನ ಹೀಗೆ ಬಹುಮುಖಿಯಾಗಿ ಸಾಗುವಾಗ ಸಬಿಹಾ ವ್ಯಕ್ತಿತ್ವ ಮಾಗುತ್ತಾ ಸಾಗಿದೆ. ಕಾಲೇಜು ದಿನಗಳಲ್ಲಿ ಅವರ ಸಹಪಾಠಿಗಳಾಗಿದ್ದವರು ಸಬಿಹಾರ ಸೌಮ್ಯತೆಯನ್ನು ನೆನಪಿಸುತ್ತಾ ಅವರ ಜೀವನಪ್ರೀತಿ ಜೀವನ ಮೌಲ್ಯಕ್ಕೆ ಬೆರಗುಗೊಳ್ಳುತ್ತಾರೆ.

ಗುರುವಾಗಿ, ಲೇಖಕಿಯಾಗಿ, ಸಹವರ್ತಿಯಾಗಿ, ಸಂಘಟನೆಗಳಲ್ಲಿ ಜತೆಗಾತಿಯಾಗಿ, ಪ್ರವಾಸದ ದಾರಿಯಲ್ಲಿ ಸಖಿಯಾಗಿ, ಸಲಹೆ ಸೂಚನೆಗಳ ನೀಡುವ ಹಿರಿಯಕ್ಕಳಾಗಿ, ಆಪ್ತತೆಯ ಒಲವಿನಲ್ಲಿ ಸಹಜತೆಯನ್ನು ಕಳೆದುಕೊಳ್ಳದೆ ಒಡನಾಡುವ ಸಬಿಹಾ ಅವರ ಬಾಂಧವ್ಯ ಬಾಳಬಟ್ಟೆಯಲಿ ಹೊಲಿವ ‘ಕೌದಿ’ಯಂತೆ ಬೆಚ್ಚನೆ ಕಾಪಿಡುವಂತಹುದು.

Writer - ಡಾ. ಜ್ಯೋತಿ ಚೇಳೈರು

contributor

Editor - ಡಾ. ಜ್ಯೋತಿ ಚೇಳೈರು

contributor

Similar News