ಬಿಡಿಎ ಬಹುಕೋಟಿ ಅಕ್ರಮಗಳ ಅಡ್ಡೆ: ಎಸಿಬಿ

Update: 2021-11-20 12:57 GMT

ಬೆಂಗಳೂರು, ನ.20: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಕಚೇರಿ ಮೇಲಿನ ದಾಳಿ ಪ್ರಕರಣ ಸಂಬಂಧ ಬಹುಕೋಟಿ ಅಕ್ರಮ ವ್ಯವಹಾರ, ನಿವೇಶನಗಳನ್ನು ಬಯಲಿಗೆಳೆಯುವಲ್ಲಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಯಶಸ್ವಿಯಾಗಿದ್ದು, ಮಂಗಳವಾರ ಶೋಧ ಕಾರ್ಯ ಮುಂದುವರೆಸಲಿದ್ದೇವೆ ಎಂದು ಅಧಿಕೃತ ಮಾಹಿತಿ ನೀಡಿದೆ.

ಭಾರಿ ಪ್ರಮಾಣದ ಅವ್ಯವಹಾರ ಮತ್ತು ಭ್ರಷ್ಚಾಚಾರ ನಡೆಯುತ್ತಿರುವ ದೂರುಗಳನ್ನು ಆಧರಿಸಿ ನಿನ್ನೆ ನಡೆಸಿದ ದಾಳಿ ಕುರಿತು ಶನಿವಾರ ಮಾಹಿತಿ ನೀಡಿರುವ ಎಸಿಬಿ ತನಿಖಾಧಿಕಾರಿಗಳು, ನಿವೇಶನಗಳ ಹಂಚಿಕೆಯಲ್ಲಿ ಬಹುಕೋಟಿ ಅವ್ಯವಹಾರ ಕಂಡುಬಂದಿದ್ದು, ಎರಡು ದಿನಗಳಿಂದ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಕೆಲ ಅಕ್ರಮಗಳು ಪತ್ತೆಯಾಗಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಮುಖವಾಗಿ ರವಿವಾರ ಹಾಗೂ ಸೋಮವಾರ ಸರಕಾರಿ ರಜೆ ಹಿನ್ನೆಲೆ ಶೋಧ ಕಾರ್ಯ ತಾತ್ಕಲಿಕವಾಗಿ ನಿಲ್ಲಿಸಲಾಗಿದ್ದು, ಮಂಗಳವಾರ(ನ.23) ಪುನಃ ಬಿಡಿಎ ಕಚೇರಿಯಲ್ಲಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಲಾಗುವುದು ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಇನ್ನೂ, ಎರಡು ದಿನದಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಇಲ್ಲಿನ ಅರ್ಕಾವತಿ ಬಡಾವಣೆ, ಕೆಂಪೇಗೌಡ ಬಡಾವಣೆ ಹಾಗೂ ವಿಶ್ವೇಶ್ವರಯ್ಯ ಬಡಾವಣೆಗಳಲ್ಲಿ ಸುಮಾರು 75 ಕೋಟಿ ರೂ. ಬೆಲೆ ಬಾಳುವ 6 ನಿವೇಶನಗಳನ್ನು ಸುಳ್ಳು ಮಾಹಿತಿ ನೀಡಿ ಖೊಟ್ಟಿ ದಾಖಲಾತಿಗಳನ್ನು ಸೃಷ್ಟಿಸಿ ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿಗಳು ಶಾಮಿಲಾಗಿ ಬೆಲೆ ಬಾಳುವ ನಿವೇಶನಗಳನ್ನು ಅನರ್ಹ ವ್ಯಕ್ತಿಯೊಬ್ಬರಿಗೆ ಸಿಗುವಂತೆ ಮಾಡಿರುವ ದಾಖಲಾತಿ ಜಪ್ತಿ ಮಾಡಿ, ತನಿಖೆ ಕೈಗೊಂಡಿದ್ದಾರೆ.

ಕೆಂಗೇರಿ ಹೋಬಳಿ ಉಳ್ಳಾಲ ಗ್ರಾಮದಲ್ಲಿ ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿಗಳು ಖಾಸಗಿ ವ್ಯಕ್ತಿ ಮತ್ತು ಮಧ್ಯವರ್ತಿಗಳೊಂದಿಗೆ ಜತೆಗೂಡಿ ವ್ಯಕ್ತಿಯಿಂದ ಯಾವುದೇ ಜಮೀನು ಸ್ವಾಧೀನ ಪಡಿಸಿಕೊಳ್ಳದೆ ಇದ್ದರು ಸಹ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಬದಲಿ ನಿವೇಶನವಾಗಿ 1800 ಚ.ಅಡಿ ಅಳತೆಯ ಸುಮಾರು 1.5 ಕೋಟಿ ರೂ. ಮೌಲ್ಯದ ನಿವೇಶನವನ್ನು ಅಕ್ರಮವಾಗಿ ಮಂಜೂರು ಮಾಡಿರುವ ದಾಖಲಾತಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಕೆಂಗೇರಿ ಸ್ಯಾಟ್‍ಲೈಟ್ ಟೌನ್ ಬಳಿ ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿಗಳು ಖಾಸಗಿ ವ್ಯಕ್ತಿ ಮತ್ತು ಮಧ್ಯವರ್ತಿಗಳೊಂದಿಗೆ ಶಾಮೀಲಾಗಿ ಖೊಟ್ಟಿ ದಾಖಲಾತಿಗಳನ್ನು ಹಾಜರುಪಡಿಸಿ 1000 ಚ.ಅ ಅಳತೆಯ ಸುಮಾರು 80 ಲಕ್ಷ ರೂ.ಮೌಲ್ಯದ ನಿವೇಶನವನ್ನು ಅಕ್ರಮವಾಗಿ ಮಂಜೂರು ಮಾಡಿದ್ದಾರೆ.

ಚಂದ್ರಲೇಔಟ್ ಪ್ರದೇಶದಲ್ಲೂ ಇದೇ ರೀತಿ, 5 ಕೋಟಿ ರೂ. ಮೌಲ್ಯದ 2400 ಚ.ಅಡಿ ನಿವೇಶನವನ್ನು ಅಕ್ರಮವಾಗಿ ಮಂಜೂರು ಮಾಡಿದ್ದಾರೆ.ಅದೇ ರೀತಿ, ನಾಡ ಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲ ನಿವೇಶನ ಫಲಾನುಭವಿಯವರ ಮೂಲ ದಾಖಲಾತಿಗಳನ್ನು ತಿದ್ದುಪಡಿಗೊಳಿಸಿ 30 ಲಕ್ಷ ಬೆಲೆ ಬಾಳುವ ನಿವೇಶನವನ್ನು ಅಕ್ರಮವಾಗಿ ಅನರ್ಹ ವ್ಯಕ್ತಿಗೆ ಮಂಜೂರು ಮಾಡಿರುವ ದಾಖಲೆಯೂ ವಶಕ್ಕೆ ತೆಗೆದುಕೊಳ್ಳಲಾಗಿದೆ.

ನಕಲಿ ದಾಖಲೆ ಸೃಷ್ಟಿ ಮಾತ್ರವಲ್ಲದೆ, ಕೆಲವೊಂದು ಪ್ರಕರಣಗಳಲ್ಲಿ ಒಂದೇ ನಿವೇಶನವನ್ನು ಒಂದಕಿಂತ ಹೆಚ್ಚಿನ ವ್ಯಕ್ತಿಗಳಿಗೆ ನೊಂದಣಿ ಮಾಡಿಕೊಟ್ಟು ಫಲಾನುಭವಿಗಳು ಅನವಶ್ಯಕವಾಗಿ ನ್ಯಾಯಾಲಯದ ಮಟ್ಟಿಲು ಏರುವಂತೆ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕಾಗಿದೆ ಎಂದು ಎಸಿಬಿ ತನಿಖಾಧಿಕಾರಿಗಳು ಹೇಳಿದ್ದಾರೆ.

ಇಲ್ಲಿನ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಮೂಲ ಫಲಾನುಭವಿಗೆ ಮಂಜೂರಾದ 52 ಲಕ್ಷ ಮೌಲ್ಯದ ನಿವೇಶನವನ್ನು ಅನರ್ಹ ವ್ಯಕ್ತಿಗೆ ನೀಡಲಾಗಿದೆ. ಈ ಬಗ್ಗೆ ಮೂಲ ದಾಖಲಾತಿ ಜಪ್ತಿ ಮಾಡಲಾಗಿದೆ.ಹೀಗೆ, ಅರ್ಕಾವತಿ ಬಡಾವಣೆಯಲ್ಲಿ ಫಲಾನುಭವಿಯೊಬ್ಬರಿಗೆ ನಿವೇಶನ ಮಂಜೂರಾಗಿದ್ದರು, ಸಹ ಯಾವುದೇ ಕಾರಣ ಇಲ್ಲದೆ ದುರುದ್ದೇಶದಿಂದ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನವನ್ನು ಮಂಜೂರು ಮಾಡಲಾಗಿದೆ ಎಂದು ಎಸಿಬಿ ತಿಳಿಸಿದೆ.

ಇಷ್ಟೇ ಮಾತ್ರವಲ್ಲದೆ, ಬಿಡಿಎ ಭೂ-ಸ್ವಾಧೀನಕ್ಕೆ ಸಂಬಂಧಪಟ್ಟಂತೆ ಬೀಮನಕುಪ್ಪೆ ಗ್ರಾಮ, ನಾಡಪ್ರಭು ಕೆಂಪೇಗೌಡ ಬಡಾವಣೆ ಹಾಗೂ ಡಾ.ಕೆ.ಶಿವರಾಮಕಾರಂತ್ ಬಡಾವಣೆ ಮೊದಲಾದ ಕಡೆಗಳಲ್ಲಿ ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿಗಳು ಮಧ್ಯವರ್ತಿಗಳೊಂದಿಗೆ ಶ್ಯಾಮಿಲಾಗಿ ಹಲವಾರು ಅಕ್ರಮಗಳನ್ನು ನಡೆಸಿರುವಂತೆ ಮೇಲ್ನೊಟಕ್ಕೆ ಬೆಳಕಿಗೆ ಬಂದಿದ್ದು, ಈ ಸಂಬಂಧ ತನಿಖೆ ಮುಂದುವರೆದಿದೆ.

ಅಂಜನಾಪುರ ಬಡಾವಣೆಯಲ್ಲಿ ಫಲಾನುಭವಿಯವರಿಗೆ ಸೇರಿದ ನಿವೇಶನ ಒಂದು ಒತ್ತುವರಿಯಾಗಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸುವ ಬದಲಾಗಿ,ಇಲ್ಲಿರುವ ನಿವಾಸಿಗಳಿಗೆ ಬೇರೆ ಬಡಾವಣೆಯಲ್ಲಿ ನಿವೇಶನವನ್ನು ನೀಡಿ ಈ ನಿವೇಶನವನ್ನು ಸಹ ಇತರೆ ಮೂರನೇ ವ್ಯಕ್ತಿಗೆ ಮಂಜೂರು ಮಾಡಿ ಅಕ್ರಮ ಮಾಡಲಾಗಿದೆ. 

ಅರ್ಕಾವತಿ ಬಡಾವಣೆ ಮತ್ತು ಇನ್ನು ಕೆಲವು ಬಡಾವಣೆಗಳಲ್ಲಿ, ಕೆಲವು ಅರ್ಜಿದಾರರು ನಿವೇಶನ ಮಂಜೂರಾತಿ ಪಡೆದು ನಿಗಧಿತ ಸಮಯದಲ್ಲಿ ಹಣ ಸಂದಾಯ ಮಾಡಿದ್ದರು ಸಹ ಅವರಿಗೆ ಲೀಸ್ ಕಂ ಸೇಲ್ ಡೀಡ್‍ಗಳನ್ನು ಮಾಡಿ ನಿಗಧಿತ ಅವಧಿಯೊಳಗೆ ಮನೆಗಳನ್ನು ಕಟ್ಟಿಕೊಂಡಿದ್ದರು ಸಹ ಇವರಿಗೆ ಅಬ್ಸ್ ಲ್ಯೂಟ್ ಸೇಲ್ ಡೀಡ್‍ಗಳನ್ನು ಮಾಡಿ ಕೊಡದೆ ದುರುದ್ದೇಶದಿಂದ ಅನಗತ್ಯ ವಿಳಂಬ ನೀತಿಯನ್ನು ಅನುಸರಿಸಿ ತೊಂದರೆ ಕೊಡಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. 

ಇದೇ ರೀತಿ ನಿಗದಿತ ಅವಧಿಯೊಳಗೆ ಬಿ.ಡಿ.ಎ ನಿಗದಿ ಪಡಿಸಿರುವ ಹಣವನ್ನು ಸಂದಾಯ ಮಾಡಿದ ಅರ್ಜಿದಾರರಿಗೆ ನಿವೇಶನ ಹಂಚಿಕೆ ಪತ್ರ ನೀಡದೆ ಅನವ್ಯಶಕ ವಿಳಂಭ ನೀತಿ ಅನುಸರಿಸಲಾಗುತ್ತಿದ್ದು, ಈ ಸಂಬಂಧ ಅಧಿಕೃತ ದಾಖಲಾತಿ ಜಪ್ತಿ ಮಾಡಿ ತನಿಖೆ ಮುಂದುವರೆಸಲಾಗಿದೆ ಎಂದು ಎಸಿಬಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News