ಕಿಸಾನ್ ಮಹಾಪಂಚಾಯತ್ ನಲ್ಲಿ ಬೇಡಿಕೆಗಳ ಈಡೇರಿಕೆಗೆ ಪಟ್ಟು: ಮುಂದುವರಿಯಲಿರುವ ಪ್ರತಿಭಟನೆ

Update: 2021-11-22 16:22 GMT

ಲಕ್ನೊ,ನ.22: ಸಂಯುಕ್ತ ಕಿಸಾನ ಮೋರ್ಚಾ (ಎಸ್‌ಕೆಎಂ)ದ ಕರೆಯ ಮೇರೆಗೆ ಸೋಮವಾರ ಇಲ್ಲಿಯ ಇಕೋ ಗಾರ್ಡನ್‌ನಲ್ಲಿ ಸಮಾವೇಶಗೊಂಡಿದ್ದ ಕಿಸಾನ್ ಮಹಾಪಂಚಾಯತ್ ಪ್ರಧಾನ ಮಂತ್ರಿಗಳಿಗೆ ಸಲ್ಲಿಸಲಾಗಿರುವ ಆರು ಬೇಡಿಕೆಗಳ ಈಡೇರಿಕೆಗಾಗಿ ತನ್ನ ಪಟ್ಟನ್ನು ಬಿಗಿಗೊಳಿಸಿದೆ.

ಶಾಸನಬದ್ಧ ಕನಿಷ್ಠ ಬೆಂಬಲ ಬೆಲೆ(ಎಸ್‌ಎಂಪಿ)ಖಾತರಿ ಮತ್ತು ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ ವಜಾ ಸೇರಿದಂತೆ ತಮ್ಮ ಬೇಡಿಕೆಗಳು ಈಡೇರುವವರೆಗೆ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಲಿದ್ದಾರೆ ಎಂದು ಎಸ್‌ಕೆಎಂ ಹೇಳಿದೆ.

ಹಲವಾರು ರಾಜ್ಯಗಳಿಂದ ಆಗಮಿಸಿದ್ದ ಸಹಸ್ರಾರು ರೈತರನ್ನುದ್ದೇಶಿಸಿ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರ ರಾಕೇಶ ಟಿಕಾಯತ್ ಅವರು,‘ನಮ್ಮ ಎಲ್ಲ ಬೇಡಿಕೆಗಳು ಈಡೇರಿದ ಹೊರತು ನಮ್ಮ ಆಂದೋಲನವು ಅಂತ್ಯಗೊಳ್ಳುವುದಿಲ್ಲ. ನಾವು ದೇಶಾದ್ಯಂತ ಇಂತಹ ಪಂಚಾಯತ್‌ಗಳನ್ನು ನಡೆಸಲಿದ್ದೇವೆ. ವಿಷಯವು ಮುಗಿದಿದೆ ಎಂದು ಯಾರಾದರೂ ಭಾವಿಸಿದ್ದರೆ ಅದು ಅವರ ತಪ್ಪುಗ್ರಹಿಕೆಯಾಗಿದೆ ’ ಎಂದು ಹೇಳಿದರು.

ಎಂಎಸ್‌ಪಿ ಖಾತರಿ ತಮ್ಮ ಅತ್ಯಂತ ಮುಖ್ಯ ಬೇಡಿಕೆಯಾಗಿದೆ ಎಂದು ಹೇಳಿದ ಟಿಕಾಯತ್,‘ಸಿ2+50 (ಉತ್ಪಾದನಾ ವೆಚ್ಚಕ್ಕಿಂತ ಶೇ.50 ಅಧಿಕ)ಸೂತ್ರವನ್ನು ಆಧರಿಸಿ ಎಂಎಸ್‌ಪಿಯನ್ನು ಎಲ್ಲ ಬೆಳೆಗಳು ಮತ್ತು ಎಲ್ಲ ರೈತರಿಗೆ ಕಾನೂನುಬದ್ಧ ಹಕ್ಕನ್ನಾಗಿಸಲು ನಾವು ಬಯಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ 2011ರಲ್ಲಿ ಅವರದೇ ಅಧ್ಯಕ್ಷತೆಯ ಸಮಿತಿಯು ಆಗಿನ ಪ್ರಧಾನಿಗಳಿಗೆ ಈ ಸೂತ್ರವನ್ನು ಶಿಫಾರಸು ಮಾಡಿತ್ತು ಮತ್ತು ನಂತರ ಅವರ ಸರಕಾರವೂ ಅದನ್ನು ಸಂಸತ್ತಿನಲ್ಲಿ ಪ್ರಕಟಿಸಿತ್ತು ಎನ್ನುವುದನ್ನು ನೆನಪಿಸಿದ್ದೇವೆ’ ಎಂದರು.

ಲಖಿಂಪುರ ಖೇರಿಯಿಂದ ಹೆಚ್ಚಿನ ರೈತರು ಮಹಾಪಂಚಾಯತ್‌ನಲ್ಲಿ ಭಾಗವಹಿಸಿದ್ದರು ಮತ್ತು ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಷ್‌ ಮಿಶ್ರಾಗೆ ಸೇರಿದ್ದ ವಾಹನವನ್ನು ಗುಂಪಿನ ಮೇಲೆ ನುಗ್ಗಿಸಿದ ಪರಿಣಾಮ ನಾಲ್ವರು ರೈತರು ಮೃತಪಟ್ಟಿದ್ದ ಅ.3ರ ಘಟನೆಯು ಪಂಚಾಯತ್‌ನಲ್ಲಿ ಮುಖ್ಯವಾಗಿ ಪ್ರಸ್ತಾಪಗೊಂಡಿತು.

ಪ್ರಕರಣದಲ್ಲಿ ಆರೋಪಿಯೂ ಆಗಿರುವ ಸಚಿವ ಮಿಶ್ರಾರ ವಜಾ ಮತ್ತು ಬಂಧನಕ್ಕೆ ರೈತರು ಆಗ್ರಹಿಸಿದರು. ಆಷಿಷ್ ಮಿಶ್ರಾ ಈಗಾಗಲೇ ಜೈಲು ಸೇರಿದ್ದಾರೆ.

ಹೈನುಗಾರಿಕೆ ಅಭಿವೃದ್ಧಿಗಾಗಿ ನೂತನ ನೀತಿಯೊಂದನ್ನು ಸರಕಾರವು ರೂಪಿಸಲಿದೆ ಎಂಬ ಮಾಹಿತಿಯು ತನಗೆ ಲಭಿಸಿದ್ದು,ಈ ವಿಷಯದಲ್ಲಿ ತಮ್ಮಿಂದಿಗೆ ಸಮಾಲೋಚಿಸಬೇಕು ಎಂದು ರೈತರು ಬಯಸಿದ್ದಾರೆ ಎಂದು ಟಿಕಾಯತ್ ಹೇಳಿದರು.

ರೈತರ ಮುಂದಿನ ಸಭೆಯು ನ.26ರಂದು ದಿಲ್ಲಿಯ ಗಡಿಗಳಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.

ಈ ನಡುವೆ,ಪ್ರತಿಭಟನೆಯ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡಿರುವ ರೈತರಿಗಾಗಿ ಸ್ಮಾರಕ ನಿರ್ಮಾಣಕ್ಕಾಗಿ ಸಿಂಘು ಗಡಿಯಲ್ಲಿ ಭೂಮಿಯನ್ನು ಮಂಜೂರು ಮಾಡುವಂತೆ ರೈತರು ಆಗ್ರಹಿಸಿದ್ದಾರೆ.

ಮೃತ ರೈತರ ಕುಟುಂಬಗಳಿಗೆ ಪರಿಹಾರವನ್ನು ನೀಡಬೇಕು ಎಂದೂ ಟಿಕಾಯತ್ ಆಗ್ರಹಿಸಿದರು. ರವಿವಾರ ಪ್ರಧಾನಿಯವರಿಗೆ ಪತ್ರವೊಂದನ್ನು ಬರೆದಿರುವ ಎಸ್‌ಕೆಎಂ ರೈತರ ಪ್ರತಿಭಟನೆಯನ್ನು ಅಂತ್ಯಗೊಳಿಸಲು ಎಂಎಸ್‌ಪಿಯ ಕಾನೂನುಬದ್ಧ ಖಾತರಿ,ಸಚಿವ ಅಜಯ್ ಮಿಶ್ರಾ ಅವರ ವಜಾ,ರೈತರ ವಿರುದ್ಧದ ಪ್ರಕರಣಗಳ ವಾಪಸಾತಿ,ಸಿಂಘು ಗಡಿಯಲ್ಲಿ ಹುತಾತ್ಮ ರೈತರ ಸ್ಮಾರಕ ನಿರ್ಮಾಣ,ಮೃತ ರೈತರ ಕುಟುಂಬಗಳಿಗೆ ಪರಿಹಾರ ನೀಡಿಕೆ ಮತ್ತು ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಯ ಹಿಂದೆಗೆತ ಸೇರಿದಂತೆ ಆರು ಷರತ್ತುಗಳನ್ನು ಮುಂದಿರಿಸಿದೆ.

ತಮ್ಮ ಹೊಲಗಳಲ್ಲಿ ಕೃಷಿ ತ್ಯಾಜ್ಯಗಳನ್ನು ಸುಡುವ ರೈತರಿಗೆ ದಂಡ ವಿಧಿಸುವುದನ್ನು ಕೈಬಿಡಬೇಕು ಎಂದೂ ರೈತ ನಾಯಕರು ಕೇಂದ್ರವನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News