ಬಾಹ್ಯಾಕಾಶ ನೌಕೆಯನ್ನು ಕ್ಷುದ್ರಗ್ರಹಕ್ಕೆ ಅಪ್ಪಳಿಸುವ ಯೋಜನೆಗೆ ಅಮೆರಿಕದ ಚಾಲನೆ

Update: 2021-11-24 18:34 GMT
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್ , ನ.24: ಬಾಹ್ಯಾಕಾಶ ನೌಕೆಯನ್ನು ಕ್ಷುದ್ರಗ್ರಹಕ್ಕೆ ಅಪ್ಪಳಿಸುವ ಮಹತ್ವದ ಕಾರ್ಯಾಚರಣೆಗೆ ಅಮೆರಿಕದ ನಾಸಾ ಚಾಲನೆ ನೀಡಿದ್ದು, ಕ್ಷುದ್ರಗ್ರಹದ ಪಥ ಬದಲಿಸುವ ತಂತ್ರಜ್ಞಾನವನ್ನು ಪರೀಕ್ಷಿಸುವ ವಿಶ್ವದ ಮೊತ್ತಮೊದಲ ಪ್ರಯೋಗ ಇದಾಗಿದೆ.

ಕ್ಯಾಲಿಫೋರ್ನಿಯಾದ ವ್ಯಾಂಡನ್‌ಬರ್ಗ್ ಬಾಹ್ಯಾಕಾಶ ನೆಲೆಯಿಂದ ಡಾರ್ಟ್ (ಅವಳಿ ಕ್ಷುದ್ರಗ್ರಹ ಮರುನಿರ್ದೇಶನ ಪರೀಕ್ಷೆ) ಸಾಧನವನ್ನು ಹೊಂದಿದ ಸ್ಪೇಸ್‌ಎಕ್ಸ್ ಗಗನನೌಕೆಯ ಉಡ್ಡಯನ ಪ್ರಕ್ರಿಯೆಯನ್ನು ನಾಸಾದ ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗಿದೆ. 1,344 ಪೌಂಡ್ ತೂಕದ ಈ ಗಗನನೌಕೆ ಗಂಟೆಗೆ 15,000 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ

ಭೂಮಿಯತ್ತ ಧಾವಿಸುವ ಕ್ಷುದ್ರಗ್ರಹಕ್ಕೆ ಬಾಹ್ಯಾಕಾಶ ನೌಕೆ ಅಪ್ಪಳಿಸಿ ಅದರ ವೇಗವನ್ನು ಕುಗ್ಗಿಸಿ ಪಥವನ್ನು ಬದಲಾಯಿಸುವ ಪ್ರಯೋಗ ಇದಾಗಿದೆ. ‘ಡಿಮೋರ್ಫೋಸ್ ಕ್ಷುದ್ರಗ್ರಹ: ನಿನ್ನತ್ತ ನಾವು ಬರುತ್ತಿದ್ದೇವೆ’ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ನಾಸಾ ಟ್ವೀಟ್ ಮಾಡಿದ್ದು ಇದರ ಜೊತೆಗೆ, ಬಾಹ್ಯಾಕಾಶ ನೌಕೆಯ ಉಡ್ಡಯನದ ಫೋಟೋವನ್ನೂ ಟ್ವೀಟ್ ಮಾಡಿದೆ. ಡಿಮೋರ್ಫೋಸ್ ಕ್ಷುದ್ರಗ್ರಹವನ್ನು 2003ರಲ್ಲಿ ಪತ್ತೆಹಚ್ಚಲಾಗಿದೆ.

ಸುಮಾರು 525 ಅಡಿ ಅಗಲವಿರುವ ಈ ಕ್ಷುದ್ರಗ್ರಹದ ಪಥವನ್ನು ಸ್ವಲ್ಪ ಬದಲಿಸುವ ಪ್ರಯೋಗ ಇದಾಗಿದೆ. ಇದರ ಜೊತೆಗೆ, 2,500 ಅಡಿ ಅಗಲದ ಡಿಡಿಮೋಸ್ ಎಂಬ ಇನ್ನೊಂದು ಕ್ಷುದ್ರಗ್ರಹವೂ ಇದ್ದು, ಇವೆರಡೂ ಜತೆಯಾಗಿ ಸೂರ್ಯನ ಸುತ್ತ ತಿರುಗುತ್ತಿವೆ. 2022ರ ಸೆಪ್ಟಂಬರ್‌ನಲ್ಲಿ ಈ ಕ್ಷುದ್ರಗ್ರಹ ಭೂಮಿಗೆ ಅತೀ ಸಮೀಪ(6.8 ಮಿಲಿಯನ್ ಮೈಲು) ಬಂದಾಗ ಈ ಪ್ರಯೋಗ ನಡೆಸಲಾಗುತ್ತದೆ. ಮುಂದಿನ ದಿನದಲ್ಲಿ ಕ್ಷುದ್ರಗ್ರಹದಿಂದ ಅಪಾಯದ ಸಾಧ್ಯತೆ ಎದುರಾದಾಗ ಅದನ್ನು ನಿವಾರಿಸಲು ಈ ತಂತ್ರಜ್ಞಾನದಿಂದ ಸಾಧ್ಯವೇ ಎಂಬುದನ್ನು ಈ ಪರೀಕ್ಷೆಯ ಮೂಲಕ ದೃಢಪಡಿಸಲಾಗುವುದು. ತಕ್ಷಣದಲ್ಲಿ ಭೂಮಿಗೆ ಕ್ಷುದ್ರಗ್ರಹದ ಬೆದರಿಕೆಯಿಲ್ಲ ಎಂದು ನಾಸಾ ಸ್ಪಷ್ಟಪಡಿಸಿದೆ. ಸುಮಾರು 330 ಮಿಲಿಯನ್ ಡಾಲರ್ ವೆಚ್ಚದ ಯೋಜನೆ ಇದಾಗಿದ್ದು, ಬೆದರಿಕೆ ಎದುರಾದಾಗ ಅದನ್ನು ನಿವಾರಿಸುವ ಬಗೆಯನ್ನು ತಿಳಿದುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ನಾಸಾದ ಹಿರಿಯ ವಿಜ್ಞಾನಿ ಥಾಮಸ್ ಝುಬುರ್ಚನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News