ಲಂಡನ್‌: ಸಿಖ್ ಬಾಲಕನ ಇರಿದು ಹತ್ಯೆ

Update: 2021-11-26 02:04 GMT

ಲಂಡನ್: ಪಶ್ಚಿಮ ಲಂಡನ್ ಬೀದಿಯಲ್ಲಿ 16 ವರ್ಷ ವಯಸ್ಸಿನ ಸಿಖ್ ಯುವಕನನ್ನು ಇರಿದು ಹತ್ಯೆ ಮಾಡಿದ ಪ್ರಕರಣದ ಸಂಬಂಧ ಸ್ಕಾಟ್ಲಾಂಡ್ ಯಾರ್ಡ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಮೃತ ವ್ಯಕ್ತಿಯನ್ನು ಅಶ್ಮಿತ್ ಸಿಂಗ್ ಎಂದು ಗುರುತಿಸಲಾಗಿದೆ.

ಬುಧವಾರ ರಾತ್ರಿ ಸೌತ್‌ಹಾಲ್‌ನ ರಲೀಗ್ ರಸ್ತೆಯಲ್ಲಿ ಇರಿತದ ಮಾಹಿತಿ ಸಿಕ್ಕಿದ ತಕ್ಷಣ ಲಂಡನ್ ಆ್ಯಂಬುಲೆನ್ಸ್ ಸರ್ವೀಸಸ್‌ನ ಅರೆವೈದ್ಯಕೀಯ ಸಿಬ್ಬಂದಿಯ ಜತೆ ಸ್ಥಳಕ್ಕೆ ಧಾವಿಸಿದ್ದಾಗಿ ಮೆಟ್ರೋಪಾಲಿಟನ್ ಪೊಲೀಸರು ಹೇಳಿದ್ದಾರೆ.

"ತುರ್ತು ಸೇವಾ ಸಿಬ್ಬಂದಿ ಪ್ರಯತ್ನಗಳ ಹೊರತಾಗಿಯೂ ಬಾಲಕ ಸ್ಥಳದಲ್ಲೇ ಮೃತಪಟ್ಟ. ಅವರ ತಕ್ಷಣದ ಸಂಬಂಧಿಗಳಿಗೆ ಮಾಹಿತಿ ನೀಡಲಾಗಿದ್ದು, ಅಧಿಕೃತ ಗುರುತಿಸುವಿಕೆಗೆ ಕಾಯಲಾಗುತ್ತಿದೆ" ಎಂದು ಎಂಇಟಿ ಪೊಲೀಸರು ವಿವರಿಸಿದ್ದಾರೆ.

ವಿಶೇಷ ಅಪರಾಧಗಳ ತಂಡದ ಹೊಮಿಸೈಡ್ ಗೂಢಚರರಿಗೆ ಮಾಹಿತಿ ನೀಡಲಾಗಿದ್ದು, ಇದುವರೆಗೆ ಯಾರನ್ನೂ ಬಂಧಿಸಿಲ್ಲ. ವಿಚಾರಣೆ ನಡೆಯುತ್ತಿದೆ. ಈ ಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಪೊಲೀಸರ ಜತೆ ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಉದ್ಯಾನವನದ ಸಮೀಪ ಜೀವನ್ಮರಣ ಸ್ಥಿತಿಯಲ್ಲಿದ್ದ ಬಾಲಕನ ಪ್ರಾಣರಕ್ಷಣೆಗೆ ಪೊಲೀಸರು ಪ್ರಯತ್ನ ನಡೆಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಾಲಕ ಹೊಂದಿದ್ದ ಕೈಚೀಲ ಕಸಿಯುವ ಸಲುವಾಗಿ ಇರಿದಿರಬೇಕು ಎಂದು ಸೇಹಿತರ ಹೇಳಿಕೆಯನ್ನು ಉಲ್ಲೇಖಿಸಿ ಇವಿನಿಂಗ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.

ಅಂಗವಿಕಲ ತಾಯಿಯ ಅರೈಕೆ ಮಾಡುವ ಸಲುವಾಗಿ ಈ ಬಾಲಕ ಅರೆಕಾಲಿಕ ಉದ್ಯೋಗ ಮಾಡುತ್ತಿದ್ದ. ಈ ವರ್ಷ ಲಂಡನ್‌ನ ಬೀದಿಯಲ್ಲಿ ಇರಿದು ಹತ್ಯೆ ಮಾಡಿದ 28ನೆ ಪ್ರಕರಣ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News