'ನಿರೀಕ್ಷಿತ ಭವಿಷ್ಯಕ್ಕಾಗಿ' ಎಲ್ಲ ಮಾದರಿ ಕ್ರಿಕೆಟ್ ನಿಂದ ವಿರಾಮ ಪಡೆದ ಆಸ್ಟ್ರೇಲಿಯದ ಟಿಮ್ ಪೈನ್

Update: 2021-11-26 06:02 GMT

ಮೆಲ್ಬೋರ್ನ್: ಆಸ್ಟ್ರೇಲಿಯದ ವಿಕೆಟ್ ಕೀಪರ್-ಬ್ಯಾಟರ್ ಟಿಮ್ ಪೈನ್ ಅವರು "ನಿರೀಕ್ಷಿತ ಭವಿಷ್ಯಕ್ಕಾಗಿ" ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ವಿರಾಮ ಪಡೆಯಲಿದ್ದಾರೆ ಎಂದು ಕ್ರಿಕೆಟ್ ಟ್ಯಾಸ್ಮೆನಿಯಾ ಶುಕ್ರವಾರ ಹೇಳಿದೆ,

ಸೆಕ್ಸ್‌ಟಿಂಗ್ ಹಗರಣವು ಪೈನ್ ಇತ್ತೀಚೆಗೆ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡಲು ಕಾರಣವಾಗಿತ್ತು

ಡಿಸೆಂಬರ್ 8 ರಂದು ಬ್ರಿಸ್ಬೇನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಆ್ಯಶಸ್ ಸರಣಿ ಮೊದಲ ಟೆಸ್ಟ್ ನಲ್ಲಿ ಪೈನ್ ಭಾಗವಹಿಸಬೇಕೆ ಎಂಬ ಬಗ್ಗೆ ಆಸ್ಟ್ರೇಲಿಯಾದಲ್ಲಿ ಚರ್ಚೆ ಆರಂಭವಾಗಿರುವಾಗ ಅವರು ಈ ಹಠಾತ್ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

"ಕಳೆದ 24 ಗಂಟೆಗಳ ಚರ್ಚೆಗಳ ನಂತರ ಟಿಮ್ ಪೈನ್ ಅವರು ನಿರೀಕ್ಷಿತ ಭವಿಷ್ಯಕ್ಕಾಗಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಗೈರುಹಾಜರಾಗುವೆ ಎಂದು  ಕ್ರಿಕೆಟ್ ತಾಸ್ಮೇನಿಯಾಗೆ ತಿಳಿಸಿದರು”ಎಂದು ಅದು ಹೇಳಿಕೆಯಲ್ಲಿ ತಿಳಿಸಲಾಗಿದೆ.

2017 ರಲ್ಲಿ ಮಹಿಳಾ ಸಹೋದ್ಯೋಗಿಯೊಂದಿಗೆ ಲೈಂಗಿಕ ಪಠ್ಯ ಸಂದೇಶಗಳ ವಿನಿಮಯ ಮಾಡಿರುವುದು ಸಾರ್ವಜನಿಕವಾಗಿ ಬಹಿರಂಗವಾದ ಬಳಿಕ ಟ್ಯಾಸ್ಮೆನಿಯನ್ ಕೀಪರ್ ಒಂದು ವಾರದ ಹಿಂದೆ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದ್ದರು.

ಆದರೆ ನಾಯಕತ್ವದಿಂದ ಕೆಳಗಿಳಿಯುವಾಗ, ಪೈನ್ ಅವರು ಆಸ್ಟ್ರೇಲಿಯನ್ ಟೆಸ್ಟ್ ತಂಡದ 'ಬದ್ಧ ಸದಸ್ಯರಾಗಿ' ಉಳಿಯಲು ಬಯಸಿದ್ದರು ಹಾಗೂ  ಆ್ಯಶಸ್ ಪ್ರವಾಸವನ್ನು ಎದುರು ನೋಡುತ್ತಿರುವುದಾಗಿ ಹೇಳಿದ್ದರು. ಬ್ರಿಸ್ಬೇನ್‌ನಲ್ಲಿನ ಆರಂಭಿಕ ಆ್ಯಶಸ್ ಪಂದ್ಯಕ್ಕಾಗಿ ಅವರನ್ನು ತಂಡದಲ್ಲಿ ಇರಿಸಿಕೊಳ್ಳಲು ಬೆಂಬಲ ವ್ಯಕ್ತವಾಗಿತ್ತು.

ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಮಾರ್ಕಸ್ ಹ್ಯಾರಿಸ್ ಬುಧವಾರವಷ್ಟೇ ಪೈನ್ ಅವರಿಗೆ ಆಸ್ಟ್ರೇಲಿಯಾ ತಂಡದ ಸಂಪೂರ್ಣ ಬೆಂಬಲವಿದೆ ಹಾಗೂ  ಮೊದಲ ಟೆಸ್ಟ್‌ಗೆ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಅವರು ಅರ್ಹರಾಗಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News