ಬೆಂಗಳೂರಿನ ಹಲವೆಡೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವ

Update: 2021-11-26 14:05 GMT

ಬೆಂಗಳೂರು: ರಾಜ್ಯ ರಾಜಧಾನಿಯ ಹಲವೆಡೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ಜನರು ಆತಂಕಗೊಂಡಿರುವ ಬಗ್ಗೆ ವರದಿ ಆಗಿದೆ. 

ರಾಜರಾಜೇಶ್ವರಿ ನಗರ, ಕೆಂಗೇರಿ, ಕಗ್ಗಲಿಪುರ ಸೇರಿದಂತೆ ನಗರದ ಹಲವೆಡೆ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ತಿಳಿದು ಬಂದಿದೆ. 

ರಾಜ್ಯದ ಹಲವೆಡೆ ಕಂಪಿಸಿದ ಭೂಮಿ

ಬೆಂಗಳೂರು, ಮಂಡ್ಯ, ರಾಮನಗರ ಸೇರಿ ಹಲವು ಕಡೆ ಭಾರಿ ಶಬ್ದದೊಂದಿಗೆ ಭೂಕಂಪನ ಸಂಭವಿಸಿದ್ದು, ಜನರು ಬೆಚ್ಚಿ ಬೀಳುವಂತಾಗಿದೆ. ಬಾಂಬ್ ಸ್ಫೋಟಿಸಿದ ರೀತಿ ಕೇಳಿಬಂದ ಭಾರೀ ಶಬ್ದಕ್ಕೆ ಭೂಮಿ ಕಂಪಿಸಿದ ಅನುಭವವಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ, ಕೆಂಗೇರಿ ಕಗ್ಗಲಿಪುರ, ಹೆಮ್ಮಿಗೆಪುರ ಸೇರಿ ದಕ್ಷಿಣ ಬೆಂಗಳೂರಿನ ಹಲವು ಭಾಗಗಳಲ್ಲಿ ಭೂಕಂಪನದ ಅನುಭವ ಆಗಿದೆ. 

ಜೊತೆಗೆ ಮಂಡ್ಯ ರಾಮನಗರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭೂ ಕಂಪನದ ಅನುಭವಾಗಿದ್ದು ಜನರು ಆತಂಕಗೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಮಂಡ್ಯ ನಗರ ಸೇರಿದಂತೆ ಹಲವೆಡೆ ಭೂ ಕಂಪನದ ಅನುಭವವಾಗುತ್ತಿದ್ದಂತೆ ಜನರು ಮನೆಯಿಂದ ಆತಂಕದಿಂದ ಹೊರಬಂದ ಪರಿಸ್ಥಿತಿ ನಿರ್ಮಾಣವಾಗಿದೆ. 

ಶುಕ್ರವಾರ ಬೆಳಗ್ಗೆ ಬಾರಿ ಶಬ್ದ ಕೇಳಿ ಬಂದಿದ್ದು ಜನರು ಗಾಬರಿಯಿಂದ ವಿಚಾರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹತ್ತು ನಿಮಿಷಗಳ ಅಂತರದಲ್ಲಿ ಎರಡನೆ ಬಾರಿ ಶಬ್ದ ಕೇಳಿಸಿದೆ. ಅಲ್ಲದೆ, ಬೆಂಗಳೂರಿನಲ್ಲಿ ಬೆಳಗ್ಗೆ 11.50ರಿಂದ ಮಧ್ಯಾಹ್ನ 12.15ರ ಅವಧಿಯಲ್ಲಿ ಭೂಕಂಪನ, ಸಂಭವನೀಯ ಭೂಕಂಪನ ಸಂಕೇತಗಳು ಹೊಮ್ಮಿವೆಯೇ ಎಂಬುದನ್ನು ವಿಶ್ಲೇಷಕರು ಪರಿಶೀಲಿಸಿದ್ದಾರೆ.

ಆದರೆ, ಅಂಥ ಯಾವುದೇ ಸಂಕೇತಗಳು ಕಂಡುಬಂದಿಲ್ಲ ಎಂದು ಕೆಎಸ್‍ಎನ್‍ಡಿಎಂಸಿ ಸ್ಪಷ್ಟಪಡಿಸಿದೆ. ರಾಜ್ಯದ ವಿಜಯಪುರ ಕಲಬುರಗಿ ಸೇರಿ ಹಲವು ಭಾಗಗಳಲ್ಲಿ ಕಳೆದ 1 ತಿಂಗಳಿನಿಂದ ಹಲವು ಬಾರಿ ಭೂಮಿ ಕಂಪಿಸಿದ್ದು ಜನರ ಸಮಸ್ಯೆಗೆ ಸಿಲುಕುವಂತಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News