ಪ್ರವಾದಿ ಬಗ್ಗೆ ಅವಹೇಳನ ಆರೋಪ: ಸೈಯದ್ ವಸೀಮ್ ರಿಝ್ವಿ ವಿರುದ್ಧ ಮುಹಮ್ಮದ್ ಉಬೇದುಲ್ಲಾ ಶರೀಫ್ ದೂರು

Update: 2021-11-26 13:14 GMT

ಬೆಂಗಳೂರು, ನ.26: ಉತ್ತರಪ್ರದೇಶದ ಶಿಯಾ ವಕ್ಫ್ ಬೋರ್ಡ್ ನ ಮಾಜಿ ಅಧ್ಯಕ್ಷ ಸೈಯದ್ ವಸೀಮ್ ರಿಝ್ವಿ ನ.4ರಂದು ಬಿಡುಗಡೆಗೊಳಿಸಿರುವ ತಮ್ಮ ಪುಸ್ತಕ ‘ಮುಹಮ್ಮದ್’ನಲ್ಲಿ ಪ್ರವಾದಿ ಮುಹಮ್ಮದ್(ಸ) ಅವರ ಬಗ್ಗೆ ಆಕ್ಷೇಪಾರ್ಹ ಹಾಗೂ ಅವರ ತೇಜೋವಧೆ ಮಾಡುವಂತಹ ಪದಗಳನ್ನು ಬಳಸಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 153 ಎ, 153 ಬಿ, 295 ಎ, 504, 505 ಹಾಗೂ ಇತರ ಸಂಬಂಧಪಟ್ಟ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಡೈಲಿ ಪಾಸ್ಬಾನ್ ಉರ್ದು ಪತ್ರಿಕೆಯ ಪ್ರಧಾನ ಸಂಪಾದಕ ಮುಹಮ್ಮದ್ ಉಬೇದುಲ್ಲಾ ಶರೀಫ್ ಆಗ್ರಹಿಸಿದ್ದಾರೆ.

ಈ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ದೂರು ಸಲ್ಲಿಸಿರುವ ಅವರು, ಪ್ರವಾದಿ ಮುಹಮ್ಮದ್(ಸ) ಅವರು ವಿಶ್ವದ್ಯಾದ್ಯಂತ ಇರುವ ಮುಸ್ಲಿಮರಲ್ಲಿ ಅತೀ ಹೆಚ್ಚು ಗೌರವಿಸಲ್ಪಡುವವರು. ಜೊತೆಗೆ ಮುಸ್ಲಿಮೇತರ ಸಮುದಾಯದವರು ಪ್ರವಾದಿಯನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಈ ಪುಸ್ತಕದ ಲೇಖಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇವಲ ಭಾರತದಷ್ಟೇ ಅಲ್ಲ, ಹೊರದೇಶಗಳಿಂದಲೂ ಬೇಡಿಕೆ ಕೇಳಿ ಬರುತ್ತಿದೆ ಎಂದು ತಿಳಿಸಿದ್ದಾರೆ.

ಸುಳ್ಳು ಆಪಾದನೆಗಳ ಮೂಲಕ ಮುಸ್ಲಿಮ್ ಸಮುದಾಯದ ಭಾವನೆಗಳಿಗೆ ಘಾಸಿಗೊಳಿಸಬೇಕು ಹಾಗೂ ಪ್ರವಾದಿಯ ವ್ಯಕ್ತಿತ್ವಕ್ಕೆ ಅಗೌರವ ತರುವ ಉದ್ದೇಶದಿಂದಲೆ ಈ ಪುಸ್ತಕವನ್ನು ಬರೆಯಲಾಗಿದೆ. ಅಲ್ಲದೆ, ಹಿಂದುಗಳ ಮನಸ್ಸಿನಲ್ಲಿ ಮುಸ್ಲಿಮರ ಬಗ್ಗೆ ದ್ವೇಷ ಬಿತ್ತುವಂತಹ ಭಾಷೆಯ ಪ್ರಯೋಗ ಮಾಡಲಾಗಿದೆ. ಈ ಪುಸ್ತಕದಿಂದ ನಮ್ಮ ದೇಶದಲ್ಲಿನ ಕೋಮಸಾಮರಸ್ಯ ಹಾಗೂ ಶಾಂತಿ ಕದಡುವ ಸಾಧ್ಯತೆಗಳು ಹೆಚ್ಚಿವೆ ಎಂದು ಅವರು ಹೇಳಿದ್ದಾರೆ.

ಈ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿಯೂ ಪುಸ್ತಕದ ಲೇಖಕ ಉದ್ದೇಶಪೂರ್ವಕವಾಗಿ ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಪದಗಳನ್ನು ಬಳಸಿ, ಅವರ ಭಾಷಣದ ರೆಕಾರ್ಡಿಂಗ್ ಅನ್ನು ಮುಸ್ಲಿಮ್ ವೀಕ್ಷಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದಲೆ ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಮಾಡಿಸಿದ್ದಾರೆ. ಅಲ್ಲದೆ, ಮುಸ್ಲಿಮೇತರರ ಮನಸ್ಸಿನಲ್ಲಿ ದ್ವೇಷದ ಬೀಜ ಬಿತ್ತನೆ ಮಾಡುವ ಕೆಲಸವನ್ನು ಮಾಡಿದ್ದಾರೆ ಎಂದು ಉಬೇದುಲ್ಲಾ ಶರೀಫ್ ದೂರಿದ್ದಾರೆ.

ವಸೀಮ್ ರಿಝ್ವಿಯ ಈ ಕೆಲಸ ಹಾಗೂ ಹೇಳಿಕೆಯಿಂದಾಗಿ ಬಹು ಸಂಸ್ಕೃತಿಯ ನಮ್ಮ ದೇಶದ ಸೌಹಾರ್ದತೆಗೆ ಧಕ್ಕೆಯಾಗಿದೆ. ಮುಸ್ಲಿಮ್ ಸಮುದಾಯದ ಎಲ್ಲ ಬುದ್ಧೀಜೀವಿಗಳು, ಸಮುದಾಯದ ನಾಯಕರು, ಜಾತ್ಯತೀತ ಮನಸ್ಥಿತಿಯ ನಾಯಕರು ಕಳೆದ ವರ್ಷ ಇದೇ ರೀತಿಯ ಬೆಳವಣಿಗೆಯಿಂದ ಬೆಂಗಳೂರಿನ ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಸಂಭವಿಸಿದ ಘಟನೆಯ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆದುದರಿಂದ, ವಸೀಮ್ ರಿಝ್ವಿ ವಿರುದ್ಧ ಎಫ್‌ಐಆರ್ ದಾಖಲಿಸಿ, ಆತನನ್ನು ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಅಲ್ಲದೆ, ವಿವಾದಿತ ಈ ಪುಸ್ತಕವನ್ನು ನಿಷೇಧಿಸಬೇಕು. ಜೊತೆಗೆ ಸಾಮಾಜಿಕ ಜಾಲತಾಣಗಳ ಸಂಸ್ಥೆಗಳನ್ನು ಸಂಪರ್ಕಿಸಿ ಈ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿನ ಭಾಷಣದ ವಿಡಿಯೋವನ್ನು ತೆಗೆದು ಹಾಕಿಸಬೇಕು ಎಂದು ಉಬೇದುಲ್ಲಾ ಶರೀಫ್ ದೂರಿನಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News