ಕೋವಿಡ್ ಕಾಲದ ಶಿಕ್ಷಣದ ಸವಾಲುಗಳು

Update: 2021-11-28 11:22 GMT

ಕೋವಿಡ್ ಸಾಂಕ್ರಾಮಿಕವು ವಿಶ್ವಕ್ಕೆ ಅನೇಕ ರೀತಿಯ ಸಂಕಷ್ಟಗಳನ್ನು ತಂದೊಡ್ಡಿದೆ. ಜಗತ್ತಿನಲ್ಲಿ ಈ ಮೊದಲೇ ಇದ್ದಂತಹ ಅಸಮಾನತೆ ಹಾಗೂ ತರತಮಗಳು ಇನ್ನಷ್ಟು ಆಳವಾಗಲು ಕೋವಿಡ್ ಸಾಂಕ್ರಾಮಿಕ ನಿರ್ಮಿಸಿದ ಸನ್ನಿವೇಶವು ಕಾರಣವಾಗಿದೆ. ಬಡತನ ಹಾಗೂ ಲಿಂಗ ಅಸಮಾನತೆಗಳು ಮತ್ತಷ್ಟು ಹೆಚ್ಚಳವಾಗಿವೆ. ಜನರ ಆದಾಯದಲ್ಲಿ ತೀವ್ರ ರೀತಿಯ ಕುಸಿತವಾಗಿವೆ. ಇದರ ಜೊತೆ ಮಳೆ, ನೆರೆ ಮುಂತಾದ ಪ್ರಾಕೃತಿಕ ವಿಕೋಪಗಳು ಜನರ ಬದುಕನ್ನು ಮತ್ತಷ್ಟು ದಾರುಣಗೊಳಿಸಿವೆ. ಬಾಲ್ಯ ವಿವಾಹ, ಬಾಲಕಾರ್ಮಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆಳವಾಗಿ ಕಾಣದಂತೆ ಹುದುಗಿದ್ದ ಅಸಮಾನತೆಗಳು ಹಲವು ಪಟ್ಟು ತೀವ್ರಗೊಂಡು ಕಣ್ಣಿಗೆ ತೋರುತ್ತಿವೆ. ಅನೇಕ ಕ್ಷೇತ್ರಗಳಲ್ಲಿ ವಿಶ್ವ ಹಾಗೂ ದೇಶವು ಸಾಧಿಸಿದ ಹಲವು ದಶಕಗಳ ಪ್ರಗತಿಯನ್ನು ಕೋವಿಡ್ ತಂದಿರುವ ಸಂಕಷ್ಟವು ಮಸುಕಾಗುವಂತೆ ಮಾಡಿದೆ.

ಶಿಕ್ಷಣ ಕ್ಷೇತ್ರದಲ್ಲಿನ ಸಂಕಷ್ಟ ಹಾಗೂ ಸವಾಲುಗಳು ದ್ವಿಗುಣಗೊಂಡಿವೆ. ಕೋವಿಡ್ ಪೂರ್ವದಲ್ಲಿ ಜಗತ್ತಿನಲ್ಲಿ 25.80 ಕೋಟಿ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು. ತೀವ್ರ ರೀತಿಯ ಪ್ರಯತ್ನಗಳನ್ನು ತೆಗೆದುಕೊಂಡರೂ 2030ರ ವೇಳೆಗೆ ವಿಶ್ವದಲ್ಲಿ 6 ರಿಂದ 17 ವಯೋಮಾನದ ಆರು ಮಕ್ಕಳಲ್ಲಿ ಒಂದು ಮಗು ಶಾಲೆಯಿಂದ ಹೊರಗುಳಿದಿರುತ್ತದೆಂದು ಅಂದಾಜಿಸಲಾಗಿದೆ. 2017-18ರ ಎನ್.ಎಸ್.ಎಸ್.ಒ. (National Sample Survey Organisation) ನಡೆಸಿದ ಮನೆ ಮನೆ ಸಮೀಕ್ಷೆಯಂತೆ ದೇಶದಲ್ಲಿ 6ರಿಂದ 17 ವಯೋಮಾನದ 3.22 ಕೋಟಿ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಸಂಖ್ಯೆಯು ಕೋವಿಡ್ ನಿರ್ಮಿಸಿದ ಬಿಕ್ಕಟ್ಟಿನಿಂದ ದ್ವಿಗುಣವಾಗಿರಬಹುದೆಂದು ಅಂದಾಜಿಸಲಾಗಿದೆ. 6 ರಿಂದ 8ನೇ ತರಗತಿಗಳವರೆಗೆ ಒಟ್ಟು ದಾಖಲಾತಿ ದರವು ಶೇ.90ರಷ್ಟಿದ್ದರೆ, 9-10ನೇ ತರಗತಿಗಳಿಗೆ ಕೇವಲ ಶೇ.79.3 ಹಾಗೂ 11-12ನೇ ತರಗತಿಗಳವರೆಗೆ ಶೇ.56.5 ಇದೆ. ಈ ಸಂಖ್ಯೆಗಳು 5, 8 ಹಾಗೂ 10ನೇ ತರಗತಿಗಳಲ್ಲಿ ಮಕ್ಕಳು ಶಾಲೆಯನ್ನು ಬಿಡುವ ವಿದ್ಯಮಾನವನ್ನು ಪುಷ್ಟೀಕರಿಸುತ್ತದೆ. ಈ ಅಂಕಿ-ಸಂಖ್ಯೆಗಳು ಕೋವಿಡ್ ಕಾರಣದಿಂದ ಇನ್ನಷ್ಟು ಹೆಚ್ಚಳವಾಗಿವೆ.

ಗುಣಾತ್ಮಕ ಶಿಕ್ಷಣದ ವಿಷಯದಲ್ಲಿಯೂ ಅಸಮಾನತೆಗಳಿರು ವುದನ್ನು ಗಮನಿಸಬಹುದು. ದೇಶದಲ್ಲಿ 5 ಕೋಟಿಗೂ ಅಧಿಕ ಮಕ್ಕಳು ಮೂಲಭೂತ ಸಾಕ್ಷರತೆ ಮತ್ತು ಅಂಕಿ-ಅಂಶಗಳ ಜ್ಞಾನದ ಕೌಶಲಗಳನ್ನು ಕರಗತ ಮಾಡಿಕೊಂಡಿಲ್ಲ. ಕೋವಿಡ್ ಬಿಕ್ಕಟ್ಟು ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಿರುವುದರಲ್ಲಿ ಸಂದೇಹವಿಲ್ಲ. ವಿಶ್ವದ ಶೇ.55ರಷ್ಟು ಪ್ರೌಢ ಶಾಲಾ ಮಕ್ಕಳು ಓದಿನಲ್ಲಿ ಹಾಗೂ ಶೇ.60ರಷ್ಟು ಮಕ್ಕಳು ಲೆಕ್ಕಾಚಾರದ ಕೌಶಲಗಳ ಕುರಿತಾದ ಪ್ರೌಢಿಮೆಯನ್ನು ಸಂಪಾದಿಸಿಲ್ಲ ಎಂಬುದು ಪರಿಸ್ಥಿತಿಯ ಕೈಗನ್ನಡಿ ಎನ್ನಬಹುದು.

ಕೋವಿಡ್ ಸನ್ನಿವೇಶದಲ್ಲಿ ಶಿಕ್ಷಣದ ಮುಂದುವರಿಕೆಗೆ ಅತ್ಯಗತ್ಯವೆನಿಸಿದ ತಾಂತ್ರಿಕ ಸಾಧನಗಳ ಲಭ್ಯತೆಯಲ್ಲಿಯೂ ತೀವ್ರ ಅಸಮಾನತೆಗಳಿವೆ. ವಿಶ್ವದ ಶೇ.50ರಷ್ಟು ಜನರು ಮಾತ್ರ ಕಂಪ್ಯೂಟರ್‌ಗಳು ಹಾಗೂ ಶೇ.57ರಷ್ಟು ಜನರು ತಮ್ಮ ಮನೆಗಳಲ್ಲಿ ಅಂತರ್ಜಾಲ ಸೌಕರ್ಯವನ್ನು ಹೊಂದಿದ್ದಾರೆ. ಆದರೆ ಭಾರತದಲ್ಲಿ ಶೇ.11ರಷ್ಟು ಜನ ಮಾತ್ರ ಕಂಪ್ಯೂಟರ್‌ಗಳನ್ನು ಹಾಗೂ ಶೇ.24ರಷ್ಟು ಜನ ಸ್ಮಾರ್ಟ್‌ಫೋನ್ ಅನ್ನು ಹೊಂದಿದ್ದಾರೆ. ಭಾರತದಲ್ಲಿ ಶೇ.45ರಷ್ಟು ಜನ ಅಂತರ್ಜಾಲ ಸೌಕರ್ಯ ಹೊಂದಿದ್ದಾರೆ ಎಂದರೂ ಜನರ ಆದಾಯದಲ್ಲಿನ ಏರಿಳಿತದಂತೆ ಈ ಸಂಖ್ಯೆಯಲ್ಲಿ ಇಳಿಕೆಯಾಗುವುದನ್ನು ಅಲ್ಲಗಳೆಯುವಂತಿಲ್ಲ. ದೇಶದಲ್ಲಿರುವ 26 ಲಕ್ಷ ಪ್ರೌಢ ಶಾಲೆಗಳಲ್ಲಿ ಮೂರನೇ ಒಂದು ಭಾಗದಷ್ಟು ಶಾಲೆಗಳಲ್ಲಿ ಮಾತ್ರ ಕಾರ್ಯನಿರ್ವಹಿಸುವ ಕಂಪ್ಯೂಟರ್ ಹೊಂದಿದ ಪ್ರಯೋಗಾಲಯಗಳಿವೆ. ರಾಜ್ಯದ 4,687 ಸರಕಾರಿ ಪ್ರೌಢಶಾಲೆಗಳಲ್ಲಿ 3,851 ಶಾಲೆಗಳಲ್ಲಿ ಕಂಪ್ಯೂಟರ್ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ.

ಶಿಕ್ಷಣದ ಖಾಸಗೀಕರಣವೂ ಇನ್ನೊಂದು ರೀತಿಯ ಅಸಮಾನತೆಗಳಿಗೆ ದಾರಿ ಮಾಡಿಕೊಡುತ್ತಿದೆ ಎನ್ನಬಹುದು. ಸಾಮಾನ್ಯ ಜನರಿಗೆ ಖಾಸಗಿ ಶಾಲೆಗಳ ಕಡೆ ಸೆಳೆತ ಹೆಚ್ಚಿದ್ದು, ಅವರ ದುಡಿಮೆಯ ಹೆಚ್ಚಿನ ಪಾಲು ಮಕ್ಕಳ ಶಾಲಾ ಶುಲ್ಕಕ್ಕೆ ವೆಚ್ಚವಾಗುತ್ತದೆ. ಕೋವಿಡ್ ಕಾರಣದಿಂದ ಉಂಟಾದ ಆರ್ಥಿಕ ಸಂಕಷ್ಟದ ಕಾರಣ ಈ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಮಕ್ಕಳು ಖಾಸಗಿ ಶಾಲೆಗಳಿಂದ ಸರಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಸರಕಾರಿ ಶಾಲೆಗಳ ಬ್ರಾಂಡ್ ಇಮೇಜ್ ವೃದ್ಧಿಸಿ, ಪೋಷಕರನ್ನು ಸರಕಾರಿ ಶಾಲೆಗಳ ಕಡೆ ಸೆಳೆಯುವುದು ಹಾಗೂ ಶಾಲೆಗಳಲ್ಲಿ ಪ್ರಸ್ತುತ ಇರುವ ಮಕ್ಕಳನ್ನು ಉಳಿಸಿಕೊಳ್ಳದಿದ್ದಲ್ಲಿ ಈಗ ಖಾಸಗಿ ಶಾಲೆಗಳಿಂದ ಸರಕಾರಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಿರುವ ಪೋಷಕರ ಆರ್ಥಿಕ ಸ್ಥಿತಿ ಉತ್ತಮಗೊಂಡಂತೆ ಮತ್ತೆ ಖಾಸಗಿ ಶಾಲೆಗಳತ್ತ ಧಾವಿಸುವುದನ್ನು ಅಲ್ಲಗಳೆಯುವಂತಿಲ್ಲ.

ಶಿಕ್ಷಣ ಕ್ಷೇತ್ರದಲ್ಲಿನ ಎಲ್ಲಾ ಅಸಮಾನತೆಗಳನ್ನು ಸರಿಪಡಿಸಲು ಶಿಕ್ಷಣದಲ್ಲಿ ಹೂಡಿಕೆಯ ಪ್ರಮಾಣ ಹೆಚ್ಚಾಗಬೇಕಿದೆ. ರಾಷ್ಟ್ರೀಯ ಶಿಕ್ಷಣ ನೀತಿ-1968ರ ಶಿಫಾರಸಿನಂತೆ ಒಟ್ಟು ದೇಶೀಯ ಉತ್ಪಾದನೆಯ (ಜಿಡಿಪಿ) ಶೇ.6ರಷ್ಟನ್ನು ಶಿಕ್ಷಣಕ್ಕಾಗಿ ವೆಚ್ಚ ಮಾಡಬೇಕಿತ್ತು. ಈ ಅಂಶವನ್ನು ರಾಷ್ಟ್ರೀಯ ಶಿಕ್ಷಣ ನೀತಿ-1986 ಹಾಗೂ 1992ರ ಪ್ರೋಗ್ರಾಮ್ ಆಫ್ ಆ್ಯಕ್ಷನ್‌ನಲ್ಲಿಯೂ ಪುನರುಚ್ಚರಿಸಲಾಗಿದೆ. ಆದರೆ 2017-18ನೇ ಸಾಲಿನ ಆಯವ್ಯಯದ ವಿಶ್ಲೇಷಣಾ ವರದಿಯಂತೆ ಶಿಕ್ಷಣಕ್ಕಾಗಿ ಮಾಡಿದ ವೆಚ್ಚವು ಜಿಡಿಪಿಯ ಶೇ.4.43 ಮಾತ್ರ ಇದೆ. ಇದು ಸರಕಾರವು ಮಾಡುವ ಒಟ್ಟು ವೆಚ್ಚದ ಶೇ.10ರಷ್ಟು ಮಾತ್ರ. ಆದರೆ 2019-20ನೇ ಸಾಲಿನ ಆರ್ಥಿಕ ಸಮೀಕ್ಷೆಯ ಪ್ರಕಾರ ಶಿಕ್ಷಣಕ್ಕಾಗಿ ಮಾಡಿದ ವೆಚ್ಚವು ಜಿಡಿಪಿಯ ಶೇ.3.31 ಮಾತ್ರ. ಈ ವೆಚ್ಚವು ವಿಶ್ವದ ಮುಂದುವರಿದ ಮತ್ತು ಮುಂದುವರಿಯುತ್ತಿರುವ ಇತರ ರಾಷ್ಟ್ರಗಳು ಮಾಡುತ್ತಿರುವ ವೆಚ್ಚಕ್ಕಿಂತ ತುಂಬಾ ಕಡಿಮೆ ಆಗಿದೆ.

ದೇಶದ ಒಟ್ಟು 24.80 ಕೋಟಿಗಳಷ್ಟು ಶಾಲಾ ಮಕ್ಕಳಲ್ಲಿ ಶೇ.12.89 ಕೋಟಿ (ಶೇ.52) ಮಕ್ಕಳು ಸುಮಾರು 10 ಲಕ್ಷ ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಸಾರ್ವಜನಿಕ ಶಿಕ್ಷಣಕ್ಕಾಗಿ ಮಾಡುತ್ತಿರುವ ಇಷ್ಟು ಕಡಿಮೆ ವೆಚ್ಚದ ಕಾರಣದಿಂದ ಶಿಕ್ಷಣದ ಗುಣಮಟ್ಟವು ಹಿಂದುಳಿಯಲು ಕಾರಣ ಎಂದು ತಜ್ಞರು ಅಭಿಪ್ರಾಯಿಸುತ್ತಾರೆ. ನಮ್ಮದೇ ದೇಶದ ಪುಟ್ಟ ರಾಜ್ಯವಾದ ದಿಲ್ಲಿ ಸರಕಾರವು 2021-22ನೇ ಸಾಲಿನ ಆಯವ್ಯಯದಲ್ಲಿ ಶಿಕ್ಷಣಕ್ಕಾಗಿ ರೂ.16,377 ಕೋಟಿ (ಒಟ್ಟು ವೆಚ್ಚದ ಶೇ.25 ರಷ್ಟು) ವೆಚ್ಚವನ್ನು ನಿಗದಿ ಮಾಡಿದೆ. ಸಾರ್ವಜನಿಕ ಶಿಕ್ಷಣಕ್ಕಾಗಿ ದಿಲ್ಲಿ ಸರಕಾರ ಮಾಡುವ ಹೆಚ್ಚಿನ ವೆಚ್ಚದ ಕಾರಣದಿಂದ ಅಲ್ಲಿಯ ಸರಕಾರಿ ಶಾಲೆಗಳಲ್ಲಿನ ಶೈಕ್ಷಣಿಕ ಗುಣಮಟ್ಟ ಉತ್ತಮವಾಗಿದೆ ಎಂಬ ವರದಿಗಳಿವೆ.

ಸಾರ್ವಜನಿಕ ಶಿಕ್ಷಣಕ್ಕಾಗಿ ಮಾಡುವ ವೆಚ್ಚವನ್ನು ತುರ್ತಾಗಿ ದೇಶದ ಜಿಡಿಪಿಯನ್ನು ಶೇ.6ಕ್ಕೆ ಹೆಚ್ಚಿಸುವುದರ ಕಡೆ ಕಾರ್ಯನಿರ್ವಹಿಸಲಾಗುತ್ತದೆ ಹಾಗೂ ಇದರಿಂದ ದೇಶದಲ್ಲಿ ಅತ್ಯುತ್ತಮ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ನಿರ್ಮಿಸಲು ಸಾಧ್ಯ ಎಂಬ ಶಿಫಾರಸನ್ನು ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ನೀಡಲಾಗಿದೆ. ಸಾರ್ವಜನಿಕ ಶಿಕ್ಷಣಕ್ಕಾಗಿ ಈಗ ಮಾಡಲಾಗುತ್ತಿರುವ ಹೆಚ್ಚಿನ ವೆಚ್ಚವು ಶಿಕ್ಷಕರ ವೇತನಕ್ಕೆ ಬಳಕೆಯಾಗುತ್ತಿದೆ. ಶಿಕ್ಷಕರ ವೇತನವನ್ನು ಹೊರತುಪಡಿಸಿ, ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಗುಣಾತ್ಮಕ ಶಿಕ್ಷಣಕ್ಕೆ ಸಂಬಂಧಿಸಿದ ಉಪಕ್ರಮಗಳಾದ ಶಿಕ್ಷಕರ ನೇಮಕಾತಿ, ಶಿಕ್ಷಕರ ತರಬೇತಿ, ಶಾಲೆಗಳಲ್ಲಿ ವಿಜ್ಞಾನ ಮತ್ತು ಕಂಪ್ಯೂಟರ್ ಪ್ರಯೋಗಾಲಯಗಳ ಸ್ಥಾಪನೆ, ಆಟದ ಸಾಮಗ್ರಿಗಳ ಪೂರೈಕೆ, ಉತ್ತಮ ಶಾಲಾ ಕಟ್ಟಡ ನಿರ್ಮಾಣ, ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯಗಳ ಲಭ್ಯತೆ ಇತ್ಯಾದಿಗಳ ಕಡೆ ಹೆಚ್ಚಿನ ಹೂಡಿಕೆ ಅತ್ಯವಶ್ಯವಾಗಿದೆ. ಇದೆಲ್ಲದರ ಜೊತೆ ಮಕ್ಕಳ ಕಲಿಕಾ ಗುಣಮಟ್ಟದ ಖಾತ್ರಿಗಾಗಿ ಉತ್ತಮ ಶೈಕ್ಷಣಿಕ ಬೆಂಬಲ ಹಾಗೂ ಮೇಲುಸ್ತುವಾರಿ ವ್ಯವಸ್ಥೆಗಳನ್ನು ಬಲಪಡಿಸಬೇಕಿದೆ.

ಶೈಕ್ಷಣಿಕ ನೀತಿ ನಿರೂಪಕರು, ಶಿಕ್ಷಣ ತಜ್ಞರು ಹಾಗೂ ಸ್ಥಳೀಯ ಸಮುದಾಯಗಳು ಶೈಕ್ಷಣಿಕ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಅಗತ್ಯವಾದ ನಿರ್ಧಾರ ಹಾಗೂ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಬೇಕಿದೆ. ಶಾಲಾ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರ ಪಾಲ್ಗೊಳ್ಳುವಿಕೆಯು ಶೈಕ್ಷಣಿಕ ಗುಣಮಟ್ಟದ ನಿರ್ಮಾಣದ ಹಿನ್ನೆಲೆಯಲ್ಲಿ ಅತ್ಯಂತ ಪ್ರಮುಖವಾದ ಅಂಶವಾಗಿದೆ. ಇದರ ಜೊತೆ ಶಾಲೆಯು ತಾನು ನಿರ್ವಹಿಸುವ ಪಾತ್ರಗಳನ್ನು ಚಲನಶೀಲಗೊಳಿಸುವ ಅಗತ್ಯತೆ ಇದೆ. ಶಾಲೆಯೆಂಬುದು ಬರೀ ಭೌತಿಕ ಸ್ಥಳ ಮಾತ್ರ ಆಗಿರದೆ ಅದು ವಿದ್ಯಾರ್ಥಿಗಳ ಸಾಮಾಜಿಕ ಹಾಗೂ ಸಾಮುದಾಯಿಕ ಜೀವನವನ್ನು ರೂಪಿಸುವ ಸ್ಥಳವಾಗಿ ಮಾರ್ಪಾಡಾಗಬೇಕಿದೆ. ಶಾಲೆಯನ್ನು ತನ್ನ ಔಪಚಾರಿಕ ಸ್ವರೂಪದಾಚೆ ಇನ್ನಷ್ಟು ನಮ್ಯತೆಯಿಂದ ಕಾರ್ಯನಿರ್ವಹಿಸುವಂತೆ ಮಾಡಬೇಕಿದೆ. ಸಮಾಜದ ಪರಿಸ್ಥಿತಿ ಹಾಗೂ ಸನ್ನಿವೇಶಗಳು ಹೆಚ್ಚು ಸಂಕೀರ್ಣಗೊಂಡಂತೆ ಶಾಲೆಯು ತನ್ನ ನಿರ್ದಿಷ್ಟ ವೇಳಾಪಟ್ಟಿ ಹಾಗೂ ಬಿಗಿ ಚೌಕಟ್ಟುಗಳಾಚೆ ವಿದ್ಯಾರ್ಥಿಗಳು ಹಾಗೂ ಸಮುದಾಯದ ಆಶೋತ್ತರಗಳನ್ನು ಈಡೇರಿಸುವ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಸಜ್ಜುಗೊಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಶಾಲೆಗಳು ನಿಗದಿಪಡಿಸಿದ ಪಠ್ಯಕ್ರಮ, ಪರೀಕ್ಷೆಗಳಾಚೆ ವಿದ್ಯಾರ್ಥಿಗಳ ಭವಿಷ್ಯದ ಜೀವನವನ್ನು ಕಟ್ಟುವ ನಿಟ್ಟಿನಲ್ಲಿ ತಮ್ಮ ಪಾತ್ರಗಳನ್ನು ಪುನರ್‌ವ್ಯಾಖ್ಯಾನಿಸಲು ಕೋವಿಡ್ ನಂತರದ ಕಾಲವು ಪ್ರಬಲ ಬೇಡಿಕೆಯನ್ನಿರಿಸಿದೆ.

ಕೋವಿಡ್ ಸಂದರ್ಭದಲ್ಲಿ ಶಾಲೆಗಳು ಮುಚ್ಚಿದಾಗ ದೂರಶಿಕ್ಷಣವನ್ನು ತಾಂತ್ರಿಕ ಸಾಧನಗಳ ಮೂಲಕ ಕಲಿಕೆಯ ನಿರಂತರತೆ ಕಾಯ್ದುಕೊಳ್ಳುವ ಪ್ರಯತ್ನ ಮಾಡಲಾಗಿತ್ತು. ಆನ್‌ಲೈನ್ ತರಗತಿಗಳು, ದೂರದರ್ಶನ ಮತ್ತು ರೇಡಿಯೊ ಪಾಠಗಳು, ವಿದ್ಯಾಗಮ ಇತ್ಯಾದಿಗಳ ಮೂಲಕ ಶಿಕ್ಷಣವನ್ನು ನೀಡಲಾಗುತ್ತಿತ್ತು. ಕೋವಿಡ್‌ನ ಮೂರನೇ ಅಲೆ ಯಾವಾಗ ಬೇಕಾದರೂ ಬರಬಹುದು ಎಂಬ ಅಂದಾಜು ಇರುವ ಕಾರಣ ಅಥವಾ ಕೋವಿಡ್‌ನ ಮೂರನೇ ಅಲೆ ಬಾರದೇ ಇದ್ದ ಸನ್ನಿವೇಶದಲ್ಲಿಯೂ ಈ ಹಿಂದೆ ನೀಡಲಾಗುತ್ತಿದ್ದ ದೂರಶಿಕ್ಷಣದ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸಿ, ಮುಂದುವರಿಸುವ ಅಗತ್ಯತೆ ಇದೆ. ವಿವಿಧ ಕಾರಣಗಳಿಂದ ಶಾಲೆಗಳಿಗೆ ಹಾಜರಾಗಲು ಸಾಧ್ಯವಾಗದ ಎಷ್ಟೋ ಮಕ್ಕಳಿಗೆ ಇದು ವರದಾನವಾಗಬಲ್ಲದು.

ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಡಿಜಿಟಲ್ ಸಾಧನಗಳಾದ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ಗಳ ಲಭ್ಯತೆಯನ್ನು ಖಾಸಗಿ ಕ್ಷೇತ್ರ ಹಾಗೂ ದಾನಿಗಳ ಸಹಕಾರದಿಂದ ಸಾಧ್ಯವಾಗಿಸುವುದು ಅಗತ್ಯವಾದ ಅಂಶವಾಗಿದೆ. ಇವೆಲ್ಲವುಗಳ ಜೊತೆ ಶಿಕ್ಷಕ ಮತ್ತು ವಿದ್ಯಾರ್ಥಿಯ ಮಧ್ಯೆ ಒಂದು ಉತ್ತಮ ಮಾನವೀಯ ಬಾಂಧವ್ಯ ಇದ್ದು, ವಿದ್ಯಾರ್ಥಿಯನ್ನು ಜ್ಞಾನದ ಬೆಳಕಿನೆಡೆಗೆ ಕೊಂಡೊಯ್ದು, ಅವನ ಜೀವನವನ್ನು ರೂಪಿಸುವುದು ಇಂದಿನ ತುರ್ತಾಗಿದೆ

Writer - ಡಾ. ಎಚ್.ಬಿ. ಚಂದ್ರಶೇಖರ್

contributor

Editor - ಡಾ. ಎಚ್.ಬಿ. ಚಂದ್ರಶೇಖರ್

contributor

Similar News