ಪೇಟೆಂಟ್ ಹಕ್ಕು ತಾತ್ಕಾಲಿಕ ಮನ್ನಾಕ್ಕೆ ಆಸ್ಪದ ನೀಡದ ಶ್ರೀಮಂತ ದೇಶಗಳ ವಿರುದ್ಧ ವಿಶ್ವಸಂಸ್ಥೆಗೆ ದೂರು

Update: 2021-11-29 16:52 GMT

ವಿಶ್ವಸಂಸ್ಥೆ, ನ.29: ಕೊರೋನದಂತಹ ಸರ್ವವ್ಯಾಪಿ ಸೋಂಕಿನ ಲಸಿಕೆಯನ್ನು ವಿಶ್ವದೆಲ್ಲೆಡೆ ತ್ವರಿತವಾಗಿ ಲಭ್ಯವಾಗಿಸುವುದನ್ನು ಖಾತರಿಪಡಿಸಲು ಪೇಟೆಂಟ್ ಹಕ್ಕನ್ನು ತಾತ್ಕಾಲಿಕವಾಗಿ ಮನ್ನಾ ಮಾಡುವ ಅಗತ್ಯವಿದೆ. ಆದರೆ ಇದನ್ನು ಯುರೋಪಿಯನ್ ಯೂನಿಯನ್, ಬ್ರಿಟನ್, ನಾರ್ವೆ, ಸ್ವಿಝರ್ಲ್ಯಾಂಡ್ ಮತ್ತು ಸಿಂಗಾಪುರ ದೇಶಗಳು ತಿರಸ್ಕರಿಸುವ ಮೂಲಕ ಮಾನವ ಹಕ್ಕು ಉಲ್ಲಂಘಿಸಿವೆ ಎಂದು 28 ದೇಶಗಳ 2.5 ಮಿಲಿಯನ್ ಆರೋಗ್ಯ ಕಾರ್ಯಕರ್ತರನ್ನು ಹೊಂದಿರುವ ನರ್ಸ್‌ಗಳ ಯೂನಿಯನ್ ವಿಶ್ವಸಂಸ್ಥೆಗೆ ದೂರು ನೀಡಿದೆ.

‘ಕೊರೋನ ಸೋಂಕಿಗೆ ಸಂಬಂಧಿಸಿದ ಪ್ರಕರಣಗಳು ವಿಶ್ವದ ಹಲವೆಡೆ ಉಲ್ಬಣಿಸಿದ್ದರೂ ಔಷಧ ಸಂಸ್ಥೆಗಳು ಹಾಗೂ ಸರಕಾರಗಳು ಸಾಂಕ್ರಾಮಿಕ ರೋಗ ನಿಯಂತ್ರಿಸಲು ಅಗತ್ಯವಿರುವ ನಿರ್ಣಾಯಕ ಚಿಕಿತ್ಸೆ ಮತ್ತು ಲಸಿಕೆಯನ್ನು ಸಮಾನವಾಗಿ ವಿತರಿಸಲು ವಿಫಲವಾಗಿವೆ’ ಎಂದು ವಿಶ್ವಸಂಸ್ಥೆಯ ದೈಹಿಕ, ಮಾನಸಿಕ ಆರೋಗ್ಯ ವಿಭಾಗದ ವಿಶೇಷ ಪ್ರತಿನಿಧಿ ಡಾ. ತಲೆಂಗ್ ಮೊಫೊಕೆಂಗ್‌ರಿಗೆ ಕಳುಹಿಸಿರುವ ದೂರಿನಲ್ಲಿ ಜಾಗತಿಕ ನರ್ಸ್‌ಗಳ ಒಕ್ಕೂಟ ಉಲ್ಲೇಖಿಸಿದೆ.

ವ್ಯಾಪಾರ ಸಂಬಂಧಿ ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತ ವಿಶ್ವವ್ಯಾಪಾರ ಸಂಸ್ಥೆಯ ಒಪ್ಪಂದದಡಿ(ಟ್ರಿಪ್ಟ್ ಒಪ್ಪಂದ) ಪೇಟೆಂಟ್ ಮನ್ನಾ ಮಾಡುವುದಕ್ಕೆ ನಿರಂತರ ವಿರೋಧಿಸಿರುವ ಈ ಐದು ದೇಶಗಳು ಸಾಂಕ್ರಾಮಿಕದ ಅವಧಿಯಲ್ಲಿ ಆದ ಅಪಾರ ಪ್ರಾಣಹಾನಿಗೆ ಜವಾಬ್ದಾರರು ಎಂದು ನರ್ಸ್‌ಗಳ ಯೂನಿಯನ್‌ನ ಸಂಘಟನೆ ಪ್ರತಿಪಾದಿಸಿದೆ. ಬಡ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಕೊರೋನ ಲಸಿಕೆಯ ಹಂಚಿಕೆ ಪ್ರಕ್ರಿಯೆಯ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಪೇಟೆಂಟ್ ಮನ್ನಾ ಮಾಡಬೇಕೆಂಬ ಪ್ರಸ್ತಾವನೆಯನ್ನು ಕಳೆದ ವರ್ಷ ನಡೆದ ವಿಶ್ವ ವ್ಯಾಪಾರ ಸಂಘಟನೆ ಸಭೆಯಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಂಡಿಸಿದ್ದವು. ಭಾರತವು ತನಗಾಗಿ ಮಾತ್ರವಲ್ಲ, ಇತರ ಅಭಿವೃದ್ಧಿಶೀಲ ದೇಶಗಳ ಪರವಾಗಿಯೂ ಧ್ವನಿ ಎತ್ತುತ್ತಿದೆ ಎಂದು ಭಾರತದ ಅಧಿಕಾರಿ ಹೇಳಿದ್ದಾರೆ.

ವಿಶ್ವದ ಜನಸಂಖ್ಯೆಯ 45%ಕ್ಕೂ ಅಧಿಕ ಮಂದಿ ಇನ್ನೂ ಕೋವಿಡ್-19ರ ವಿರುದ್ಧದ ಮೊದಲ ಲಸಿಕೆಯನ್ನೇ ಪಡೆದಿಲ್ಲ ಎಂದು ‘ಗ್ಲೋಬಲ್ ನರ್ಸಸ್ ಯುನೈಟೆಡ್’ ಹಾಗೂ ಪ್ರೋಗ್ರೆಸಿವ್ ಇಂಟರ್‌ನ್ಯಾಷನಲ್‌ನ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News